ಬಿಜೆಪಿಯಿಂದ ಉಚ್ಚಾಟನೆ ಮಾತು..! ಹೆಬ್ಬಾರ್ ಅಂಗಳದಲ್ಲಿ ಸಂಭ್ರಮವೋ ಸಂಭ್ರಮ..!!

ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಅಕ್ಷರಶಃ ಸಂಭ್ರಮಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಇನ್ನೇನು ಬಿಜೆಪಿಯಿಂದ ಉಚ್ಚಾಟನೆಯೋ ಅಥವಾ ಇನ್ಯಾವುದೋ ಕಠಿಣ ಕ್ರಮದ ಮಾತು ಹೊರಬಿದ್ದ ಗಳಿಗೆಯಿಂದ ಹೆಬ್ಬಾರ್ ಪಡಸಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ‌. ಯಾಕಂದ್ರೆ, ಇಲ್ಲಿ ರೋಗಿ ಬಯಸಿದ್ದು, ಡಾಕ್ಟರ್ ಹೇಳಿದ್ದು, ಎರಡೂ ಒಂದೇಯಾಗುವ ಸಮಯ ಬಹುತೇಕ ಹತ್ತಿರವಾಗಿದೆ ಅಂತಲೇ ಹೆಬ್ಬಾರ್ ಬಳಗದಲ್ಲಿ ಚರ್ಚೆಯಾಗ್ತಿದೆ.

STS ಹಾಗೂ ಹೆಬ್ಬಾರ್ ಮೇಲೆ ಕ್ರಮ..!
ಅಸಲು, ವಿಜಯಪುರ ಶಾಸಕ, ಬಿಜೆಪಿಯ ಫೈಯರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿಎಸ್ ವೈ ಬಣದ ನಡುವೆ ಠಫ್ ವಾರ್ ನಡೀತಿದೆ. ಹೀಗಾಗಿ, ರಾಜ್ಯದ ಬಿಜೆಪಿ ಸದ್ಯ ಬೀದಿ ರಂಪಾಟ, ಹಾದಿ ರಂಪಾಟದಲ್ಲಿ ಬಸವಳಿದಿದೆ. ಇದೇ ಹೊತ್ತಲ್ಲಿ, ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ಮುಖಂಡರು ಹೈಕಮಾಂಡ್ ಬಾಗಿಲು ತಟ್ಟಿದ್ದಾರೆ. ಜೊತೆಗೆ, ಎಸ್.ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ವಿರುದ್ಧವೂ ಕ್ರಮವಾಗಲಿ ಅಂತಾ ಹೈಕಮಾಂಡಿಗೆ ಮನವಿ ಮಾಡಿದ್ದಾರೆ.

ಅಲ್ರಿ ಇದು ಯಾವ ಲೆಕ್ಕ..?
ಅಸಲು, ಕಳೆದ ವಿಧಾನಸಭಾ ಚುನಾವಣೆ ಹೊತ್ತಲ್ಲಿ ಇಡೀ ರಾಜ್ಯದಲ್ಲೇ ಬಿಜೆಪಿ ಮಕಾಡೆ ಮಲಗಿತ್ತು. ಘಟಾನುಘಟಿ ನಾಯಕರುಗಳೇ ಸೋತು ಮನೆಹಿಡಿದಿದ್ರು. ಆ ಹೊತ್ತಲ್ಲೇ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಬಾವುಟ ಹಾರುವಂತೆ ಮಾಡಿದ್ದು ಇದೇ ಶಿವರಾಮ್ ಹೆಬ್ಬಾರ್.‌ ಇಲ್ಲಿ, ಬಿಜೆಪಿ ಗೆದ್ದಿತ್ತು ಅನ್ನೋದಕ್ಕಿಂತ ಶಿವರಾಮ್ ಹೆಬ್ಬಾರ್ ಗೆದ್ದಿದ್ರು. ಅಸಲು, ಅವತ್ತು ಹೆಬ್ಬಾರರ ಗೆಲುವಿನ ಅಂತರ ತೀರ ಅನ್ನುವಷ್ಟು ಕಡಿಮೆಯಾಗಿತ್ತು. ಅದಕ್ಕೇಲ್ಲ ಕಾರಣ ಹೆಬ್ಬಾರರನ್ನು ಸೋಲಿಸಲೇ ಬೇಕು ಅಂತಾ ಹಗಲು ರಾತ್ರಿ ದುಡಿದವರಲ್ಲಿ ಕಾಂಗ್ರೆಸ್ಸಿಗರಿಗಿಂತ ಬಿಜೆಪಿಗರೇ ಜಾಸ್ತಿ ಇದ್ರು.

