ಧಾರವಾಡ: ಹಣ ಕೊಟ್ಟು ವರ್ಗಾವಣೆ ಮಾಡಿಕೊಂಡು ಬಂದ ಪೊಲೀಸ್ ಅಧಿಕಾರಿಗಳು ಕಳ್ಳ, ಕಾಕರಿಂದ, ಬಡ್ಡಿ ದಂಧೆಕೋರರಿಂದ ಹಾಗೂ ವೇಶ್ಯಾವಾಟಿಕೆ ಮಾಡಿಸುವವರಿಂದಲೂ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಪರಾಧ ಕೃತ್ಯಗಳು ಆಗಲು ಎರಡು ಕಾರಣಗಳಿವೆ. ಒಬ್ಬರು ಹುಟ್ಟುತ್ತಲೇ ಕ್ರೈಂ ಮಾಡಿಕೊಂಡು ಬಂದವರು ಮತ್ತೊಬ್ಬರು ಬಡ್ಡಿ ದಂಧೆಕೋರರಿಂದ ಕ್ರೈಂಗಳು ಆಗುತ್ತಿವೆ. ಬಡ್ಡಿ ದಂಧೆ ಮಾಡುವವರು ಫೈನಾನ್ಸ್ ಕಂಪೆನಿಯಿಂದ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಫೈನಾನ್ಸ್ ಕಂಪೆನಿಗಳು ಸರ್ಕಾರದಿಂದ ಇಂತಿಷ್ಟೆ ಬಡ್ಡಿ ವಸೂಲಿ ಮಾಡಬೇಕು ಎಂಬ ನಿಯಮ ಹೇರುತ್ತದೆ. ಆದರೆ, ಅವಳಿನಗರದಲ್ಲಿ ಕಾನೂನು ಬಾಹಿರ ಬಡ್ಡಿ ದಂಧೆ ನಡೆಯುತ್ತಿದೆ ಎಂದರು.
ಪೊಲೀಸರು ಕೂಡ ಬಡ್ಡಿ ದಂಧೆಕೋರರ ಜೊತೆ ಶಾಮೀಲಾಗಿದ್ದಾರೆ. ದಂಧೆಕೋರರು ಬಡ್ಡಿ, ಚಕ್ರಬಡ್ಡಿ ಸಹಿತ ಸುಲಿಗೆ ಮಾಡುತ್ತಿದ್ದಾರೆ. ಸಾಲ ಕೊಟ್ಟವರು ಸಾಲ ವಸೂಲಿ ಮಾಡಲು ಅಟ್ಯಾಕ್ ಮಾಡುವ ಕೆಲಸಕ್ಕೆ ಇಳಿಯುತ್ತಾರೆ. ಡ್ರಗ್ಸ್ ಸೇವಿಸಿ ಕೊಲೆ, ಸುಲಿಗೆ ಮಾಡಲು ಇಳಿಯುತ್ತಿದ್ದಾರೆ ಎಂದರು.
ಪೊಲೀಸ್ ಇಲಾಖೆ ಇದನ್ನು ತಡೆಗಟ್ಟುವ ಕೆಲಸವನ್ನು ಸಮರ್ಪಕವಾಗಿ ಮಾಡಬೇಕು. ಸರ್ಕಾರ ಪೊಲೀಸ್ ಅಧಿಕಾರಿಗಳಿಂದ ದುಡ್ಡು ಪಡೆದು ವರ್ಗಾವಣೆ ಮಾಡಿದರೆ, ಪೊಲೀಸರು ಕಳ್ಳರು, ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವವರಿಂದ, ಬಡ್ಡಿ ದಂಧೆಕೋರರ ಕಡೆಯಿಂದ, ವೇಶ್ಯಾವಾಟಿಕೆ ಮಾಡಿಸುವವರಿಂದ ಹಣ ವಸೂಲಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಠಾಣೆಗಳಲ್ಲೂ ಜನ ವಿರೋಧಿ ಕೆಲಸಗಳು ಹೆಚ್ಚಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣವೇ ವರ್ಗಾವಣೆ ದಂಧೆ ಎಂದರು.