ಯಲ್ಲಾಪುರ ಠಾಣೆಯ ದಕ್ಷ ಕ್ರೈಂ ಟೀಂ ಭರ್ಜರಿ ಕಾರ್ಯ ಮಾಡಿದೆ. ಯಲ್ಲಾಪುರ ಶಿರಸಿ ರಸ್ತೆಯಲ್ಲಿ ಮುಸ್ಸಂಜೆ ಹೊತ್ತಲ್ಲಿ, ನಡೆದಿದ್ದ ಖತರ್ನಾಕ ದರೋಡೆ ಕೇಸನ್ನು ಕೆಲವೇ ಅಂದ್ರೆ ಕೆಲವೇ ಗಂಟೆಗಳಲ್ಲಿ ಬೇಧಿಸಿ ಐವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ. ಯಲ್ಲಾಪುರ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.
ಘಟನೆ ಏನು..?
ಅದು ಮೊನ್ನೆ ಮಂಗಳವಾರ ದಿನಾಂಕ 19ರ ಮುಸ್ಸಂಜೆಲಿ ನಡೆದಿದ್ದ ಘಟನೆ.. ಅವತ್ತು, ಶಿರಸಿಯ ಕಟ್ಟಿಗೆ ವ್ಯಾಪಾರಿಯೊಬ್ಬ ತನ್ನ ವ್ಯಾಪಾರದ ಸಲುವಾಗಿ ಯಲ್ಲಾಪುರಕ್ಕೆ ಬಂದಿದ್ದ. ಆತನ ಹೆಸ್ರು ಅಖ್ತರ್ ಗಂಗೊಳ್ಳಿ. ಸ್ಕೂಟಿಯ ಮೇಲೆ ಸವಾರಿ ಬಂದಿದ್ದ ಈತ ತನ್ನೇಲ್ಲ ಕೆಲಸ ಮುಗಿಸಿಕೊಂಡು ಮಂಗಳವಾರದ ಸಂಜೆ ಹೊತ್ತಲ್ಲಿ ಶಿರಸಿ ಕಡೆಗೆ ಹೊರಡಲು ಅಣಿಯಾಗಿರ್ತಾನೆ. ಹೀಗಾಗಿ, ಯಲ್ಲಾಪುರ ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಪಾನ್ ಶಾಪಿನಲ್ಲಿ “ಬತ್ತಿ” ಹೊಡೆದು, ಹಾಗೆ ತನ್ನ ಜೇಬಿನಲ್ಲಿದ್ದ ಹಣದ ಕಟ್ಟನ್ನು ತೆಗೆದು ಅದ್ರಿಂದ 5 ನೂರು ರೂಪಾಯಿ ಅಂಗಡಿಯವನಿಗೆ ಕೊಟ್ಟಿದ್ದ. ಅದೇ ಹೊತ್ತಲ್ಲಿ ಅಲ್ಲಿದ್ದ ಕೆಲ ಖತರ್ನಾಕ ಕಿಲಾಡಿಗಳ ಕಣ್ಣು ಈತನ ಜೇಬಿನ ಮೇಲೆ ಬಿದ್ದಾಗಿತ್ತು. ಮೊದಲೇ ಇವತ್ತು ಏನಾದ್ರೂ ಮಾಡಲೇಬೇಕು ಅಂತಾ ಕಾದು ಕುಳಿತಿದ್ದವರಿಗೆ ಲಡ್ಡು ಬಂದು ಬಾಯಿಗೆ ಬಿದ್ದಂತಾಗಿತ್ತು..
ಮೂತ್ರ ಮಾಡುತ್ತಿದ್ದವನ ಮೇಲೆ..!
