ಮುಂಡಗೋಡ ತಾಲೂಕಿನಾಧ್ಯಂತ ಸೋಮವಾರ ಸುರಿದ ಭಾರೀ ಮಳೆಗೆ ವಿಪರೀತ ಅವಾಂತರಗಳು ಸೃಷ್ಟಿಯಾಗಿವೆ. ಸೋಮವಾರದಿಂದ ತಾಲೂಕಿನ ಹಲವು ಕಡೆ ಕೆಲ ದುರಂತಗಳೂ ನಡೆದಿವೆ. ಅತ್ತಿವೇರಿ ಗೌಳಿ ದಡ್ಡಿ ಬಳಿ ಹಾಗೂ ಶಿರಸಿ ರಸ್ತೆಯ ಹಿರೇಹಳ್ಳಿ ಬಳಿ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಗೌಳಿಗರ ಹದಿನೈದಕ್ಕೂ ಹೆಚ್ಚು ಎಮ್ಮೆಗಳು ನೀರು ಪಾಲಾಗಿವೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಘಟನೆಯಲ್ಲಿ ಕೆಲವು ಎಮ್ಮೆಗಳ‌ ಮೃತದೇಹಗಳು ಪತ್ತೆಯಾಗಿವೆ. ಇನ್ನೂ ಹಲವು ಎಮ್ಮೆಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿವೆ ಅಂತಾ ಹೇಳಲಾಗಿದೆ.

ಅತ್ತಿವೇರಿ ಗೌಳಿದಡ್ಡಿಯಲ್ಲಿ..!
ಅಂದಹಾಗೆ, ಸೋಮವಾರ ಸುರಿದ ಭಾರೀ ಮಳೆಗೆ ತಾಲೂಕಿನ ಅತ್ತಿವೇರಿ ಗೌಳಿದಡ್ಡಿ ಬಳಿಯ ಹಳ್ಳದಲ್ಲಿ ದುರಂತ ಸಂಭವಿಸಿದೆ. ಕಾಡಿಗೆ ಮೇಯಲು ಹೋಗಿದ್ದ ಎಮ್ಮೆಗಳು ಹಳ್ಳ ದಾಟುವ ವೇಳೆ ಏಕಾಏಕಿ ನೀರಲ್ಲಿ ಕೊಚ್ಚಿಕೊಂಡು ಹೋಗಿವೆ. ಅದ್ರಲ್ಲಿ, ಕೆಲ ಎಮ್ಮೆಗಳನ್ನು ಬಚಾವ್ ಮಾಡಲಾಗಿದೆ. ಆದ್ರೆ ಎರಡು ಎಮ್ಮೆಗಳು ಸಾವನ್ನಪ್ಪಿವೆ. ಇನ್ನೂ ಹಲವು ಎಮ್ಮೆಗಳು ನೀರಲ್ಲಿ ಕೊಚ್ಚಿ ಹೋಗಿವೆ ಅನ್ನೋ ಮಾಹಿತಿ ಲಭ್ಯವಾಗಿದೆ. ಆದ್ರೆ, ಸೋಮವಾರ ಘಟನೆ ನಡೆದರೂ ಮಾನ್ಯ ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳಾಗಲಿ, ಸನ್ಮಾನ್ಯ ಅಧಿಕಾರಿಗಳಾಗಲಿ ಸ್ಥಳಕ್ಕೆ ಇನ್ನೂ ಭೇಟಿ ನೀಡಿಲ್ಲ. ಈ ನಡುವೆ ನಿನ್ನೆಯಷ್ಡೇ ಪಶು ವೈದ್ಯಕೀಯ ಇಲಾಖೆ ಸಿಬ್ಬಂದಿಗಳು, ಸ್ಥಳಕ್ಕೆ ಭೇಟಿ ನೀಡಿ ಎರಡು ಎಮ್ಮೆಗಳ ಮರಣೋತ್ತರ ಪರೀಕ್ಷೆ ನಡೆಸಿಕೊಂಡು ಬಂದಿದ್ದಾರೆ.

ಹಿರೇಹಳ್ಳಿ ಬಳಿ..!
ಇನ್ನು, ತಾಲೂಕಿನ ಶಿರಸಿ ರಸ್ತೆಯ ಹಿರೇಹಳ್ಳಿ ಬಳಿ, ಶುಂಠಿ ಶುದ್ದೀಕರಣ ಘಟಕದ ಹತ್ತಿರ ಮತ್ತೊಂದು ದುರಂತ ನಿನ್ನೆ ಮಂಗಳವಾರ ನಡೆದಿದೆ. ಹಳ್ಳದ ಬಳಿ ಹೋಗಿದ್ದ ಎಮ್ಮೆಗಳು ಕಾಲು ಜಾರಿ ಬಿದ್ದು ನೀರಲ್ಲಿ ಕೊಚ್ಚಿ ಹೋಗಿವೆ ಎನ್ನಲಾಗಿದೆ. ಏನಿಲ್ಲವೆಂದರೂ ಆರು ಎಮ್ಮೆಗಳು ಘಟನೆಯಲ್ಲಿ ಮೃತಪಟ್ಟಿವೆ ಎನ್ನಲಾಗ್ತಿದೆ. ಆದ್ರೆ, ಎಮ್ಮೆಗಳು ಯಾರವು, ಎಲ್ಲಿಯವು ಅಂತಾ ಖಚಿತ ಮಾಹಿತಿ ಲಭ್ಯವಾಗಿಲ್ಲ. ಈ ಸ್ಥಳಕ್ಕೆ ಯಾವ್ಯಾವ ಅಧಿಕಾರಿಗಳು ಭೇಟಿ ನೀಡಿದ್ದಾರೆ..? ಏನೇಲ್ಲ ಪ್ರಕ್ರಿಯೆ ನಡೆದಿದೆ ಅನ್ನೋ ಮಾಹಿತಿಯೂ ಲಭ್ಯವಾಗಿಲ್ಲ. ಒಟ್ನಲ್ಲಿ ಈ ಘಟನೆಯಲ್ಲಿ ನಾಲ್ಕು ಎಮ್ಮೆಗಳ ಮೃತದೇಹ ಸಿಕ್ಕಿವೆ ಉಳಿದ ಎಮ್ಮೆಗಳು ನಾಪತ್ತೆಯಾಗಿವೆ ಅಂತಾ ಮಾಹಿತಿ ಲಭ್ಯವಾಗಿದೆ.

ಒಟ್ನಲ್ಲಿ, ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಗೆ ಮುಂಡಗೋಡ ತಾಲೂಕಾಧ್ಯಂತ ವಿಪರೀತ ಅವಘಡಗಳು ಸಂಭವಿಸಿದ್ದು. ರೈತರ ಪಾಡು ಹೇಳತೀರದ್ದಾಗಿದೆ. ಬೆಳೆಗಳು ಸಂಪೂರ್ಣ ಮಣ್ಣುಪಾಲಾಗಿದ್ದು, ದಿಕ್ಕೇ ತೋಚದಂತಾಗಿದೆ. ಇದೇಲ್ಲದರ ನಡುವೆ ಅಧಿಕಾರಿಗಳ ಮೌನ ಮಾತ್ರ ಮುಂದುವರೆದಿದೆ.

error: Content is protected !!