ಕಾರವಾರ: ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮ (ಪಿಎಂಎಫ್‌ಎಂಇ) ಯೋಜನೆಯು ಉತ್ತಮ ಯೋಜನೆಯಾಗಿದ್ದು, ಈ ಯೋಜನೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಮೂಲಕ ಯೋಜನೆಯ ಸೌಲಭ್ಯ ಪಡೆಯಲು ಹೆಚ್ಚಿನ ಅರ್ಜಿಗಳನ್ನು ಸಲ್ಲಿಸಲು ಜನರಿಗೆ ಅರಿವು ಮೂಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ನಿರ್ದೇಶನ ನೀಡಿದರು.

ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಅಗ್ರಣಿ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಬ್ಯಾಂಕ್‌ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಪಿಎಂಎಫ್‌ಎಂಇ ಯೋಜನೆಯಡಿ ಸೌಲಭ್ಯ ಪಡೆಯಲು ಕಡಿಮೆ ಪ್ರಮಾಣ ಅರ್ಜಿಗಳು ಬ್ಯಾಂಕ್‌ಗಳಿಗೆ ಸಲ್ಲಿಕೆಯಾಗಿದ್ದು, ಈ ಯೋಜನೆಯ ಸೌಲಭ್ಯ ಪಡೆಯಲು ಜನರಿಗೆ ಜಾಗೃತಿ ಮೂಡಿಸಬೇಕು. ಯೋಜನೆಯಡಿ ಕೇಂದ್ರ ಸರ್ಕಾರದಿಂದ ಶೇ. 35 ಮತ್ತು ರಾಜ್ಯ ಸರ್ಕಾರದಿಂದ ಶೇ.15 ಸೇರಿದಂತೆ ಶೇ.50 ರಷ್ಟು ಸಬ್ಸಿಡಿ ಸೌಲಭ್ಯವಿದ್ದು, ಇದರ ಪ್ರಯೋಜನವನ್ನು ಜಿಲ್ಲೆಯ ಜನತೆ ಪಡೆಯುವಂತಾಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಜಾಗೃತಿ ಮೂಡಿಸುವಂತೆ ತಿಳಿಸಿದರು.

ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಭಿಮಾ ಸುರಕ್ಷಾ ಯೋಜನೆಯ ಬಗ್ಗೆ ಗ್ರಾಹಕರಲ್ಲಿ ಹೆಚ್ಚಿನ ಅರಿವು ಮೂಡಿಸುವುದರ ಜೊತೆಗೆ ಇದರ ನೋಂದಣಿ ಸಂಖ್ಯೆಯನ್ನು ಹೆಚ್ಚಿಸಲು ಬ್ಯಾಂಕ್‌ಗಳಿಗೆ ಸೂಚಿಸಿದ ಅವರು, ನರೇಗಾ ಕಾರ್ಮಿಕರನ್ನು ಈ ಯೋಜನೆಗಳಡಿಯಲ್ಲಿ ನೋಂದಾಯಿಸಿ ಇದರ ಸೌಲಭ್ಯ ಕಾರ್ಮಿಕರಿಗೂ ದೊರೆಯುವಂತಾಗಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಿಗೆ ಸೂಚಿಸಿದರು.

ಪಿಎಂ ಜನಧನ ಯೋಜನೆಯಡಿ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಿಡಿಂಗ್ ಕಾರ್ಯದಲ್ಲಿ ನಿಗಧಿತ ಗುರಿ ಸಾಧಿಸುವಂತೆ ಹಾಗೂ ಸರ್ಕಾರದ ವಿವಿಧ ಯೋಜನೆಗಳಾದ ಪಿಎಂ ಸ್ವನಿಧಿ, ಪಿಎಂ ಉದ್ಯೋಗ ಸೃಜನಾ ಯೋಜನೆ (ಪಿಎಂಇಜಿಪಿ), ಪಿಎಂಎಫ್‌ಎAಇ, ಯೋಜನೆಗಳ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಮೂಲಕ ಸರ್ಕಾರದ ಯೋಜನೆಗಳ ಸೌಲಭ್ಯ ಅರ್ಹರಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.

ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಭಾರತಿ ವಸಂತ ಮಾತನಾಡಿ 2025ರ ಫೆಬ್ರವರಿ ಅಂತ್ಯದವರೆಗೆ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆಯಡಿ 2,64,543 ಮಂದಿಯನ್ನು ನೋಂದಣಿ ಮಾಡಲಾಗಿದೆ. ಪ್ರಧಾನ ಮಂತ್ರಿ ಭಿಮಾ ಸುರಕ್ಷಾ ಯೋಜನೆಯಡಿ 6,84,492 ಮಂದಿ ಹಾಗೂ ಅಟಲ್ ಪಿಂಚಣಿ ಯೋಜನೆಯಡಿ 1,02,765 ಮಂದಿಯನ್ನು ನೋಂದಣಿ ಮಾಡಲಾಗಿದೆ. ಡಿಸೆಂಬರ್ 2024ರ ಅಂತ್ಯಕ್ಕೆ ಜಿಲ್ಲೆಯಲ್ಲಿ 23,406 ಕೋಟಿ ಠೇವಣಿ ಸಂಗ್ರಹಿಸಿ, 10,943 ಕೋಟಿ ಸಾಲ ವಿತರಿಸಲಾಗಿದ್ದು, ಸಾಲ ಮತ್ತು ಠೇವಣಿ ಅನುಪಾತ ಶೇ.46.75 ರಷ್ಟಿದ್ದು, ಕಳೆದ ಬಾರಿಗಿಂತ ಶೇ.0.42 ರಷ್ಟು ಹೆಚ್ಚಾಗಿದೆ ಎಂದರು.

ಸಭೆಯಲ್ಲಿ ಆರ್.ಬಿ.ಐ ಪ್ರತಿನಿಧಿ ಶೀಲಪ್ರಿಯಾ ಗೌತಮ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಕರೀಂ ಅಸದಿ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್, ನಬಾರ್ಡ್ ಡಿಡಿಎಂ ಸುಶೀಲ್ ನಾಯ್ಕ ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರು, ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

error: Content is protected !!