ಯಾವಾಗ, ಅಖ್ತರ್ ಅನ್ನೋ ವ್ಯಾಪಾರಿ, ಯಲ್ಲಾಪುರ ಬಸ್ ಸ್ಟ್ಯಾಂಡ್ ಪಕ್ಕದ ಪಾನ್ ಶಾಪಿನಲ್ಲಿ ಸಿಗರೇಟಿಗೆ ಬೆಂಕಿ ಇಟ್ಟು, ಹಣದ ಬಂಡಲ್ ತೋರಿಸಿದ್ದನೋ, ಆಕ್ಷಣದಿಂದಲೇ ಅಲ್ಲಿ ನಿಂತಿದ್ದ ಖತರ್ನಾಕ ಕಿಲಾಡಿಗಳ ಸ್ಕೆಚ್ ರೆಡಿಯಾಗಿತ್ತು. ಜಸ್ಟ್ ಸಿಗರೇಟು ಸೇದಿ ಸ್ಕೂಟಿ ಹತ್ತಿದ್ದ ವ್ಯಾಪಾರಿಯ ಹಿಂದೆ ಎರಡು ಬೈಕುಗಳಲ್ಲಿ ಐವರು ಬೆನ್ನು ಹತ್ತಿದ್ದರು. ಅದೇ ವೇಳೆಗೆ ವ್ಯಾಪಾರಿ ಹಲ್ಲಸ್ಕಂಡ್ ಕ್ರಾಸ್ ಹತ್ತಿರ ಮೂತ್ರ ಮಾಡಲು ಸ್ಕೂಟಿ ಸೈಡಿಗೆ ಹಾಕಿದ್ದ. ಇನ್ನೇನು ಮೂತ್ರ ವಿಸರ್ಜನೆ ಮಾಡಿ ಪ್ಯಾಂಟಿನ ಜಿಪ್ಪು ಹಾಕಿಕೊಳ್ಳುವಷ್ಟರಲ್ಲೇ ಥೇಟು ಸಿನಿಮಾ ಸ್ಟೈಲಲ್ಲೇ ಐವರ ಗ್ಯಾಂಗ್ ಆತನನ್ನ ಆಕ್ರಮಿಸಿಕೊಂಡಿತ್ತು. ಅಸಲು, ಆ ಹೊತ್ತಲ್ಲಿ ಸಂಜೆಗತ್ತಲು ಆವರಿಸಿತ್ತು. ಅಷ್ಟೊತ್ತಿಗಾಗಲೇ, ಆ ಗ್ಯಾಂಗಿನಲ್ಲಿದ್ದ ಓರ್ವ ಖಾರದ ಪುಡಿ ತೆಗೆದು ವ್ಯಾಪಾರಿಯ ಕಣ್ಣಿಗೆ ಎರಚಿ ಬಿಟ್ಟಿದ್ದ. ಅಷ್ಟೆ ಮುಗೀತು ಕತೆ. ಆತನ ಜೇಬಿನಲ್ಲಿದ್ದ ಬರೋಬ್ಬರಿ 50 ಸಾವಿರ ಹಣದ ಕಟ್ಟನ್ನು ತೆಗೆದು, ನಂತ್ರ ಆತನ ಸ್ಕೂಟಿ ಸಮೇತ ಆ ಗ್ಯಾಂಗ್ ಎಸ್ಕೇಪ್ ಆಗಿ ಬಿಟ್ಟಿತ್ತು.
ಚೀರಾಡಿಕೊಂಡಿದ್ದ..!
ಅಸಲು, ಖತರ್ನಾಕ ಖದೀಮರ ಗ್ಯಾಂಗ್ ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆ ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದಂತೆ, ವ್ಯಾಪಾರಿ ಚೀರಾಡಿಕೊಂಡಿದ್ದ. ಒಂದು ಕಡೆ ಹಣದ ಕಳೆದುಕೊಂಡ ನೋವು, ಮತ್ತೊಂದು ಕಡೆ ಖಾರದ ಪುಡಿ ಕಣ್ಣಿಗೆ ಬಿದ್ದು ಅನಿಭವಿಸಿದ ಯಾತನೆ. ಹೀಗಾಗಿ, ತಕ್ಷಣವೇ ದಾರಿಹೋಕರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ. ನಂತರ ಮಾರನೇ ದಿನ ಅಂದ್ರೆ ನಿನ್ನೆ ಬುಧವಾರ, ದಿನಾಂಕ 20 ರಂದು ಬೆಳಿಗ್ಗೆ ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಅಷ್ಟೂ ಮಜಕೂರಗಳನ್ನೂ ಬಿಡಿಸಿ ಹೇಳಿದ್ದ.
ಅವನ ಚಹರೆ!
