ಮೌನಿ ಅಮವಾಸ್ಯೆ ದಿನ ಪ್ರಯಾಗರಾಜ್ ಕುಂಭಮೇಳದ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಹೋಗಿದ್ದ ನಾಲ್ವರು ಕನ್ನಡಿಗರು ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಬೆಳಗಾವಿ ನಗರದಿಂದ 30 ಜನರ ತಂಡ ಕುಂಭಮೇಳಕ್ಕೆ ಹೋಗಿದ್ದರು. ಐತಿಹಾಸಿಕ ಪುಣ್ಯಸ್ನಾನಕ್ಕೆ ಹೋದವರೀಗ ಹೆಣವಾಗಿದ್ದು ಈವರೆಗೂ ಜಿಲ್ಲಾಡಳಿತದಿಂದ ಅಧಿಕೃತವಾಗಿ ಸಾವಿನ ಖಚಿತತೆಯನ್ನು ದೃಢಪಡಿಸಲಿಲ್ಲ. ಆದ್ರೆ ಮೃತರೊಂದಿಗೆ ಹೋಗಿದ್ದವರು ಕೊಟ್ಟ ಮಾಹಿತಿ ಕುಟುಂಬಸ್ಥರಿಗೆ ಬರ ಸಿಡಿಲು ಬಡಿದಂತಾಗಿದೆ. ಸಾವಿಗಿಡಾದ ಕುಟುಂಬಸ್ಥರ ಮನೆಗೆ ಸ್ಥಳೀಯ ಶಾಸಕರು ಭೇಟಿ ನೀಡಿ ಸಾಂತ್ವನ ಹೇಳಿದ್ದು, ಮೃತದೇಹವನ್ನ ಬೆಳಗಾವಿಗೆ ಕರೆ ತರಲು ಉತ್ತರ ಪ್ರದೇಶ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾ ಕುಂಭಮೇಳದಲ್ಲಿ ಮೌನಿ ಅಮವಾಸ್ಯೆ ದಿನವೇ ಪುಣ್ಯಸ್ನಾನಕ್ಕೆ ಹೋಗಿದ್ದ ನಾಲ್ವರು ಕನ್ನಡಿಗರು ಸಾವನ್ನಪ್ಪಿದ್ದಾರೆ. ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿದಲ್ಲಿ ಕುಂದಾನಗರಿ ಬೆಳಗಾವಿಯ ನಾಲ್ವರು ದಾರುಣ ಸಾವು ಕಂಡಿದ್ದಾರೆ. ಕಳೆದ ಭಾನುವಾರ ಬೆಳಗಾವಿಯಿಂದ ಪ್ರಯಾಗರಾಜ್ ಕ್ಕೆ 30 ಜನರ ತಂಡ ಪ್ರಯಾಣ ಬೆಳೆಸಿತ್ತು. ಇದರಲ್ಲಿ ಬೆಳಗಾವಿಯ ವಡವಾಗಿಯ ನಿವಾಸಿಗಳಾದ ತಾಯಿ ಜ್ಯೋತಿ ಹತ್ತರವಾಠ, ಮಗಳು ಮೇಘನಾ ಹತ್ತರವಾಠ ಮೃತಪಟ್ಟಿದ್ದಾರೆ. ಅತ್ತ ಬೆಳಗಾವಿ ಶೆಟ್ಟಿ ಗಲ್ಲಿ ನಿವಾಸಿ ಅರುಣ ಕೋರ್ಪಡೆ ಮತ್ತು ಶಿವಾಜಿ ನಗರದ ನಿವಾಸಿ ಮಾಧುರಿ ಊರ್ಫ ಮಹಾದೇವಿ ಬಾವನೂರು ಅಸುನೀಗಿದ್ದಾರೆ.

ನಿನ್ನೆ ಮಧ್ಯರಾತ್ರಿಯೇ ಪ್ರಯಾಗರಾಜದ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಇವೆರಲ್ಲರೂ ಒಟ್ಟಾಗಿ ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಅರುಣ ಪತ್ನಿ ಕಾಂಚನಾ ಫೇಸ್ಬುಕ್ ಲೈವ್ ನಲ್ಲಿ ಜನದಟ್ಟಣೆ ಬಗ್ಗೆ ಬಿಚ್ಚಿಟ್ಟಿದ್ದರು. ಅಲ್ಲದೇ ಕರ್ನಾಟಕದಿಂದ ಬರೋರು ಹುಶ್ಯಾರಾಗಿ ಬನ್ನಿ ಅಂತಾ ಎಚ್ಚರಿಕೆ ಕೊಟ್ಟಿದ್ದರು. ಕಾಲ್ತುಳಿದಲ್ಲಿ ಈ 30 ಜನರ ಗುಂಪು ಚೆಲ್ಲಾಪಿಲ್ಲಿಯಾಗಿದೆ. ಆಗ ಗಂಭೀರವಾಗಿ ಗಾಯಕೊಂಡಿದ್ದ ಜ್ಯೋತಿ, ಮೇಘನಾ, ಅರಣು ಮತ್ತು ಮಹಾದೇವಿಯನ್ನ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದಾರೆ. ಆದ್ರೆ ಕಾಲ್ತುಳಿದಲ್ಲಿ ಉಸಿರುಗಟ್ಟಿ ಇವರು ಮೃತಪಟ್ಟಿದ್ದಾರೆ ಅಂತಾ ಹೇಳಲಾಗುತ್ತಿದೆ. ಈ 30 ಜನ ಸದಸ್ಯರ ತಂಡದಲ್ಲಿದ್ದವರೇ ಮೃತರ ಕುಟುಂಬಸ್ಥರಿಗೆ ಕರೆ ಮಾಡಿ ಮಾಹಿತಿ ಕೊಟ್ಟಾಗಲೇ ಮೃತಪಟ್ಟಿರುವ ವಿಚಾರ ಗೊತ್ತಾಗಿದೆ. ಆದ್ರೆ ಈವರೆಗೂ ಬೆಳಗಾವಿಯ ನಾಲ್ವರ ಸಾವಿನ ಬಗ್ಗೆ ಜಿಲ್ಲಾಡಳಿತಕ್ಕೆ ಉತ್ತರ ಪ್ರದೇಶದ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದ್ರೆ ಸಾವಿನ ಸುದ್ದಿ ಗೊತ್ತಾಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.

ಇನ್ನು ಬೆಳಗ್ಗೆಯಿಂದಲೇ ಪ್ರಯಾಗರಾಜ್ ಕಾಲ್ತುಳಿದಲ್ಲಿ ಸಾವು, ಗಾಯಗೊಂಡ ವಿಚಾರ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದ್ದಂತೆ ಈ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿತ್ತು.‌ ಈ ನಾಲ್ವರು ಮೊಬೈಲ್ ಗೆ ಕರೆ ಮಾಡಿದ್ರು ಸಂಪರ್ಕ‌ಕ್ಕೆ ಸಿಗಲಿಲ್ಲ. ಆದ್ರೆ ಮಧ್ಯಾಹ್ನದ ಹೊತ್ತಿಗೆ ಈ ನಾಲ್ವರು ಕಾಲ್ತುಳಿತಕ್ಕೆ ಬಲಿ ಆಗಿರೋ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಸುದ್ದಿ ಗೊತ್ತಾಗುತ್ತಿದ್ದಂತೆ ಮೃತರ ಮನೆಗೆ ಶಾಸಕರಾದ ಅಭಯ ಪಾಟೀಲ್, ಆಶೀಫ್ ಸೇಠ್, ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಭೇಟಿ ನೀಡಿ ಸಾಂತ್ವನ ಹೇಳಿದ್ರು. ಪ್ರಯಾಗರಾಜ್ ಆಸ್ಪತ್ರೆಯಲ್ಲಿ ಇರೋ ಮೃತದೇಹಗಳನ್ನ ವಾಪಸ್ ಬೆಳಗಾವಿ ಕರೆ ತರಲು ಉತ್ತರ ಪ್ರದೇಶದ ಪ್ರವಾಸೋದ್ಯಮ ಸಚಿವರೊಂದಿಗೆ ಶಾಸಕ ಅಭಯ ಪಾಟೀಲ್ ಮಾತನಾಡಿದ್ರೆ.., ಅತ್ತ ಜಿಲ್ಲಾಡಳಿತ ಸಹ ಕುಟುಂಬಸ್ಥರು ಕೊಟ್ಟ ಮಾಹಿತಿ ಆಧರಿಸಿ ಪ್ರಯಾಗರಾಜ್ ಜಿಲ್ಲಾಡಳಿತದ ಜೊತೆಗೆ ಸಂಪರ್ಕ ಸಾಧಿಸುತ್ತಿದ್ದಾರೆ.

ಒಟ್ಟಿನಲ್ಲಿ ಪ್ರಯಾಗರಾಜ್ ಮಹಾಕುಂಭ ಮೇಳಕ್ಕೆ ತೆರಳಿದ್ದ ಬೆಳಗಾವಿಗರು ಹೆಣವಾಗಿ ಬರ್ತಿರೋದು ದುರಂತ. ಇನ್ನಷ್ಟು ಜನ ಕನ್ನಡಿಗರು ಮಿಸ್ಸಿಂಗ್ ಆಗಿರೋ ಸಾಧ್ಯತೆಯಿದ್ದು, ಅವರನ್ನ ಸಂಪರ್ಕಿಸುವ ಪ್ರಯತ್ನ ಮುಂದುವರೆದಿದೆ. ಸದ್ಯ ಪ್ರಯಾಗರಾಜ್ ಗೆ ಹೋದವರು ಸುರಕ್ಷಿತವಾಗಿ ವಾಪಸ್ ಬಂದ್ರೆ ಸಾಕಪ್ಪ ಅಂತ ಕುಟುಂಬಸ್ಥರು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.

error: Content is protected !!