*ವರದಿ: ಶಂಕರ್ ಕ್ಷತ್ರೀಯ, ಆರಕ್ಷಕ
ಬರಗುಡಿ: ವಿಜಯಪುರ ಜಿಲ್ಲೆಯ ಭೀಮಾತೀರದ ಪ್ರಸಿದ್ಧ ಬರಗುಡಿ ಗ್ರಾಮದ ಅಧಿ ದೇವತೆಯ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 21ರಂದು ಭೀಮಾ ನದಿ ತಪ್ಪಲಿನ ಬರಗುಡಿಯಲ್ಲಿ ಲಕ್ಷ್ಮಿ ದೇವಿಯ ಸಂಭ್ರಮ, ಸಡಗರ, ಮದ್ದು ಸಿಡಿಲು ಪಟಾಕೆ ಅಗೋಚರ ನೀಲ ಪರದೆ,ತಮಟೆ ಸದ್ದು, ಪೋತ -ರಾಜರ ನರ್ತನ, ಮೈ ಜುಮ್ಮು ಎನಿಸುವ ಬಾರಕೊಲಿನ ಹೊಡೆತ. ಹೀಗೆ ಖುಷಿ ಕೊಡುವ ಗೆಳೆಯ, ಸಹದ್ಯೋಗಿಗಳು, ನೆಂಟರು ಈ ಜಾತ್ರೆಯ ಸೊಬಗು.
ಲಕ್ಷ್ಮಿದೇವಿ ಜಾತ್ರೆ, ಗ್ರಾಮದಲ್ಲಿ ಒಂದು ಪ್ರಮುಖ ಪರಂಪರೆ. ಸಾಮಾನ್ಯವಾಗಿ ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಒಂದುಗೂಡುವಿಕೆಯನ್ನು ಜಾತ್ರೆ ಎಂದು ಹೇಳಬಹುದು.
ಪ್ರತಿ ವರ್ಷಗಳಿಗೊಮ್ಮೆ ಸರ್ವತ್ರ ಸುಭಿಕ್ಷಾರ್ಥವಾಗಿ ಧಾರ್ಮಿಕ ಪರಂಪರೆಯಂತೆ ಪೂಜಾ-ಉತ್ಸವಗಳಿಂದೊಡಗೂಡಿದ ಶ್ರೀ ಲಕ್ಷ್ಮಿ ಜಾತ್ರೆಯನ್ನು ಅತೀ ವಿಜ್ರಂಭಣೆಯಿಂದ ನಡೆಸಲಾಗುತ್ತದೆ. ಇದು ಭೀಮಾ ನದಿ ದಡ ದಲ್ಲಿಯೇ ಅತೀದೊಡ್ಡ ಜಾತ್ರೆ, ಈ ಜಾತ್ರೆಗೆ ನಗರ ಹಳ್ಳಿ ಮೂಲೆ ಮೂಲೆಗಳಿಂದ ಭಕ್ತಸಾಗರ ಹರಿದು ಬರುತ್ತಾರೆ. ಅನೇಕಾನೇಕ ಮನರಂಜನಾ ಕಾರ್ಯಕ್ರಮಗಳು, ಜಾನಪದ ಲಡ್ಡು ಬಾರಕೋಲಿನ ಪ್ರದರ್ಶನಗಳು, ರಸ್ತೆಯ ಬದಿಗಳಲ್ಲಿ ಬಗೆ ಬಗೆಯ ಅಂಗಡಿ ಮುಗ್ಗಟ್ಟುಗಳು, ಝಗ ಝಗಿಸುವ ದೀಪದ ಅಲಂಕಾರಗಳು ಜಾತ್ರೆಯ ಸೊಬಗನ್ನು ಹೆಚ್ಚಿಸುತ್ತಿವೆ.
ಎಲ್ಲೋ ಹೋದ ಬಾಲ ಗೆಳೆಯ ಗೆಳತಿಯರ, ಸ್ನೇಹ ಬಳಗ, ಸಂಬಂದಿಕರು,ಇಲ್ಲಿ ಮತ್ತೆ ಒಂದಾಗುವ ಮಹತ್ವದ ಘಟ್ಟ, ಸಂಭ್ರಮದ ಖುಷಿ ಕೊಡುವ ಹೃದಯ ಶ್ರೀಮಂತಿಕೆಯ ಘಳಿಗೆ.
ಜಾತಿ ಭೇದ ಎನ್ನದೆ, ಕುಲವೂ ಒಂದಾಗಿ, ಮತವೂ ಒಂದಾಗಿ, ಮಾನವ ನಾವುಗಳು ಎಂಬುವ ಸಾರುವ ಹಬ್ಬ
ಲಕ್ಷ್ಮಿ ದೇವಿಯ ಹಬ್ಬ. ಇಲ್ಲಿ ಎಲ್ಲವೂ ಮಹತ್ವ ಪಡೆದಿದೆ,
ಬನ್ನಿ ನಾವು ಮತ್ತೆ ಸಾರಿ ಸಾರಿ ಹೇಳೋಣ, ಒಂದೇ ಊರಿನ ಹೆಮ್ಮೆಯ ಬರಗುಡಿಗರು.