ನಿಜ ಅಂದ್ರೆ ಈ ದರೋಡೆ ಪ್ರಕರಣದ ದೂರು ಪಡೆದು, ಫಿಲ್ಡಿಗಿಳಿದ ಯಲ್ಲಾಪುರದ ದಕ್ಷ ಕ್ರೈಮ್ ಟೀಂ ದೂರು ನೀಡಿದ ಕೇವಲ 5 ಗಂಟೆಗಳಲ್ಲಿ ಐವರೂ ಆರೋಪಿಗಳನ್ನು ಎಳೆದು ತಂದಿದ್ದಾರೆ. ಹಣ ಕಳೆದುಕೊಂಡಿದ್ದ ವ್ಯಾಪಾರಿ ನೀಡಿದ್ದ ಸಣ್ಣದೊಂದು ಸುಳಿವಿನ ಆಧಾರದಲ್ಲಿ ಆರೋಪಿಗಳನ್ನ ಎಳೆದು ತರಲಾಗಿದೆ. ಖಾರದ ಪುಡಿ ಎರಚಿದವನ “ಚೆಹರೆ” ಇಡೀ ಪ್ರಕರಣ ಬೇಧಿಸಲು ಸಹಕಾರಿಯಾಗಿದೆ. ಹೀಗಾಗಿ, ಯಲ್ಲಾಪುರದ
ಮೀರ್ ಆದಂ ಆದಿಲ್ ಮೀರ್ ಮುನಾಫ್ (20), ರವಿ ನಾರಾಯಣ ಸಿದ್ದಿ (29), ಮಹಮ್ಮದ ರಿಜ್ವಾನ ತಂದೆ ಮೆಹಬೂಬ ಬಿಜಾಪುರ (22), ಜಹೀರುದ್ದಿನ ಪೈರೋ ದಸ್ತಗೀರಿ ಖಾದಿರಬಾಯಿ (28) ನಾಗೇಂದ್ರ ಟುಡೋ ಬಾಬು ಸಿದ್ದಿ ಇವರಿಗೆ ದಸ್ತಗಿರಿ ಮಾಡಿ ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಆರೋಪಿತರು ದರೋಡೆ ಮಾಡಿದ ಬಗ್ಗೆ ತನಿಖೆಯಿಂದ ಕಂಡು ಬಂದ ಹಿನ್ನೆಲೆಯಲ್ಲಿ, ಸದ್ರಿ ಆರೋಪಿತರಿಂದ ದರೋಡೆ ಮಾಡಿದ ನಗದು ಹಣ 25 ಸಾವಿರ ರೂಪಾಯಿ ಸೇರಿದಂತೆ, ಮೂರು ಬೈಕುಗಳನ್ನು, ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನುಗಳು ಸೇರಿ ಒಟ್ಟು 1 ಲಕ್ಷದ 93 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಅಂದಹಾಗೆ, ಉತ್ತರ ಕನ್ನಡದ ಖಡಕ್ ಎಸ್ಪಿ ಎಮ್ ನಾರಾಯಣ, ಹೆಚ್ಚುವರಿ ಎಸ್ಪಿ
ಜಗದೀಶ ಎಮ್. ಶಿರಸಿ ಡಿವೈಎಸ್ಪಿ ಗಣೇಶ ಕೆ.ಎಲ್ ರವರ ಮಾರ್ಗದರ್ಶನದಲ್ಲಿ, ಯಲ್ಲಾಪುರ ದಕ್ಷ ಪಿಐ ರಮೇಶ ಹನಾಪುರ ಇವರ ನೇತ್ರತ್ವದಲ್ಲಿ ಪಿಎಸ್ಐ ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿಗಳಾದ ಮಹಮ್ಮದ ಶಫೀ, ಉಮೇಶ ತುಂಬರಗಿ, ರಾಘವೇಂದ್ರ ಮೂಳೆ. ಗಿರೀಶ ಲಮಾಣಿ. ಪರಶುರಾಮ ಕಾಳಿ, ನಂದೇಶ್ವರ, ಕರ್ಣ ಕುಮಾರ, ಶೋಭಾ ನಾಯ್ಕ. ಶಿಲ್ಪಾ ಗೌಡ ಇವರು ಸಹ ಆರೋಪಿತನನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
******************
ಇದೇಲ್ಲದರ ನಡುವೆ ಎಸ್ಪಿ ಸಾಹೇಬರೇ ಗಮನಿಸಿ..!
