ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೇ ಗುಂಡಿನ ಸದ್ದು ಕೇಳಿಸಿದೆ. ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಸಿಸಿಬಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ, ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಖತರ್ನಾಕ ಖದೀಮರ ಕಾಲಿಗೆ ಗುಂಡು ಹಾರಿಸಲಾಗಿದೆ. ಪರಿಣಾಮ ಇಬ್ಬರು ಆಸ್ಪತ್ರೆ ಪಾಲಾಗಿದ್ದಾರೆ. ಅಂದಹಾಗೆ, ಮಂಗಳೂರು ಮೂಲದ ಕುರ್ತಾ ಅಲಿಯಾಸ್ ಭರತ್ ಕುಮಾರ್ ಹಾಗೂ ಫಾರೂಕ್ ಅಲಿಯಾಸ್ ಟೊಮೆಟೊ ಫಾರೂಕ್ ಕಾಲಿಗೆ ಗುಂಡೇಟು ತಗುಲಿದೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೋಡಲಾಗ್ತಿದೆ.

ಅಂದಹಾಗೆ, ಮಂಗಳೂರು ಮೂಲದ ಭರತ್, ಫಾರುಕ್ ಕಾರು ಅಡ್ಡಗಟ್ಟಿ ದರೋಡೆ ಮಾಡುವುದನ್ನೇ ದಂಧೆ ಮಾಡಿಕೊಂಡಿದ್ದರು. ಇವರ ಗ್ಯಾಂಗ್‌ನಲ್ಲಿ 15 ಜನರಿದ್ದಾರೆ. ಹೀಗಾಗಿ, ಮಹಾರಾಷ್ಟ್ರ ಸಾಂಗ್ಲಿ ಮೂಲದ ರಾಹುಲ್ ಸುರ್ವೆ ಕಾರು ಅಡ್ಡಗಟ್ಟಿ ಖದೀಮರು ದರೋಡೆ ಮಾಡಿದ್ದರು. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಹತ್ತಿರ ದರೋಡೆ ನಡೆದಿತ್ತು.
ಕಾರು ಚಾಲಕನಿಗೆ ಬೆದರಿಕೆ ಹಾಕಿ ಫಾರೂಕ್ ಹಾಗೂ ಭರತ್ ಗ್ಯಾಂಗ್ ದರೋಡೆ ಮಾಡಿದ್ದರು. ನವೆಂಬರ್ 8 ರಂದು ದರೋಡೆ ನಡೆದಿತ್ತು. ಈ ಸಂಬಂಧ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

15 ಜನರ ಗ್ಯಾಂಗ್‌ನಲ್ಲಿ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹುಬ್ಬಳ್ಳಿ ಧಾರವಾಡ ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಇಬ್ಬರನ್ನು ಬಂಧಿಸಿದ್ದರು. ಇಂದು ಸ್ಥಳ ಮಹಜರು ಮಾಡೋ ವೇಳೆ ಖದೀಮರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳ ಕಾಲಿಗೆ ಸಿಸಿಬಿ ಪೊಲೀಸರು ಗುಂಡು ಹಾರಿಸಿದ್ದಾರೆ.

ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.

ನಟೋರಿಯಸ್ ಫಾರುಕ್ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ 17 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ರಾಜ್ಯ, ಹೊರ ರಾಜ್ಯದಲ್ಲೂ ಕೇಸ್‌ಗಳು ದಾಖಲಾಗಿವೆ. ಭರತ್ ಮೇಲೂ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೇಸ್‌ಗಳು ದಾಖಲಾಗಿವೆ. ಇವರ ಸಹಚರರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದು ಈ ಕುರಿತು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಮಂಗಳೂರು, ಬೆಂಗಳೂರು, ಕೇರಳ ಮೂಲದವರು ಈ ದರೋಡೆಯಲ್ಲಿ ಭಾಗಿಯಾಗಿರುವ ಶಂಕೆ ಇದೆ. ಆದಷ್ಟು ಬೇಗ ಉಳಿದ ಆರೋಪಿಗಳನ್ನು ಬಂಧನಕ್ಕೆ ಸಹ ಬಲೆ ಬೀಸಿದ್ದಾರೆ.

 

error: Content is protected !!