ಶಿರಸಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷೆ ಹಾಗೂ ಉತ್ತರ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಷಾ ಹೆಗಡೆಯವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರವಾರದ ಲೋಕಾಯುಕ್ತ ನ್ಯಾಯಾಲಯ ಒಂದು ವರ್ಷಗಳ ಕಠಿಣ ಸಜೆ ಹಾಗೂ ಐದು ಸಾವಿರ ರೂ ದಂಡ ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಕುಮಾರ್ ಈ ತೀರ್ಪು ನೀಡಿದ್ದಾರೆ.
ಉಷಾ ಹೆಗಡೆಯವರು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗುವ ಮೊದಲು ಅಂಗನವಾಡಿ ಕಾರ್ಯಕರ್ತೆ ಯಾಗಿ ಕೆಲಸ ಮಾಡುತ್ತಿದ್ದರು. ಜಿಪಂ ಸದಸ್ಯರಾದ ನಂತರ ಜನವರಿ 2011 ರಿಂದ ನವಂಬರ್ 2012 ರವರೆಗೆ ಅಂಗನವಾಡಿ ಕಾರ್ಯಕರ್ತೆಯೆಂದು ಸರ್ಕಾರದಿಂದ ಗೌರವಧನ ರೂ. 88,630 ಸ್ವೀಕರಿಸಿ ಸರ್ಕಾರಕ್ಕೆ ಮೋಸ ಮಾಡಿದ್ದಾಗಿ ಆರೋಪಿಸಲಾಗಿತ್ತು.
ಉಷಾ ಅವರು ಏಕಕಾಲದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಕಾರ್ಯನಿರ್ವಹಿಸಿ ಜಿಲ್ಲಾ ಪಂಚಾಯತ್ ಸದಸ್ಯತ್ವ ಹುದ್ದೆಯನ್ನು ಸರಿಯಾಗಿ ನಿಭಾಯಿಸದೆ ಹಾಗೂ ಅಂಗನವಾಡಿ ಕರ್ತವ್ಯದಲ್ಲಿಯೂ ಸರಿಯಾಗಿ ಹಾಜರಿರದೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಾಜರಾತಿ ಪುಸ್ತಕದಲ್ಲಿ ಹಾಜರಿರುವುದಾಗಿ ಸುಳ್ಳು ಸಹಿ ಮಾಡಿದ್ದಾಗಿಯೂ ಮತ್ತು ಈ ಮೂಲಕ ಭಾರತೀಯ ದಂಡ ಸಹಿತ ಕಲಂ 468ರ ಮೇರೆಗೆ ದಂಡನೀಯವಾದ ಅಪರಾಧವನ್ನು ಎಸಗಿದ್ದಾಗಿ ಅರೋಪಿಸಲಾಗಿತ್ತು. ಈಗ ಲೋಕಾಯುಕ್ತ ಕೋರ್ಟ ಆರೋಪವನ್ನು ಎತ್ತಿ ಹಿಡಿದಿದ್ದು ಉಷಾ ಹೆಗಡೆಯವರಿಗೆ ಶಿಕ್ಷೆ ಪ್ರಕಟಿಸಿದೆ.