ಜಿಲ್ಲೆಯ ಕೆಲ ತಾಲೂಕಿನ ಪೊಲೀಸ್ ಠಾಣೆಗಳಲ್ಲಿ ಕ್ರೈಂ ಟೀಮಿನಲ್ಲಿ ಕಾರ್ಯನಿರ್ವಹಿಸ್ತಿರೋ ಕೆಲ ಬರಗೆಟ್ಟ ಸಿಬ್ಬಂದಿಗಳು, ಇಡೀ ಇಲಾಖೆಯ ಮಾನ ಹರಾಜಿಗೆ ಹಾಕುತ್ತಿದ್ದಾರೆ ಅನ್ನೋ ಆರೋಪಗಳಿವೆ. ಅಸಲು, ಎಲ್ಲರೂ ಹಾಗೆ ಇಲ್ಲ. ಕೆಲ ಬರಗೆಟ್ಟ ಅಡ್ನಾಡಿಗಳು ಮಾತ್ರ ಇಡೀ ವ್ಯವಸ್ಥೆಯನ್ನೇ ತಮ್ಮ ಅಧಿನಕ್ಕೆ ತೆಗೆದುಕೊಂಡು, ಅಕ್ರಮ ದಂಧೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಅನ್ನೋ ಮಾತುಗಳಿವೆ. ತಾವೇ ಖುದ್ದಾಗಿ ನಿಂತು ಮಂತ್ಲಿ ಆಸೆಗಾಗಿ ದಂಧೆಗಳಿಗೆ ಜಾಗ ಹುಡುಕಿ ಕೊಡುತ್ತಿದ್ದಾರೆ ಅನ್ನೋ ಆರೋಪಗಳಿವೆ. ಹೀಗಾಗಿ, ಇಸ್ಪೀಟು ಅಡ್ಡೆಗಳು ಸೇರಿದಂತೆ ಹಲವು ದಂಧೆಗಳಿಗೆ ಇಂತಹ ನಾಲಾಯಕ ಸಿಬ್ಬಂದಿಗಳೇ ಬೆಂಗಾವಲಾಗಿ ನಿಂತು ದುಂಡಗಾಗುತ್ತಿದ್ದಾರೆ ಅನ್ನೋ ಆರೋಪಗಳಿವೆ.
ತಾಳಿ ಮಾರಿಯಾದ್ರೂ ಕೊಡಬೇಕಂತೆ..!
ಅಸಲು, ಜಿಲ್ಲೆಯ ಕೆಲ ಠಾಣೆಗಳಲ್ಲಿ ನಿತ್ಯವೂ ನ್ಯಾಯ ಕೇಳಲು ಬರುವ ಬಡವರ ರಕ್ತ ಹೀರುತ್ತಿದ್ದಾರೆ. ಸಣ್ಣದೊಂದು ಕಂಪ್ಲೆಂಟ್ ಕೊಡಲು ಬಂದರೂ ಇವ್ರಿಗೆ ಹಣ ಕೊಡಲೇ ಬೇಕು ಅನ್ನೋ ಆರೋಪಗಳಿವೆ. ಹೀಗಾಗಿ, ಕೆಲ ಠಾಣೆಗಳಲ್ಲಿ ಇಂತವರಿಂದಲೇ, ಬ್ರಷ್ಟಾಚಾರ ಮಿತಿಮೀರಿದೆಯಂತೆ. ಇವ್ರೇಲ್ಲ ರಾತ್ರಿಯಾದಂತೆ ಅಕ್ರಮಿಗಳ ಜೊತೆಯೇ ಚೀಯರ್ಸ್ ಹೇಳುತ್ತಿದ್ದಾರೆ ಅನ್ನೊ ಆರೋಪಗಳಿವೆ. ಹೀಗಾಗಿ, ಅಂತಹ ಠಾಣೆಗಳ ವ್ಯಾಪ್ತಿಯಲ್ಲಿ ಹಾಡಹಗಲೇ ಸರಗಳ್ಳತನ, ಮನೆಗಳ್ಳತನ, ಬೈಕು ಕಳ್ಳತನದಂತಹ ಕೇಸುಗಳು ನಡೆಯುತ್ತಲೇ ಇವೆ. ಆದ್ರೆ ಘಟನೆಗಳಲ್ಲಿ ಬಹುತೇಕ ಕೇಸುಗಳು ವರ್ಷಗಳಾದ್ರೂ ಬೇಧವಾಗಿಯೇ ಇಲ್ಲ. ಅಸಲು, ಆ ಕ್ರೈಂ ಟೀಮುಗಳಿಗೆ ಆ ಕೇಸುಗಳ ಬಗ್ಗೆ ಯಾವೊಂದೂ ಇಂಟ್ರೆಸ್ಟೂ ಇಲ್ಲ, ಬದಲಾಗಿ ಅವ್ರ ಎತ್ತುವಳಿ ದಂಧೆ ಮಾತ್ರ ನಿರಾತಂಕವಾಗಿದೆ ಅನ್ನೋ ಆರೋಪ ಇದೆ. ಹೀಗಾಗಿ, ಇಲಾಖೆಯ ಮಾನ ಹರಾಜಾಗುತ್ತಿದೆ ಅನ್ನೊ ಮಾತುಗಳು ಪ್ರಜ್ಞಾವಂತರಿಂದ ಕೇಳಿ ಬರ್ತಿದೆ.
