ಕಾರವಾರ: ಪ್ರಸ್ತುತ ಬೇಸಿಗೆಗಾಲವಾದ್ದರಿಂದ ಜಿಲ್ಲೆಯ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದ್ದು, ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಅಭಾವ ಉಂಟಾಗದoತೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ಸೂಚನೆ ನೀಡಿದರು.
ಅವರು ಗುರುವಾರ ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆ ಹಾಗೂ ವಸತಿ ನಿಲಯಗಳಿಗೆ ಶುದ್ದ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುವುದನ್ನು ಖಾತರಿಪಡಿಸಿಕೊಂಡು ವರದಿ ನೀಡುವಂತೆ ಸಂಬoಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಅವರು, ನೀರಿನ ಅಭಾವ ಇರುವ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದ್ದು, ಗ್ರಾಮ ಪಂಚಾಯತ್ ಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸುವ ಮುನ್ನ ಪಿಡಿಓ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಸಮನ್ವಯ ಸಾಧಿಸಿ ಮಾಹಿತಿಯನ್ನು ಪಡೆದು ವರದಿ ಸಲ್ಲಿಸಬೇಕು. ಈ ವರದಿ ಆಧಾರದ ಮೇಲೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮೂಲಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ಕೆಲವು ಅಂಗನವಾಡಿ, ಶಾಲೆ ಹಾಗೂ ವಸತಿ ಶಾಲೆಗಳಿಗೆ ಸರ್ಮಪಕವಾಗಿ ಶುದ್ದ ಕುಡಿಯುವ ನೀರು ಪೂರೈಕೆಯಾಗದಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಈ ಕುರಿತಂತೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿ ಕುಡಿಯುವ ನೀರು ಪೂರೈಕೆ ಮಾಡಬೇಕು ಹಾಗೂ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸುವ ಕಾರ್ಯವನ್ನು ಮಾಡಬೇಕು ಎಂದ ಅವರು, ತಾಲೂಕು ಪಂಚಾಯತ್ ಇಒ ಹಾಗೂ ಪಿಡಿಒಗಳು ತಮ್ಮ ತಮ್ಮ ವ್ಯಾಪ್ತಿಯ ನೀರಿನ ಅಭಾವವಿರುವ ಸ್ಥಳಗಳ ಕ್ರೂಡಿಕೃತ ವರದಿಯನ್ನು ಸಲ್ಲಿಸಬೇಕು ಮತ್ತು ಅವಶ್ಯಕವಿರುವ ಹೊಸ ಬೋರ್‌ವೆಲ್‌ಗಳು, ಪೈಪ್ ಹಾಗೂ ರಿಚಾರ್ಚ್ ಪಿಟ್ ಗಳ ಬಗ್ಗೆ ಮಾಹಿತಿ ಒದಗಿಸುವಂತೆ ತಿಳಿಸಿದರು.
ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು ನಿಯಮಿತವಾಗಿ ಸಭೆಗಳನ್ನು ಮಾಡಿ, ನಡವಳಿ ಸಹಿತ ಅನುಪಾಲನಾ ವರದಿಯನ್ನು ನೀಡಬೇಕು ಹಾಗೂ ಕುಡಿಯುವ ನೀರು ಪೂರೈಕೆಯ ಮೂಲದ ನೀರಿನ ಗುಣಮಟ್ಟ ಬಗ್ಗೆ ಎಫ್‌ಟಿಕೆ ಕಿಟ್ ಮೂಲಕ ಪರೀಕ್ಷಿಸುವುದರ ಜತೆ ನೀರಿನ ಮಾದರಿಯನ್ನು ಜೈವಿಕ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಬೇಕು. ನೀರಿನ ಮಾದರಿ ಸಂಗ್ರಹಿಸುವ ಸಿಬ್ಬಂದಿಗಳು ಆಯ್ಕೆ ಮಾಡಿದ ಪ್ರದೇಶದ ನೀರಿನ ಮಾದರಿಯ ಜೊತೆ ಇತರೆ ಪ್ರದೇಶದ ನೀರಿನ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕು ಎಂದರು.
ಈಗಾಗಲೇ ಕೊರೆಯಲಾದ ಬೊರ್‌ವೆಲ್‌ಗಳ ನೀರಿನ ಮಟ್ಟದ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಸಂಬoಧಪಟ್ಟ ಅಧಿಕಾರಿಗಳು ಸಮನ್ವಯ ಸಾಧಿಸಿ ಮುಂಜಾಗೃತೆ ಕ್ರಮವಹಿಸಿ ಸಮರ್ಪಕ ನೀರನ್ನು ಪೂರೈಕೆ ಮಾಡುವುದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜನೀಯರ್ ಎನ್.ಡಿ ರಘುನಾಥ ಮಾತನಾಡಿ ಬೇಸಿಗೆ ಕಾಲದಲ್ಲಿ , ಜನರಿಗೆ ನೀರಿನ ಮಿತ ಬಳಕೆಯ ಕುರಿತಂತೆ ಜಾಗೃತಿ ಮೂಡಿಸಬೇಕು ಇದಕ್ಕಾಗಿ ವಿವಿಧ ಇಲಾಖೆಗಳ ಸಹಕಾರ ಅಗತ್ಯವಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಆಡಳಿತ) ನಾಗೇಶ್ ರಾಯ್ಕರ್, ಉಪ ಕಾರ್ಯದರ್ಶಿ (ಅಭಿವೃದ್ಧಿ) ಪ್ರಕಾಶ ಹಾಲಮ್ಮನವರ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಶಂಕರ್ ರಾವ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಉಮೇಶ, ಮತ್ತಿತರರು ಉಪಸ್ಥಿತರಿದ್ದರು.