ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು

ಹಳಿಯಾಳ; ಇಲ್ಲಿನ ತಹಶೀಲ್ದಾರ್ ರವರ ಕಚೇರಿಯ ಸಭಾ ಭವನದಲ್ಲಿ ನ.9 ರಂದು ನಡೆದ ಈ ವರ್ಷದ ಕಬ್ಬು ಅರೆಯುವ ಹಂಗಾಮು ಪ್ರಾರಂಭ ಮಾಡುವುದಕ್ಕೆ ಸಂಬಂಧಿಸಿದಂತೆ ಬೆಲೆ ನಿರ್ಧರಣೆ ಮಾಡುವ ಬಗ್ಗೆ EID Parry ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರ ರೈತ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರ
ಅಧ್ಯಕ್ಷತೆಯಲ್ಲಿ ನಡೆಸಿದ ಸಭೆಯಲ್ಲಿ ಈ ಮುಂದಿನಂತೆ ತೀರ್ಮಾನಿಸಲಾಯಿತು.

2023-24ನೇ ಸಾಲಿನಲ್ಲಿ ಸರ್ಕಾರವು ನಿಗಧಿ ಪಡಿಸಿದ ಎಫ್.ಆರ್.ಪಿ ದರವು ಪ್ರತಿ ಟನ್ ಕಬ್ಬಿಗೆ 3678/- ರೂ.ಗಳಿದ್ದು ಪ್ಯಾರಿ ಸಕ್ಕರೆ ಕಾರ್ಖಾನೆಯವರು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಕಳೆದು 2826/- ರೂ.ಗಳನ್ನು ರೈತರಿಗೆ ಪಾವತಿಸುತ್ತಿದ್ದರು. ಈ ವರ್ಷಕ್ಕೆ ದರ ನಿಗಧಿ ಮಾಡುವ ಬಗ್ಗೆ ರೈತರು ಮನವಿ ಮಾಡಿರುವಂತೆ ,ಅಕ್ಟೊಬರ್ 30 ನಡೆದ ಪ್ರಾಥಮಿಕ ಹಂತದ ಸಭೆ ನಡೆಸಿದ್ದು,ನಂತರ , ನ. 9 ರಂದು : ಹಳಿಯಾಳದಲ್ಲಿ ರೈತರು ಮತ್ತು ಪ್ಯಾರಿ ಕಾರ್ಖಾನೆಯವರೊಂದಿಗೆ ಅಂತಿಮ ಸಭೆ ನಡೆಸಿ ಸತತವಾಗಿ ಚರ್ಚೆ ನಡೆಸಿದ ಫಲವಾಗಿ ಈ ವರ್ಷಕ್ಕೆ ಸರ್ಕಾರವು ನಿಗಧಿ ಪಡಿಸಿರುವ ದರ ಪ್ರತಿ ಟನ್ ಕಬ್ಬಿಗೆ 3685/- ರೂ.ಗಳಲ್ಲಿ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಕಡಿತಗೊಳಿಸಿ ಪ್ರತಿ ಟನ್ ಕಬ್ಬಿಗೆ 2975/- ರೂ. ಗಳನ್ನು ರೈತರಿಗೆ ಪಾವತಿಸಲು ಕಾರ್ಖಾನೆಯವರು ಒಪ್ಪಿರುತ್ತಾರೆ. ಇದರಿಂದಾಗಿ ರೈತರಿಗೆ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿ ಮೊತ್ತ ದೊರೆಯುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ಯಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಟಾವಣೆ ಮಾಡಿದ ಕಬ್ಬಿನ ತೂಕ ಮಾಡಲು ಮತ್ತು ಸಕ್ಕರೆ ಇಳುವರಿಯ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವ ಬಗ್ಗೆ , ತಹಶೀಲ್ದಾರ್ ಹಳಿಯಾಳ ರವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಮುಖಂಡರನ್ನೊಳಗೊಂಡ ಸಮಿತಿಯನ್ನು ರಚನೆ ಮಾಡಿದ್ದು, ಈ ಸಮಿತಿಯು ಕಾಲಕಾಲಕ್ಕೆ ಕಾರ್ಖಾನೆಗೆ ಭೇಟಿ ನೀಡಿ ಕಬ್ಬಿನ ತೂಕ ಮತ್ತು ಕಬ್ಬಿನ ಇಳುವರಿಯ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದರು.

