ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಏಪ್ರಿಲ್ 1 ರಿಂದ ಜೂನ್ 30ರ ವರೆಗೆ ಸ್ತ್ರೀ ಚೇತನ ಎಂಬ ವಿಶೇಷ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿದೆ .

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಪ್ರಮಾಣ ಕನಿಷ್ಠ 55 ಪ್ರತಿಶತದಷ್ಟು ಇರಬೇಕೆಂಬ ನಿಯಮವಿದೆ. ಆದರೆ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ 2024-25ನೇ ಸಾಲಿನಲ್ಲಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಪ್ರಮಾಣ 52.41 ಪ್ರತಿಶತವಿದೆ. ಕೆಲವು ತಾಲೂಕುಗಳಲ್ಲಿ ಈ ಪ್ರಮಾಣ ಉತ್ತಮವಾಗಿದೆ ಆದರೂ ಕೆಲ ತಾಲೂಕುಗಳಲ್ಲಿ ಕಡಿಮೆ ಇರುವುದರಿಂದ ಜಿಲ್ಲೆಯ ಒಟ್ಟಾರೆ ಫಲಿತಾಂಶದಲ್ಲಿ ನಿರೀಕ್ಚಿತ ಮಟ್ಟದ ಗುರಿ ಸಾಧನೆ ಸಾಧ್ಯವಾಗಿರುವುದಿಲ್ಲ.

2025-26ನೇ ಸಾಲಿನಲ್ಲಿ ಮಹಿಳಾ ಭಾಗವಹಿಸುವಿಕೆ ಪ್ರಮಾಣ ವೃದ್ಧಿಸಲು ವರ್ಷಾರಂಭದಲ್ಲಿಯೇ ಅಭಿಯಾನ ರೂಪಿಸಲಾಗಿದೆ. 50 % ಕ್ಕಿಂತ ಕಡಿಮೆ ಮಹಿಳಾ ಭಾಗವಹಿಸುವಿಕೆ ಪ್ರಮಾಣ ಹೊಂದಿರುವ ತಾಲೂಕುಗಳು ಕನಿಷ್ಠ 10% ಹಾಗೂ 50% ಕ್ಕಿಂತ ಹೆಚ್ಚು ಮಹಿಳಾ ಭಾಗವಹಿಸುವಿಕೆ ಪ್ರಮಾಣ ಹೊಂದಿರುವ ತಾಲೂಕುಗಳು ಕನಿಷ್ಠ 5% ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮತ್ತು ಸದರಿ ಪ್ರಮಾಣವನ್ನು ವರ್ಷವಿಡಿ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ .

ಈ ಅಭಿಯಾನದ ವೇಳೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ತ್ರೀ ಚೇತನ ಅಭಿಯಾನದಡಿ ಮಹಿಳಾ ಕೂಲಿ ಕಾರ್ಮಿಕರಿಗೆ ಸಮಾನ ಅವಕಾಶ, ಸಮಾನ ಕೆಲಸ ಸಮಾನ ಕೂಲಿ, ಡಿಬಿಟಿ ವೇತನ ಪದ್ಧತಿ, ವೈಯಕ್ತಿಕ ಮತ್ತು ಸಮುದಾಯ ಸೌಲಭ್ಯಗಳು, ಗರ್ಭಿಣಿಯರು, ವಿಕಲ ಚೇತನರು ಮತ್ತು ಹಿರಿಯ ನಾಗರಿಗೆ ಕೆಲಸದಲ್ಲಿ ರಿಯಾಯತಿ, ಕಂದಮ್ಮಗಳ ಆರೈಕೆಗಾಗಿ ಕೂಸಿನ ಮನೆ, ಜೀವ ವಿಮೆ ಸೇರಿದಂತೆ ಹಲವು ಲಾಭದಾಯಕ ಅಂಶಗಳ ಕುರಿತು ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು. ಸಂಜೀವಿನಿ ಒಕ್ಕೂಟ, ಮಹಿಳಾ ಸ್ವ ಸಹಾಯ ಗುಂಪುಗಳೊoದಿಗೆ, ಕೂಲಿ ಕಾರ್ಮಿಕರೊಂದಿಗೆ ಸಭೆ, ಮಾಹಿತಿ ವಿನಿಮಯ ಕಾರ್ಯಕ್ರಮ, ಜಾಗೃತಿ ಜಾಥಾ ಸೇರಿದಂತೆ ಹಲವು ರೀತಿಯಲ್ಲಿ ವಿಷಯವನ್ನು ಜನಮನ ಮುಟ್ಟುವಂತೆ ಅಭಿಯಾನ ನಡೆಸಲಾಗುವುದು.

ಹಳ್ಳಿಗಳಲ್ಲಿ ಈಗಲೂ ಕೆಲಸ ನೀಡುವಾಗ, ಕೂಲಿ ನೀಡುವಾಗ ಗಂಡು ಹೆಣ್ಣು ಎಂಬ ಭೇದಭಾವ ಮಾಡುತ್ತಾರೆ. ಹೆಣ್ಣಿಗೆ ಸಮಾನ ಕೆಲಸ ಕಡಿಮೆ ವೇತನ ನೀಡುತ್ತಾರೆ. ಆದರೆ ಮನರೇಗಾ ಯೋಜನೆಯಡಿ ಸಮಾನ ಕೆಲಸಕ್ಕೆ ಸಮಾನ ಕೂಲಿ ನೀಡಲಾಗುತ್ತದೆ. ವೇತನ ಸಹ ಈಗ 370 ರೂ. ಹೆಚ್ಚಳವಾಗಿದೆ. ಮಹಿಳೆಯರು ಈ ಯೋಜನೆಯ ಮಹತ್ವ ಅರಿತು ಇದರ ಉಪಯೋಗ ಪಡೆಯಬೇಕು ಎನ್ನುತ್ತಾರೆ ಜಿಲ್ಲಾ ಪಂಚಾಯತ್‌ನ ಯೋಜನಾ ನಿರ್ದೇಶಕ ಕರೀಂ ಅಸದಿ..

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮಹಿಳಾ ಭಾಗವಹಿಸುವಿಕೆ ಶೇ. 10 ರಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮೂರು ತಿಂಗಳುಗಳ ಕಾಲ ಸ್ತ್ರೀ ಚೇತನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ಜನರ ಅದರಲ್ಲೂ ವಿಶೇಷವಾಗಿ ಮಹಿಳಾ ಸಬಲೀಕರಣಕ್ಕೆ ಸ್ಥಳೀಯವಾಗಿಯೇ ಉದ್ಯೋಗ ಅವಕಾಶ, ಗಂಡು ಹೆಣ್ಣಿಗೆ ಸಮಾನ ಕೆಲಸ – ಸಮಾನ ಕೂಲಿ, ಕೂಸಿನ ಮನೆ ಆರೈಕೆ ಕೇಂದ್ರ, ಗರ್ಭಿಣಿಯರಿಗೆ ಕೆಲಸದಲ್ಲಿ ರಿಯಾಯತಿ, ಮಹಿಳಾ ಕಾಯಕ ಬಂಧುಗಳಿಗೆ ಪ್ರೋತ್ಸಾಹಧನ ಸೇರಿದಂತೆ ಸಾಕಷ್ಟು ಅನುಕೂಲ ಮಾಡಿಕೊಡಲಾಗಿದ್ದು ಜಿಲ್ಲೆಯ ಮಹಿಳಾ ಕೂಲಿಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು.

ಈಶ್ವರ್ ಕಾಂದೂ,ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್. ಉತ್ತರ ಕನ್ನಡ

error: Content is protected !!