ಕಾರವಾರ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯಾದ್ಯಂತ ಏಪ್ರಿಲ್ 1 ರಿಂದ ಜೂನ್ 30 ರ ವರೆಗೆ ಸ್ತ್ರೀ ಚೇತನ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈ ಯೋಜನೆಯಡಿ ಮಹಿಳೆಯರಿಗಾಗಿ ವಿಶೇಷ ಸವಲತ್ತು ಮತ್ತು ಅವಕಾಶಗಳನ್ನು ನೀಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಅಭಿಯಾನದಲ್ಲಿ ಭಾಗವಹಿಸುವಂತೆ ಜಿಲ್ಲಾ ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ ಹೇಳಿದರು.
ಕಾರವಾರ ತಾಲೂಕಿನ ಆಮದಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೆ ನಂ. 329ರಲ್ಲಿ ಬಾಳೆಮಡ್ಡಿ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನಡೆದ ಸ್ತ್ರೀ ಚೇತನ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.
ಮನರೇಗಾ ಯೋಜನೆಯಡಿ ಮಹಿಳೆಯರಿಗೆ ಪುರುಷರಷ್ಟೇ ಸಮಾನ ವೇತನವನ್ನು ನೀಡುವುದಲ್ಲದೇ ಮಹಿಳೆಯರಿಗೆ ಪ್ರಥಮ ಆದ್ಯತೆಯಲ್ಲಿ ಕೆಲಸ ನೀಡಲಾಗುತ್ತಿದೆ. ಏಪ್ರಿಲ್ 01 ರಿಂದ ಅನ್ವಯವಾಗುವಂತೆ ಕೂಲಿ ಮೊತ್ತವನ್ನು ರೂ. 349 ರಿಂದ ರೂ. 370ಕ್ಕೆ ಹೆಚ್ಚಳ ಮಾಡಲಾಗಿದೆ. ಜೊತೆಗೆ ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಕಾರಣ ಕೂಲಿಕಾರರ ಆರೋಗ್ಯ ಹಿತದೃಷ್ಟಿಯಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೆಲಸದ ಪ್ರಮಾಣದಲ್ಲಿ 30% ರಿಯಾಯಿತಿ ಸಹ ನೀಡಲಾಗಿದೆ. ಶಿಶುಗಳ ಆರೈಕೆಗಾಗಿ ಕೂಸಿನ ಮನೆ ವ್ಯವಸ್ಥೆ ಮಾಡಲಾಗಿದೆ. ಗರ್ಭಿಣಿ ಮಹಿಳೆಯರು, ವಿಕಲ ಚೇತನರು ಹಾಗೂ ಹಿರಿಯ ನಾಗರಿಕರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ಇದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರ ಫಲಾನುಭವಿಗಳ ಖಾತೆಗೆ ಕೂಲಿ ಹಣ ಜಮೆ ಮಾಡುವ ಪಾರದರ್ಶಕ ವ್ಯವಸ್ಥೆ ಮಾಡಲಾಗಿದೆ. ಹೀಗೆ ಸಾಕಷ್ಟು ಸವಲತ್ತುಗಳ ಜೊತೆಗೆ ಎಂದಿನAತೆ ಕೂಲಿಕಾರರ ಬೇಡಿಕೆ ಅನುಸಾರ ಕೆಲಸ ನೀಡಲು ನಾವು ಸಿದ್ಧರಿದ್ದು, ಸಾರ್ವಜನಿಕರು ಬೇಸಿಗೆಯಲ್ಲಿ ವಲಸೆ ಹೋಗದೆ ಸ್ವಗ್ರಾಮದಲ್ಲಿಯೇ ಮನರೇಗಾ ಯೋಜನೆಯಡಿ ಉದ್ಯೋಗ ಪಡೆಯಬೇಕು. ಮಹಿಳೆಯರು ಸ್ತ್ರೀ ಚೇತನ ಅಭಿಯಾನದ ಲಾಭ ಪಡೆದುಕೊಳ್ಳಬೇಕು ಎಂದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತೃಪ್ತಿ ಆರ್. ನಾಯ್ಕ ಮಾತನಾಡಿ, ಕಳೆದ ಆರ್ಥಿಕ ವರ್ಷದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಿಲ್ಲಾ ಪಂಚಾಯತ್ ವತಿಯಿಂದ ನೀಡಿದ್ದ ಮಾನವ ದಿನ ಸೃಜನೆಯ ನಿಗದಿತ ಗುರಿ ಮುಟ್ಟಲು ಕಾರಣಾಂತರಗಳಿAದ ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಪ್ರತಿಶತ ಗುರಿ ಸಾಧಿಸಲು ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಪ್ರಸ್ತುತ ಶೇ. 51ರಷ್ಟು ಇರುವ ಮಹಿಳಾ ಭಾಗವಹಿಸುವಿಕೆ ಪ್ರಮಾಣವನ್ನು ಕನಿಷ್ಠ ಶೇ. 10ರಷ್ಟು ಹೆಚ್ಚಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಂಚಾಯತ್ ಸಿಬ್ಬಂದಿ ಸಂತೋಷ ಎಸ್ ಗೌಡ, ಬೀಟ್ ಫಾರೇಸ್ಟರ್ ರಾಜೇಶ್ ಎನ್. ನಾಯ್ಕ ಹಾಗೂ ಕೂಲಿಕಾರರು ಉಪಸ್ಥಿತರಿದ್ದರು.