ನಿಜ ಅಂದ್ರೆ ಸುಮನಾ ಫೆನ್ನೆಕರ್ ನಂತರ ತಾವು ಜಿಲ್ಲೆಗೆ ಎಸ್ಪಿಯಾಗಿ ಕಾಲಿಟ್ಟ ಗಳಿಗೆಯಿಂದ ಜಿಲ್ಲೆಯ ಅಕ್ರಮಿಗಳು ಬಿಲ ಸೇರಿದ್ದರು. ಆದ್ರೆ ಕೆಲವೇ ಕೆಲ ಠಾಣೆಗಳಲ್ಲಿ ನಿಮ್ಮ ಇಲಾಖೆಯ ಬರಗೆಟ್ಟವರಿಂದಾಗಿ ಅಕ್ರಮಗಳು ಕದ್ದು ಮುಚ್ಚಿ ಮತ್ತೆ ನಡೆಯುತ್ತಲೇ ಇವೆ ಅನ್ನೊ ಮಾತುಗಳು ಕೇಳಿ ಬರ್ತಿವೆ. ದಯವಿಟ್ಟು ಅಂತವರನ್ನ ಹುಡುಕಿ ತಾವು ತಕ್ಷಣವೇ ಕ್ರಮ ಕೈಗೊಳ್ಳಬೇಕಿದೆ. ಅಂತವರಿಗೆ ಬೆಂಗಾವಲಾಗಿ ನಿಂತು ಹಡಬಿಟ್ಟಿ ಹಣದ ಆಸೆಗಾಗಿ ಬಾಯ್ತೆರೆದು ಕೂತಿರೋ ಕೆಲ ಆಸೆಬುರುಕ ಹಿರಿಯ ಅಧಿಕಾರಿಗಳಿಗೂ ಕಿವಿ ಹಿಂಡಬೇಕಿದೆ. ಅಂದಾಗ ಮಾತ್ರ ತಮ್ಮ ನಿರ್ಬಿಡೆಯ, ಖಡಕ್ ಕ್ರಮಗಳು ಜಿಲ್ಲೆಯಲ್ಲಿ ಒಂದಿಷ್ಟು ಜಾರಿಯಾಗಬಹುದು. ಅಸಲು, ಇದು ಇಡೀ ಜಿಲ್ಲೆಯ ಜನರ ಕೂಗು.
ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ ಸಿದ್ದಾಪುರ, ಯಲ್ಲಾಪುರ, ಹಳಿಯಾಳ, ದಾಂಡೇಲಿ, ರಾಮನಗರ ಠಾಣೆಗಳಲ್ಲಿ ಪೊಲೀಸರ ಖಡಕ್ ಟೀಂ ಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸ್ತಿವೆ ಅನ್ನೊ ಮಾತು ಇದೆ. ಹೀಗಾಗಿ, ಅಂತಹ ಠಾಣೆಗಳ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ನಮ್ಮದೊಂದು ಸಲಾಂ ಹಾಗೂ ಬೆಂಬಲ ಇದ್ದೇ ಇದೆ. ಅಲ್ಲಿನ ಕ್ರೈಂ ಟೀಮುಗಳ ನಿರ್ಭಿಡೆಯ ಕಾರ್ಯ ನಿಜಕ್ಕೂ ಶ್ಲಾಘನೀಯ, ಆದ್ರೆ ಅದರ ಹೊರತಾಗಿನ ಕೆಲ ಠಾಣೆಯ ಟೀಂಗಳ ಕಾರ್ಯವೈಖರಿ ಬಗ್ಗೆ ಮಾನ್ಯ ಎಸ್ಪಿ ಸಾಹೇಬ್ರು ಗಮನಿಸಬೇಕಿದೆ.