ಪ್ಯಾರಿ ಕಾರ್ಖಾನೆಯವರು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆಸಿದ ಸಭೆಯಲ್ಲಿ ಒಪ್ಪಿರುವಂತೆ ಆದ್ಯತೆಯನುಸಾರ ಕಬ್ಬು ಕಟಾವಣೆ ಮಾಡಲು ಗ್ರಾಮವಾರು ಪಟ್ಟಿಯನ್ನು ಉತ್ತರ ಕನ್ನಡ ಜಿಲ್ಲೆಯ ತಾಲೂಕುಗಳಿಗೆ ಸಂಬಂಧಿಸಿದಂತೆ ಪ್ರಕಟಿಸಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಿರುತ್ತಾರೆ.

ಈ ಪಟ್ಟಿಯನ್ನು ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಪ್ರಚುರಪಡಿಸಬೇಕು ಹಾಗೂ ಸಂಬಂಧಿಸಿದ ಗ್ರಾಮಗಳಲ್ಲಿರುವ ರೈತ ಮುಖಂಡರಿಗೆ ನೀಡಬೇಕು. ಮುಂದುವರೆದು ಧಾರವಾಡ ಜಿಲ್ಲೆಗೆ ಸಂಬಂಧಿಸಿದಂತೆ ಕಬ್ಬು ಕಟಾವು ಮಾಡುವ ಆದ್ಯತಾ ಪಟ್ಟಿಯ ಪ್ರತಿಯನ್ನು ಜಿಲ್ಲಾಧಿಕಾರಿಗಳು ಧಾರವಾಡ ರವರ ಕಚೇರಿಗೆ ಸಲ್ಲಿಸಲು ನಿರ್ದೇಶನ ನೀಡಲಾಯಿತು ಹಾಗೂ ಆದ್ಯತಾ ಪಟ್ಟಿಯನುಸಾರ ಕಬ್ಬು ಕಟಾವು ಮಾಡುವ ಪ್ರಕ್ರಿಯೆಯನ್ನು ಪ್ಯಾರಿ ಕಾರ್ಖಾನೆಯವರು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಪ್ಯಾರಿ ಕಾರ್ಖಾನೆಯವರು ಪ್ರಕಟಿಸಿರುವಂತೆ ಗ್ರಾಮವಾರು ಆದ್ಯತಾ ಪಟ್ಟಿಯನುಸಾರ ಕಬ್ಬು ಕಟಾವಣೆ ಮಾಡದೇ ಲಾಗಣಿ/ಭಕ್ಷಿಸು ಪಡೆದು ರೈತರಿಗೆ ಗೊಂದಲ ಉಂಟುಮಾಡಿ ಕಬ್ಬು ಕಟಾವಣೆ ಮಾಡುವಂತಹ ಕಟಾವಣೆ ತಂಡಗಳು, ರೈತರು ಹಾಗೂ ಇದಕ್ಕೆ ಕಾರಣರಾಗುವ ಕಾರ್ಖಾನೆಯ Field Officers ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ರೈತರ ಕಬ್ಬನ್ನು ಪ್ಯಾರಿ ಸಕ್ಕರೆ ಕಾರ್ಖಾನೆಯವರು ಸ್ಥಾಪಿಸಿರುವ ತೂಕದ ಯಂತ್ರದಲ್ಲಿ ಅಳತೆ ಮಾಡಿದ ವಿವರಗಳನ್ನು ತಕ್ಷಣವೇ ರೈತರಿಗೆ SMS ಮೂಲಕ ಕಳುಹಿಸುವ ವ್ಯವಸ್ಥೆಯನ್ನು ಪ್ಯಾರಿ ಕಾರ್ಖಾನೆಯವರು ಮಾಡಬೇಕು ಹಾಗೂ ಈ ಬಗ್ಗೆ ರೈತರಿಗೆ ರಶೀದಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

error: Content is protected !!