ಅದೇನಾಗಿದೆ ಮುಂಡಗೋಡಿಗೆ..? ಇಲ್ಲಿ ಯಾವ ಕ್ಷಣದಲ್ಲಿ ಏನಾಗತ್ತೋ ಯಾರಿಗೂ ಅರ್ಥ ಆಗ್ತಿಲ್ಲ..! ನೀವೇ ಒಮ್ಮೆ ಯೋಚಿಸಿ, ಕಳೆದ ಕೆಲ ತಿಂಗಳ ಹಿಂದಷ್ಟೇ ಪಟ್ಟಣದ ಹೃದಯ ಭಾಗ, ಅದೂ ಕೂಡ ಮಾನ್ಯ ನ್ಯಾಯಾಧೀಶರು ಇರುವ ಕೋರ್ಟ್ ಆವರಣದಲ್ಲೇ ಅದೇಲ್ಲಿಂದಲೋ ಬಂದಿದ್ದ “ರೌಡಿ”ಗಳ ತಂಡ ಅದ್ಯಾರನ್ನೋ ಟಾರ್ಗೆಟ್ ಮಾಡಿ, ಮಚ್ಚು ಝಳಪಿಸಿ ಇಡೀ ಮುಂಡಗೋಡಿನ ಜನರಲ್ಲಿ ಆತಂಕ ಹುಟ್ಟಿಸಿತ್ತು. ಅದಿನ್ನು ಯಾರೂ ಮರೆತಿಲ್ಲ ಅಲ್ವಾ..?
ಮತ್ತದೇ “ನ್ಯಾಯ”ದ ಅಂಗಳ..!
ಇನ್ನು ಅದಾಗಿ, ಕೆಲ ದಿನಗಳಲ್ಲೇ ಇದೇ ಶಿವಾಜಿ ಸರ್ಕಲ್, ಇದೇ ಮಾನ್ಯ ಕೋರ್ಟಿನ ಕೂಗಳತೆ ದೂರದಲ್ಲಿ, ಮಂಗಳಮುಖಿಯರು ಹಾಡಹಗಲೇ ಪಾನ್ ಶಾಪಿಗೆ ನುಗ್ಗಿ ಹಲವರನ್ನು ಮನಬಂದಂತೆ ಥಳಿಸಿ ಹೋಗಿದ್ರು, ಅದ್ರಲ್ಲೂ ಪುಟ್ಟ ಮಗುವನ್ನೂ ಲೆಕ್ಕಿಸದೇ ಅವತ್ತು ನಡೆದಿದ್ದ ಹಲ್ಲೆ ನಿಜಕ್ಕೂ ಇಡೀ ಮುಂಡಗೋಡಿಗರ ಎದೆ ನಡುಗಿಸಿತ್ತು. ಅದಾದ ನಂತರ NMD ಜಮೀರನ ಕಿಡ್ನ್ಯಾಪ್ ಕೇಸು ಬಹುತೇಕ ಇಡೀ ಜಿಲ್ಲೆಯೇ ದೃಷ್ಟಿ ನೆಡುವಂತೆ ಮಾಡಿತ್ತು.
ಅವತ್ತೂ ಕೂಡ..!
ಅದಾದ ನಂತರ, ಬಂಕಾಪುರ ರಸ್ತೆಯ ಖಾಸಗಿ ಬ್ಯಾಂಕ್ ಒಂದರಲ್ಲಿ ಸಿಬ್ಬಂದಿಯೋರ್ವನಿಗೆ ಕೆಲವರು ಬಂದು ಏಕಾಏಕಿ ನುಗ್ಗಿ ಮನಬಂದಂತೆ ಹಲ್ಲೆ ಮಾಡಿ ಹೋಗಿದ್ದರು. ಇದು CCTV ಯಲ್ಲೂ ದಾಖಲಾಗಿತ್ತು. ಅಸಲು, ಅವತ್ತು ಆ ಹಲ್ಲೆಗೊಳಗಾದವ ಡೈರೆಕ್ಟಾಗಿ ಮುಂಡಗೋಡ ಪೊಲೀಸ್ ಠಾಣೆಗೆ ಹೋಗಿ ಘಟನೆ ವಿವರಿಸಿದ್ದ. ಆದರೆ, ಅದಾದ ನಂತರ ಆ ವಿಷಯ ಅದೇನೇನಾಯ್ತೊ ಗೊತ್ತಿಲ್ಲ. ಕೇಸು ದಾಖಲಾಗಿರುವ ಯಾವ ಕುರುಹೂ ಇಲ್ಲಿವರೆಗೂ ನಮಗಂತೂ ಸಿಕ್ಕಿಲ್ಲ.
ಮತ್ತೊಂದು ಹಲ್ಲೆ..!
ನಿನ್ನೆ ಸೋಮವಾರ ಸಂತೆಯ ದಿನ, ಇದೇ ಶಿವಾಜಿ ಸರ್ಕಲ್ ನಲ್ಲಿ, ಮತ್ತದೇ ಕೋರ್ಟ್ ಆವರಣದಲ್ಲಿ ವ್ಯಕ್ತಿಯೋರ್ವನಿಗೆ ಹಾಡಹಗಲೇ ಮನಬಂದಂತೆ ಥಳಿಸಲಾಗಿದೆ. ಚಪ್ಪಲಿಯಿಂದ ಅದ್ಯಾವನೋ ಓರ್ವ ಆ ವ್ಯಕ್ತಿಗೆ ಸಾರ್ವಜನಿಕವಾಗೇ ಯಾವ ಕಾನೂನಿನ ಭಯವೂ ಇಲ್ಲದೇ ಎಳೆದಾಡಿ ಹಲ್ಲೆ ಮಾಡಿರೋ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.
ಆದ್ರೆ, ಇಲ್ಲಿ ಹೀಗೆ ರೌಡಿಸಂ ಮಾಡಿರೋನು ಯಾರು..? ಹಾಗೆ ಹೊಡೆತ ತಿಂದವನು ಯಾರು ಅನ್ನೋ ಮಾಹಿತಿ ಇನ್ನೂ ಸಿಕ್ಕಿಲ್ಲ. ಕೇಸು ದಾಖಲಾಗಿದೆಯಾ..? ಈ ಬಗ್ಗೆ ಮಾಹಿತಿ ಇನ್ನೂ ಬಂದಿಲ್ಲ. ಇಲ್ಲಿಯೂ ಕೂಡ “ಹಾ..ಜೀ” ಗಳ “ರಾಜೀ” ಕೈ ಕಟ್ಟಿ ಬಿಟ್ರೇ ಇದೂ ಕೂಡ ಬಹುತೇಕ ಗೋವಿಂದಾ.. ಗೋವಿಂದಾ ಅಂತಿದಾರೆ ಜನ..
ಹೀಗಾಗಿ, ಪಟ್ಟಣದ ಹೃದಯ ಭಾಗದಲ್ಲೇ ಈ ರೀತಿಯ “ರೌಡಿಸಂ” ಗಳು ನಡಿತಿರೋದರ ಅರ್ಥವೇನು..? ಇದು ಮುಂಡಗೋಡಿಗರ ಆತಂಕದ ಪ್ರಶ್ನೆಯಾಗಿದೆ. ಅಸಲು, ಮುಂಡಗೋಡಿನಲ್ಲಿ ಯಾರ ಭಯವೂ ಇಲ್ಲದೇ ಹೋಯ್ತಾ..? ಇದು ಪ್ರತಿಯೊಬ್ಬರ ಅಳಲು..! ನೋವು..! ಹತಾಶೆ..! ಛೇ ಉತ್ತರಿಸೋರು ಯಾರು..?