ಹಾಗಂತ, ಖುದ್ದು ಹೆಬ್ಬಾರರೇ ಗೆದ್ದ ನಂತರ ಆಕ್ರೋಶ ಹೊರಹಾಕಿದ್ದರು. ಅಲ್ದೇ, ಪಕ್ಷದಲ್ಲೇ ಇದ್ದು, ತಮ್ಮ ಬೆನ್ನ ಹಿಂದೆ ಸೋಲಿನ ಸಂಭ್ರಮಕ್ಕೆ ಕಾದಿದ್ದ “ಒಳಗಿನ ಶತ್ರು”ಗಳ ವಿರುದ್ಧ ಕ್ರಮಕ್ಕಾಗಿ ಹೈಕಮಾಂಡಿಗೆ ದೂರು ನೀಡಿದ್ದರು. ಆದ್ರೆ, ಅವತ್ತು ಬಿಜೆಪಿ ಅಂತೇಲ್ಲ ನಾಯಕರಿಗೆ ಜಸ್ಟ್ ನೋಟೀಸು ನೀಡಿ ಕೈ ತೊಳೆದುಕೊಂಡಿತ್ತು. ಬಿಟ್ರೆ ಯಾವುದೇ ಕಠಿಣ ಕ್ರಮ ಪಡೆಯಲೇ ಇಲ್ಲ. ಹೀಗಾಗಿ, ಇಡೀ ಹೆಬ್ಬಾರ್ ಬಳಗದಲ್ಲಿ ಅವತ್ತೇ ಬಿಜೆಪಿಯೊಳಗಿನ ಮನಸ್ಸು ಕದಡಿ ಹೋಗಿತ್ತು. ಅದಕ್ಕಾಗೇ ತಮ್ಮ ದಾರಿ ಕಂಡುಕೊಂಡರು. ಇಡೀ ಕ್ಷೇತ್ರದಲ್ಲಿ ಬಿಜೆಪಿಯ ವಿರುದ್ಧ ತೊಡೆ ತಟ್ಟಿದ್ರು.

ಇಡೀ ಕ್ಷೇತ್ರದಲ್ಲಿ ಗಟ್ಟಿ ಧ್ವನಿ..!
ಅಸಲು, ಯಲ್ಲಾಪುರ ಕ್ಷೇತ್ರದಲ್ಲಿ ಗೆದ್ದು ಬಂದ ಶಿವರಾಮ್ ಹೆಬ್ಬಾರ್, ಗೆದ್ದ ಮಾರನೇ ದಿನವೇ ಫಿಲ್ಡಿಗೆ ಇಳಿದಿದ್ರು. ತಮ್ಮ ಹಿಂಡು ಹಿಂಡು ಬೆಂಬಲಿಗರ ಮನೆಯ ಬಾಗಿಲು ತಟ್ಟಿದ್ರು. ನಂಗೆ ಹೀಗೇಲ್ಲ ಅನ್ಯಾಯವಾಗಿದೆ. ನಾನೀಗ ಬಹುದೊಡ್ಡ ತೀರ್ಮಾನಕ್ಕೆ ಬಂದಿದ್ದಿನಿ, ನಿಮ್ಮ ಬೆಂಬಲ ಕೊಡ್ತಿರೊ ಇಲ್ವೊ ಅಂತಾ, ಥೇಟು ಮನೆಯ ಹಿರಿಯ ಮಗನಂತೆ, ಮತದಾರನ ಬಾಗಿಲಿಗೆ ಹೋಗಿದ್ದರು. ನಡೆದ ಅಷ್ಟೂ ಮಜಕೂರಗಳನ್ನೂ ಬಿಡಿಸಿ ಇಟ್ಟಿದ್ದರು. ಹೀಗಾಗಿ, ಬಹುತೇಕ ಕಾರ್ಯಕರ್ತರು, ಬೆಂಬಲಿಗರು “ಸಾಹೇಬ್ರ ನೀವು ಎಲ್ಲಿರ್ತಿರೋ ನಾವು ಅಲ್ಲೇ ಇರ್ತಿವಿ” ಅಂತಾ ಬೆನ್ನಿಗೆ ನಿಂತಿದ್ದರು. ಅಷ್ಟೆ… ಹೆಬ್ಬಾರ್ ಪಡೆ ಇಡೀ ಕ್ಷೇತ್ರದಲ್ಲಿ ಮತ್ತೊಂದು ಮಗ್ಗಲು ಬದಲಿಸಿತು. ಗಟ್ಟಿಯಾಗುತ್ತಲೇ ನಡೆಯಿತು. ಇದ್ರೊಂದಿಗೆ ಬಿಜೆಪಿಯು, ತನ್ನ ಇಬ್ಬಗೆಯ ನೀತಿಯಿಂದ ಮತ್ತೊಂದು ಕ್ಷೇತ್ರ ಕಳೆದುಕೊಳ್ಳುವ ಹುಂಬತನ ಮಾಡಿತು.

