ಮುಂಡಗೋಡ ತಾಲೂಕಿನ ಮೈನಳ್ಳಿ ಗ್ರಾಮ ಪಂಚಾಯತದ ಕಳಕಿಕಾರೆ ಮಜಿರೆಯಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಬಹುತೇಕ ಇಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಸಂಕಟ ಒಂದೆಡೆಯಾದ್ರೆ, ಗ್ರಾಮಸ್ಥರಿಗೆ ನೀರು ಪೂರೈಸಲು ಮೈನಳ್ಳಿ ಗ್ರಾಮ ಪಂಚಾಯತಿ ಅಧಿಕಾರಿಗಳು ಪರದಾಡುವ ಸ್ಥಿತಿಯಲ್ಲಿದ್ದಾರೆ. ಕಳೆದ ಒಂದು ವಾರದಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.
ಅಂದಹಾಗೆ, ಮೈನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಕೀಕಾರೆಯಲ್ಲಿ RWS ಇಲಾಖೆಯಿಂದ ಬೋರ್ವೆಲ್ ಕೊರೆದಿದ್ದಾರೆ. ಆದ್ರೆ, ಜೀವಜಲ ಮಾತ್ರ ಸಿಕ್ಕೇ ಇಲ್ಲ. ಹೀಗಾಗಿ, ಇಲ್ಲಿನ ಜನ್ರಿಗೆ ಕುಡಿಯುವ ನೀರು ಅನ್ನೋದು ನಿತ್ಯದ ಪರದಾಟವಾಗಿದೆ.
ಈ ಕಾರಣಕ್ಕಾಗೇ, ಕಳೆದ ಎಂಟು ದಿನಗಳಿಂದ ಟ್ಯಾಂಕರ್ ಮೂಲಕ ಗ್ರಾಪಂ ನೀರು ಪೂರೈಸುತ್ತಿದೆ. ಆದ್ರೆ ಇದೇಲ್ಲ ಎಷ್ಟು ದಿನ..? ಇದೇ ರೀತಿ ಆದ್ರೆ, ನೀರು ಪೂರೈಸಲು ಬೇಕಾದ ಆರ್ಥಿಕ ವ್ಯವಸ್ಥೆ ಇಲ್ಲದೆ, ಗ್ರಾಪಂ ಅಧಿಕಾರಿಗಳಿಗೆ ಕಷ್ಟವಾಗಬಹುದು. ಹೀಗಾಗಿ, ಜಿಲ್ಲಾಡಳಿತ ಈ ಕಡೆ ಒಂದಿಷ್ಟು ಗಮನ ಹರಿಸೋದು ಅವಶ್ಯವಿದೆ.