ಮುಂಡಗೋಡ ತಾಲೂಕಿನಲ್ಲೂ ಗೋಕಳ್ಳರು, ದನಗಳ್ಳರು ಬಂದಿದ್ದಾರಾ..? ಇಂತಹದ್ದೊಂದು ಅನುಮಾನ ಅಗಡಿ ಗ್ರಾಮದಲ್ಲಿ ನಿನ್ನೆ ಶನಿವಾರ ರಾತ್ರಿ ನಡೆದ ಘಟನೆಯಿಂದ ಆತಂಕಮೂಡಿಸಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಲಕ್ಷ ಬೆಲೆ ಬಾಳುವ ಜೋಡೆತ್ತುಗಳನ್ನೇ ಖದೀಮರು ಕದ್ದು ಹೋಗಿದ್ದಾರೆ ಅನ್ನೊ ಮಾಹಿತಿ ಬಂದಿದೆ.
ಅಗಡಿ ಗ್ರಾಮದ ನಿಂಗಪ್ಪ ಫಕ್ಕೀರಪ್ಪ ಗಳಗಿ ಎಂಬುವವರಿಗೆ ಸೇರಿದ ಎರಡು ಎತ್ತುಗಳನ್ನು ಶನಿವಾರ ರಾತ್ರಿ ಕಳ್ಳರು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ. ರಾತ್ರಿ ಮೇವು ಹಾಕಿ ನೀರು ಕುಡಿಸಿ, ಕೊಟ್ಟಿಗೆಯಲ್ಲಿ ಕಟ್ಟಿದ್ದ ರೈತ ನಿಂಗಪ್ಪ ಮನೆಯಲ್ಲಿ ಮಲಗಿದ್ದ. ಇದೇ ಹೊತ್ತಲ್ಲಿ, ತಡರಾತ್ರಿ ದಾಳಿ ಇಟ್ಟಿರೋ ಕಳ್ಳರು ಎರಡೂ ಎತ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ ಅನ್ನೊ ಅನುಮಾನ ಮೂಡಿದೆ. ಸ್ಥಳದಲ್ಲಿ ಯಾವುದೋ ಒಂದು ವಾಹನದ ಟೈಯರ್ ಗುರುತುಗಳು ಇದ್ದು ಬಹುಶಃ ಟಾಟಾ ಎಸ್ ಅಥವಾ ಬೊಲೆರೋ ವಾಹನದಲ್ಲಿ ಎತ್ತುಗಳನ್ನು ಸಾಗಿಸಲಾಗಿದೆ ಅನ್ನೋ ಸಂಶಯ ಮೂಡಿದೆ.
ಮದ್ಯದಂಗಡಿಗೆ ಬಂದು ಸ್ಕೆಚ್ ಹಾಕಿದ್ರಾ..?
ಅಸಲು, ಈ ಎತ್ತುಗಳನ್ನು ಕಳ್ಳತನ ಮಾಡಿರೋದರ ಹಿಂದೆ ಬಹುತೇಕ ಪರಿಚಯದವರ ಕೈವಾಡ ಅಥವಾ ಆ ಸ್ಥಳದ ಮಾಹಿತಿ ಇದ್ದವರ ಕೈವಾಡ ಇದೆ ಎನ್ನಲಾಗಿದೆ. ಈ ಕೊಟ್ಟಿಗೆಯ ಹತ್ತಿರವೇ ಒಂದು ಅಧಿಕೃತವೋ ಅನಧೀಕೃತವೊ ಗೊತ್ತಿಲ್ಲ ಕುಡುಕರ ಸಾಮ್ರಾಜ್ಯದ “ಮದ್ಯದ ಅಂಗಡಿ” ಇದೆ. ಹೀಗಾಗಿ, ಬಹುಶಃ ಇಲ್ಲಿ ಸರಾಯಿ ಕುಡಿಯುವ ನೆಪದಲ್ಲಿ ಬಂದು ಎತ್ತುಗಳ ಕಳ್ಳತನಕ್ಕೆ ಸ್ಕೆಚ್ ಹಾಕಿದ್ರಾ..? ಇನ್ನಷ್ಟೆ ತಿಳಿದು ಬರಬೇಕಿದೆ.
ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ತಕ್ಷಣವೇ ದನಗಳ್ಳರ ಜಾಡು ಹಿಡಿಯಬೇಕಿದೆ.