“ವಿವೇಕ” ನಡೆ..!
ಹಾಗೆ ನೋಡಿದ್ರೆ, ಹೆಬ್ಬಾರ್ ಸಾಹೇಬರ ಇಂತಹದ್ದೊಂದು ಬಹುದೊಡ್ಡ ತೀರ್ಮಾನವನ್ನು ಅಷ್ಟೇ ನಾಜೂಕಾಗಿ, ಅಷ್ಟೇ ಬಲಿಷ್ಟವಾಗಿ, ಯುವ ಪಡೆಯೊಂದಿಗೆ ಇಡೀ ಕ್ಷೇತ್ರದಲ್ಲಿ ಎಕ್ಸಿಕ್ಯೂಟ್ ಮಾಡಿದ್ದೇ ಶಿವರಾಮ ಹೆಬ್ಬಾರ್ ಪುತ್ರ, ವಿವೇಕ್ ಹೆಬ್ಬಾರ್..! ನಿಜ ಅಂದ್ರೆ, ತಂದೆ ಬಿಜೆಪಿ ಶಾಸಕನಾಗಿದ್ರೂ ಮಗ ಮಾತ್ರ ತನ್ನ ಪಡೆಯೊಂದಿಗೆ ಕಾಂಗ್ರೆಸ್ ಸೇರಿದ್ದರು. ಅಲ್ಲಿವರೆಗೂ ಇಡೀ ಕ್ಷೇತ್ರದಲ್ಲಿ ಸದ್ದೇ ಇಲ್ಲದಂತಿದ್ದ ಕೈ ಪಡೆ ಮತ್ತೆ ಪುಟಿದೇಳುವಂತೆ ಮಾಡಿದ್ದರು. ಹೀಗಾಗಿ, ಸದ್ಯ ಕ್ಷೇತ್ರದಲ್ಲಿ ತಂದೆಗಿಂತಲೂ ಒಂದು ಹೆಜ್ಜೆ ಮುಂದೆ ಎನ್ನುವಂತೆ ವಿವೇಕ್ ಹೆಬ್ಬಾರ್ ಮಿಂಚುತ್ತಿರೋದು ಪ್ರಬುದ್ಧ ರಾಜಕೀಯ ಭವಿಷ್ಯದ ಮುನ್ಸೂಚನೆ ಎಂಬಂತಾಗಿದೆ.

ಒಟ್ನಲ್ಲಿ, ಸಧ್ಯ ಬಿಜೆಪಿಯಿಂದ ಶಿವರಾಮ್ ಹೆಬ್ಬಾರರ ವಿರುದ್ಧ”ಕಠಿಣ” ಕ್ರಮದ ಮಾತು ಇಡೀ ಯಲ್ಲಾಪುರ ಕ್ಷೇತ್ರದಲ್ಲಿ, ಏನಂದ್ರೆ ಏನೂ ಘಟಿಸುವಂತೆ ಮಾಡುತ್ತಿಲ್ಲ. ಹೆಬ್ಬಾರ್ ಬಣದಲ್ಲಿ ಆತಂಕ ತಂದಿಟ್ಟೂ ಇಲ್ಲ. ಬದಲಾಗಿ, ಬಹುದೊಡ್ಡ ಸಂಭ್ರಮಕ್ಕೆ ಕಾರಣವಾಗಿದೆ. ಹಾದಿ ಬೀದಿಯಲ್ಲಿ ಹೆಬ್ಬಾರ್ ಬೆಂಬಲಿಗರು ಸಾಹೇಬ್ರನ್ನ ಉಚ್ಚಾಟನೆ ಮಾಡಿದ್ರಾ.‌? ಯಾವಾಗ ಮಾಡ್ತಾರೆ..? ಅಂತ ಕುತೂಹಲದಿಂದಲೇ ಕೇಳ್ತಿದಾರೆ‌. ಯಾಕಂದ್ರೆ ಆ ಕಠಿಣ ಕ್ರಮ ಏನಾದ್ರೂ ಜಾರಿಯಾದ್ರೆ, ಇಡೀ ಕ್ಷೇತ್ರದಲ್ಲಿ ಅದರಲ್ಲೂ, ಹೆಬ್ಬಾರ್ ಪಡಸಾಲೆಯಲ್ಲಿ ಸಂಭ್ರಮದ ಹಬ್ಬ ನಡೆಯೋದಂತೂ ಪಕ್ಕಾ..!

error: Content is protected !!