ಮುಂಡಗೋಡ; ತಾಲ್ಲೂಕಿನ ಕಲಕೇರಿ ಗ್ರಾಮದ ಶಿವಾಜಿ ವೃತ್ತದಲ್ಲಿ ರವಿವಾರದಂದು ಗೋದುಳಿ ಮುಹೂರ್ತದಲ್ಲಿ ಕಲಕೇರಿ ಗ್ರಾಮದ ಯುವ ಮರಾಠ ಪರಿಷತ್, ಮುಂದಾಳತ್ವದಲ್ಲಿ, ತಾಲೂಕಿನ ಮರಾಠ ಸಮಾಜದ ಮುಖಂಡರ ಹಾಗೂ ಕಲಕೇರಿ, ಹೊನ್ನಿಕೊಪ್ಪ, ಅಂದಲಗಿ. ಗ್ರಾಮದ ಎಲ್ಲ ಸಮಾಜದ ಗುರು ಹಿರಿಯರ ಉಪಸ್ಥಿತಿಯಲ್ಲಿ ಹಿಂದೂ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಅಶ್ವಾರೂಢ ಮೂರ್ತಿಯನ್ನು ಲೋಕಾರ್ಪಣೆ ಮಾಡಲಾಯಿತು.
ಶಿವಾಜಿ ಮಹಾರಾಜರ ಮೂರ್ತಿ ಅನಾವರಣ ಕಾರ್ಯಕ್ರಮದ ನಿಮಿತ್ತ ನಡೆದ ಸಭಾ ಕಾರ್ಯಕ್ರಮವನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿ.ಎಸ್.ಪಾಟೀಲ್, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ್ರು. ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಧರ್ಮದ ಉಳುವಿಗಾಗಿ ಹೋರಾಡಿದವರು. ಅವರ ಆದರ್ಶ, ತತ್ವ ಸಿದ್ಧಾಂತಗಳನ್ನ ಹಿಂದೂ ಧರ್ಮದ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದುಷ್ಟ ಚಟಗಳಿಂದ ದೂರ ಇದ್ದು, ತಂದೆ ತಾಯಿಗಳಿಗೆ ಒಳ್ಳೆಯ ಮಕ್ಕಳಾಗಬೇಕು ಅವಾಗ ಮಾತ್ರ ಇಂತಹ ಮಹಾನ್ ಪುರುಷರ ಪುತ್ತಳಿ ಅನಾವರಣ ಮಾಡಿರುವುದಕ್ಕೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ನಂತರ ಮರಾಠ ಸಮಾಜದ ಹಿರಿಯ ಮುಖಂಡರಾದ ಎಲ್.ಟಿ.ಪಾಟೀಲ್, ಮಾತನಾಡಿ ಛತ್ರಪತಿ ಶಿವಾಜಿ ಮಹಾರಾಜರು ಅಪ್ರತಿಮ ದೇಶಭಕ್ತನಾಗಿದ್ದು, ತನ್ನ ಪರಾಕ್ರಮ ಹಾಗೂ ಶೌರ್ಯದಿಂದ ಮರಾಠ ಸಾಮಾಜ್ಯ ಸ್ಥಾಪಿಸಿ, ಜನಸಾಮಾನ್ಯರ ಚಕ್ರವರ್ತಿಯಾಗಿದ್ದರು. ಅವರ ಅದರ್ಶ ಮತ್ತು ತತ್ವ ಸಿದ್ಧಾಂತಗಳನ್ನು ಯುವ ಸಮುದಾಯ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು, ನಂತರ ಸಮಾಜದ ಯುವ ಮುಖಂಡರಾದ ಮಂಜುನಾಥ ಕೀರ್ತಪ್ಪನವರ ಮಾತನಾಡಿ ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು. ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು.ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿ. ಹಾಗಾಗಿ ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು. ಎಂದು ಶಿವಾಜಿ ಮಹಾರಾಜರ ಜೀವನ ಚರಿತ್ರೆ ಬಗ್ಗೆ ವಿಸ್ತಾರವಾಗಿ ಹೇಳಿದರು.
ಈ ವೇಳೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರವಿಗೌಡ ಪಾಟೀಲ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ, ಪಿ.ಎಲ್.ಡಿ, ಬ್ಯಾಂಕ ಅಧ್ಯಕ್ಷ ವೈ.ಪಿ.ಭುಜಂಗಿ, ತಾಲೂಕ ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ಚೇತನ್ ನಾಯ್ಕ್, ಮರಾಠ ಸಮಾಜದ ಮುಖಂಡರಾದ ಡಿ.ಎಫ್.ಮಡ್ಲಿ, ಲಕ್ಷ್ಮಣ್ ಬೆಂಡಿಗೇರಿ, ಸಿದ್ದಣ್ಣ ಕ್ಯಾತನಹಳ್ಳಿ, ನಾಗರಾಜ್ ಬೆಣ್ಣಿ, ನಾಗರಾಜ್ ಸಂಕನಾಳ, ಪ್ರವೀಣ್ ಡವಳೆ, ನಾರಾಯಣ ಗುರಪ್ಪನವರ, ಮಾರುತಿ ಬನವಾಸಿ, ನಾರಾಯಣ ಕ್ಯಾತನಹಳ್ಳಿ, ಕರಿಯಣ್ಣ ಪಾಟೀಲ್, ಮಂಜುನಾಥ್ ಬಿಸಗನ್ನವರ್, ಚಂದ್ರು ಉಗ್ಗಿನಕೇರಿ, ಸುನಿಲ್ ವಾಗು ಸಳಕೆ, ವಿಠ್ಠಲ ಬಾಳಂಬೀಡ, ಗಿರೀಶ್ ಓಣಿಕೇರಿ, ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಮಾಜದ ಬಾಂಧವರು, ಗ್ರಾಮಸ್ಥರು ಉಪಸ್ಥಿತರಿದ್ದರು.
ದಾನಿಗಳಿಗೆ ಸನ್ಮಾನ..!
ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಮೂರ್ತಿ ಪ್ರತಿಷ್ಠಾಪಿಸಲು ಸಹಾಯಸ್ತ ನೀಡಿದಂತಹ ದಾನಿಗಳನ್ನು, ಕಲಕೇರಿ ಗ್ರಾಮದ ಯುವ ಮರಾಠ ಪರಿಷತ್ ವತಿಯಿಂದ ಸಭೆಯಲ್ಲಿ ಕೇಸರಿ ಟೋಪಿ, ಶಾಲು ಹಾಕುವ ಮೂಲಕ ಶಿವಾಜಿ ಮಹಾರಾಜರ ಭಾವಚಿತ್ರವಿರುವ ಫೋಟೋವನ್ನ ಗೌರವ ಕಾಣಿಕೆ ನೀಡಿ ಸನ್ಮಾನಿಸಲಾಯಿತು,.
ಕಾರ್ಯಕ್ರಮದಲ್ಲಿ ಕಲಕೇರಿ ಗ್ರಾಮದ ಶಾಲಾ ಮಕ್ಕಳು ಪ್ರಾರ್ಥನಾ ಗೀತೆ ಹಾಡಿದರು. ಶಿಕ್ಷಕ ರಾಮ್ಮೂರ್ತಿ ಎರೆಬೈಲ್ ಮೊದಲಿಗೆ ಎಲ್ಲರನ್ನು ಸ್ವಾಗತಿಸಿದರು.ನಂತರ ಕಾರ್ಯಕ್ರಮದ ನಿರೂಪಣೆ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು.