ಮುಂಡಗೋಡ ತಾಲೂಕಿನಲ್ಲಿ ಸದ್ಯ SSLC ಪರೀಕ್ಷೆಯ ಸಲುವಾಗಿ ಇಡೀ ಶಿಕ್ಷಣ ಇಲಾಖೆಯೇ ತಲೆ ಕೆಡಿಸಿಕೊಂಡು 100% ಫಲಿತಾಂಶ ತರಲೇ ಬೇಕು ಅಂತಾ ಹಗಲಿರುಳು ಶ್ರಮಿಸುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಇಡೀ ಪ್ರೌಢಶಾಲಾ ವಿಭಾಗದ ಶಿಕ್ಷಕ ವೃಂದ ಕಣ್ಣಿಗೆ ಎಣ್ಣೆಬಿಟ್ಟು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ರೆಡಿ ಮಾಡ್ತಿದಾರೆ. ಸತ್ಯ ಅಂದ್ರೆ ನಮ್ಮ ಮುಂಡಗೋಡಿಗೆ ನೂತನವಾಗಿ ಬಂದಿರೋ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಜಕ್ಕೂ ನಮ್ಮ ಪಾಲಿನ ಹೆಮ್ಮೆ. ಪ್ರಬುದ್ದ ತೆಯ ಸಾಕಾರ ಮೂರ್ತಿ..! ಆದ್ರೆ, ಇದೇಲ್ಲದರ ನಡುವೆಯೂ ಕೆಲವ್ರು “ತಾವು ನಡೆದದ್ದೇ ದಾರಿ” ಅನ್ನೋ ರೀತಿಯಲ್ಲಿದ್ದಾರೆನೋ ಅನ್ನೋ ಅನುಮಾನ ಮೂಡಿದೆ. ಯಾಕಂದ್ರೆ…?
“ಫೈನಾನ್ಸ್” ಗೆ ರಿಬ್ಬನ್ ಕಟ್..!
ಅಸಲು, ಮುಂಡಗೋಡ ತಾಲೂಕಿನ ಇಡೀ ಶಿಕ್ಷಕ ವೃಂದವೇ ಪರೀಕ್ಷಾ ತಯಾರಿಯಲ್ಲಿ ಬ್ಯುಸಿಯಾಗಿದ್ದರೆ, ಇಲ್ಲಿನ ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿಗಳು ಮಾತ್ರ, ಖಾಸಗಿ ಗೋಲ್ಡ್ ಲೋನ್ ಫೈನಾನ್ಸ್ ನ ಉದ್ಘಾಟನೆಯಲ್ಲಿ ಬ್ಯುಸಿಯಾಗಿದ್ದರು. ಬೆಳಿಗ್ಗೆಯಿಂದಲೇ ತಮ್ಮ ಮತ್ತೋರ್ವ ಶಿಕ್ಷಕರನ್ನು ಜೊತೆಗೆ ಕರೆದುಕೊಂಡು ಬಂದು ನೂತನ ಖಾಸಗಿ ಫೈನಾನ್ಸ್ ನ ಉದ್ಘಾಟನೆಯ ರಿಬ್ಬನ್ ಕಟ್ ಮಾಡಿದ್ದಾರೆ. ಮಂಗಳವಾರ ಬೆಳಿಗ್ಗೆ 11.30 ನಿಮಿಷಕ್ಕೆ ನಡೆದಿದ್ದ ಈ ಖಾಸಗಿ ಕಾರ್ಯಕ್ರಮಕ್ಕೆ ಸಾಹೇಬ್ರು ತಾಸಿಗೆ ಮೊದಲೇ ಬಂದು ಕುಳಿತಿದ್ರಂತೆ. ಹೀಗಾಗಿ, ಆ ಫೈನಾನ್ಸ್‌ನ ಅಧಿಕಾರಿಗಳಿಗೆ ಹೊಟ್ಟೆ ಹಿಡಿಸಲಾರದಷ್ಟು ಖುಷಿ, ಸಂಭ್ರಮ ತಂದುಕೊಟ್ಟಿದ್ದಾರೆ. ಅಲ್ದೆ ಆಮಂತ್ರಣ ಪತ್ರಿಕೆಯಲ್ಲಿ ಸಾಹೇಬ್ರ ಹೆಸರು ಮುದ್ರಿಸಿ ಊರ ತುಂಬ ಹಂಚಿದ್ದಾರೆ. ಹೀಗಾಗಿ, ಬಲು ಸಂಭ್ರಮದಿಂದಲೇ ನೂತನ ಗೋಲ್ಡ್ ಲೋನ್ ಶಾಖೆಯ ಉದ್ಘಾಟನೆ ಶಿಕ್ಷಣ ಅಧಿಕಾರಿಯ ಅಮೃತ ಹಸ್ತದಿಂದ ಸರ್ಕಾರಿ ಕೆಲಸದ ಟೈಮಲ್ಲೇ ವಿದ್ಯುಕ್ತವಾಗಿ ನಡೆದು ಹೋಗಿದೆ.
ಶಿಕ್ಷಣಕ್ಕೂ, ಫೈನಾನ್ಸಿಗೂ ಎತ್ತಣ ಸಂಬಂಧವಯ್ಯ..?
ಈ ಪ್ರಶ್ನೆ ನಿಜಕ್ಕೂ ಬೆಕ್ಕಸ ಬೆರಗೂ ಮೂಡಿಸಿದೆ. ಯಾಕಂದ್ರೆ, ತಾಲೂಕಿನ ಜವಾಬ್ದಾರಿಯುತ ಸ್ಥಾನದಲ್ಲಿ ಕೂತಿರೋ ಅಧಿಕಾರಿಗಳು, ಸರ್ಕಾರದ ಕೆಲಸದ ಸಮಯದಲ್ಲಿ, ಯಾವುದೇ ರಜೆ ಪಡಿಯದೇ ಹೀಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾ..? ಅಷ್ಟಕ್ಕೂ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮವಾದ್ರೆ ಒಪ್ಪಿಕೊಳ್ಳೋಣ, ಆದ್ರೆ, ಅದ್ಯಾರದ್ದೋ ಖಾಸಗಿ ಫೈನಾನ್ಸ್ ನ ಕಚೇರಿಯ ರಿಬ್ಬನ್ ಕಟ್ ಮಾಡಲು ಸರ್ಕಾರದ ಕೆಲಸ ಬಿಟ್ಟು ಹೋಗಿದ್ದು ಎಷ್ಟು ಸರಿ..? ಹಾಗಿದ್ರೆ ನಮ್ಮ ಜಿಲ್ಲೆಯ ಶಿಕ್ಷಣ ಇಲಾಖೆಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲವೇ ಇಲ್ಲವಾ..? ಹಾಗಿದ್ರೆ, ಅವ್ರಿಗೆ ಆ ಖಾಸಗಿ ಫೈನಾನ್ಸ್ ನ ಕಾರ್ಯಕ್ರಮಕ್ಕೆ ಹೋಗಲು ಅನುಮತಿ ಕೊಟ್ಟವರು ಯಾರು..? ಇಷ್ಟೇಲ್ಲ ಪ್ರಶ್ನೆಗಳನ್ನ ಕೇಳ್ತಿದಾರೆ ತಾಲೂಕಿನ ಮಂದಿ.
ರಜೆ ಹಾಕಿ ಹೋಗಿದ್ರಾ..?
ಅಸಲು, ಸರ್ಕಾರದ ಸೇವೆಯಲ್ಲಿರೋರು ಯಾವುದೇ ಖಾಸಗಿ ಕಾರ್ಯಕ್ರಮದಲ್ಲಿ ಕರ್ತವ್ಯದ ಅವಧಿಯಲ್ಲಿ ಭಾಗವಹಿಸುವಂತಿಲ್ಲ. ಇದು ಎಲ್ಲರಿಗೂ ತಿಳಿದ ವಿಷಯ. ಹಾಗೊಂದು ವೇಳೆ ಭಾಗವಹಿಸಲೇ ಬೇಕು ಅಂತಾದ್ರೆ ತಾವು ರಜೆ ಪಡೆದು ಭಾಗವಹಿಸಬಹುದು. ಆದ್ರೆ ಇವತ್ತು ನಡೆದ ಕಾರ್ಯಕ್ರಮದಲ್ಲಿ ಸನ್ಮಾನ್ಯ ಕ್ಷೇತ್ರ ಸಮನ್ವಯಾಧಿಕಾರಿ ಆಗಿರೋ ಡಾ. ರಮೇಶ್ ಅಂಬಿಗೇರ ಸಾಹೇಬ್ರು, ಖಾಸಗಿ ಗೋಲ್ಡ್ ಲೋನ್ ಫೈನಾನ್ಸಿನ ಶಾಖೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಲ್ವಾ..? ಹಾಗಿದ್ರೆ ರಜೆ ಪಡೆದು ಹೋಗಿದ್ರಾ..? ಹಾಗೆ ರಜೆ ಪಡೆದು ಹೋಗಿದ್ದರೆ ಖಂಡಿತ ನಮ್ಮದೇನೂ ಅಭ್ಯಂತರವಿಲ್ಲ. ಆದ್ರೆ, ಸರ್ಕಾರಿ ಕೆಲಸದ ಅವಧಿಯಲ್ಲಿ ಹಾಗೆ ಖಾಸಗಿ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಹೋಗಿದ್ದು ಎಷ್ಟು ಸರಿ..? ಇದೇ ಈಗಿರೊ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಒಂದು ವೇಳೆ ರಜೆ ಪಡೆಯದೇ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೆ ಅವ್ರ ಮೇಲೆ ಏನು ಕ್ರಮ..? ಈ ಪ್ರಶ್ನೆಗೆ ಇಲಾಖೆಯ ಹಿರಿಯ ಅಧಿಕಾರಿಗಳು ಉತ್ತರಿಸಬೇಕಿದೆ.
ಬಿಇಓ ಸುಮಾ ಮೇಡಂ ಹೇಳಿದ್ದಿಷ್ಟು..!
ಸರ್ಕಾರದ ಕೆಲಸದ ಅವಧಿಯಲ್ಲಿ ಸರ್ಕಾರಿ ಅಧಿಕಾರಿ ಖಾಸಗಿ ಕಾರ್ಯಕ್ರಮಕ್ಕೆ ಹೋಗಿದ್ದು ಖಂಡಿತ ತಪ್ಪು, ಅದೂ ಕೂಡ ಫೈನಾನ್ಸ್ ಕಂಪನಿಯ ಉದ್ಘಾಟನೆಗೆ ಹೋಗಿದ್ದು ಸರಿಯಲ್ಲ. ಕ್ಷೇತ್ರ ಸಮನ್ವಯಾಧಿಕಾರಿ ಡಾ. ರಮೇಶ್ ಅಂಬಿಗೇರ ಇವತ್ತು ರಜೆ ಪಡೆದಿಲ್ಲ. ಆದ್ರೆ ಎಲ್ಲಿ ಹೋಗಿದ್ದಾರೆ ಅಂತಾ ನಂಗೂ ಗೊತ್ತಿಲ್ಲ. ಖಂಡಿತ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ತಿನಿ..