ಮುಂಡಗೋಡ ತಾಲೂಕಿನ ಇಂದೂರು ಸೊಸೈಟಿ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ತಾಲೂಕಿನಲ್ಲೇ ಭಾರೀ ಸದ್ದು ಮಾಡಿದ್ದ, ಜಿದ್ದಾಜಿದ್ದಿಗೆ ಕಾರಣವಾಗಿದ್ದ ಈ ಚುನಾವಣೆ, ನಿಜಕ್ಕೂ ಯಾರೂ ನಿರೀಕ್ಷಿಸದ ಅಚ್ಚರಿ ಫಲಿತಾಂಶ ನೀಡಿದೆ. ಕಾಂಗ್ರೆಸ್ ನ ಪ್ರಭಾವಿ ಮುಖಂಡ, ಶಿವರಾಮ್ ಹೆಬ್ಬಾರರ ಪರಮಾಪ್ತ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವಿಗೌಡ ಪಾಟೀಲರ ಸೋಲಿನೊಂದಿಗೆ ಭಾರೀ ಅಚ್ಚರಿಗೆ ಕಾರಣವಾಗಿದೆ.
ಅಸಲು, ತೀವ್ರ ತುರುಸು ಪಡೆದಿದ್ದ ಇಂದೂರು ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ “ಮಹಾದಂಡನಾಯಕ” ರವಿಗೌಡ ಪಾಟೀಲ್ ಸೋಲು ಕಂಡಿದ್ದರೂ, ಇನ್ನುಳಿದ ಬಹುತೇಕ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಭರ್ಜರಿ ಜಯ ದಾಖಲಿಸಿದ್ದಾರೆ. ರೈತ ಹಿತರಕ್ಷಣಾ ಒಕ್ಕೂಟ ಕೇವಲ 3 ಸ್ಥಾನ ಪಡೆಯುವಲ್ಲಿ ಏದುಸಿರು ಬಿಟ್ಟಿದೆ. ಆದ್ರೆ, ಇದ್ರಲ್ಲಿ ಪಾಟೀಲರ ಎದುರು ಸೆಡ್ಡು ಹೊಡೆದು ಗೆದ್ದಿ ಬಂದಿರೋ ದೇವು ಕೆಂಚಗೊಣ್ಣವರ ಗೆಲುವಿನ ಸಂಭ್ರಮ ಕಾಂಗ್ರೆಸ್ ಸಂಭ್ರಮವನ್ನೂ ಮೀರಿಸಿದೆ. ಒಂದರ್ಥದಲ್ಲಿ ದೇವು ಕೆಂಚಗೊಣ್ಣವರ್ ಸದ್ಯ ತಾಲೂಕಿನ ರಾಜಕೀಯ ಪಡಸಾಲೆಯ ಬಹು ಚರ್ಚಿತ ವ್ಯಕ್ತಿಯಾಗಿದ್ದಾರೆ.
ಅಂದಹಾಗೆ, ಒಟ್ಟು 12 ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅದ್ರಲ್ಲಿ ಯಮನಪ್ಪ ಮಾರಂಬೀಡ್, ಮಹಮ್ಮದರಪೀಕ ದೇಸಳ್ಳಿ, ಉಮೇಶ ಹರ್ತಿ, ಶಿವಾನಂದ ಕಣಕಣ್ಣನವರ, ವಿರೂಪಾಕ್ಷ ಪಾಟೀಲ್, ನಾಗಯ್ಯ ಹೀರೆಮಠ, ಸುಧಾ ಚಂದ್ರಶೇಖರ ನಡಗೇರ, ಪಾರ್ವತಿ ಮಾದೇವಪ್ಪ ಸುಳ್ಳದ, ಸಲಿಂ ಅಲ್ಲಾವುದ್ದಿನ ಮುಂಡಗೋಡ “ಕೈ” ಪಡೆಯ ಬೆಂಬಲದೊಂದಿಗೆ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ.
ಇನ್ನು, ರೈತ ಹಿತರಕ್ಷಣಾ ಒಕ್ಕೂಟದಿಂದ ಕಣಕ್ಕಿಳಿದಿದ್ದ ಮೂವರು ನಿರ್ದೇಶಕರು ಆಯ್ಕೆಯಾಗಿದ್ದಾರೆ. ದೇವೇಂದ್ರ ಕೆಂಚಗೊಣ್ಣವರ್, ಮೌನ್ಸಿ ಥಾಮಸ್, ಚನ್ನಬಸಪ್ಪ ಗಲಬಿ ಆಯ್ಕೆಯಾಗಿದ್ದು ಸಂಭ್ರಮಿಸಿದ್ದಾರೆ.
ಇದ್ರೊಂದಿಗೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಇಂದೂರು ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಕ್ರಮ ಮೆರೆದಿದೆ.