ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಟಾಟಾ ಎಸ್ ನಲ್ಲಿ ಸಾಗಿಸುತ್ತಿದ್ದ 6 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಥೇಟು ಸಿನಿಮಾ ಸ್ಟೈಲಿನಲ್ಲೇ ಚೇಸ್ ಮಾಡಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಅಂದಹಾಗೆ, ತಾಲೂಕಿನ ಬಡ್ಡಿಗೇರಿಯಿಂದ ಹಾನಗಲ್ಲಿಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಟಾಟಾ ಎಸ್ ನಲ್ಲಿ ಆರು ಜಾನುವಾರುಗಳನ್ನು ಅಮಾನುಷವಾಗಿ ತುಂಬಿಕೊಂಡು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ತಿಳಿದ ಪೊಲೀಸರು ತಕ್ಷಣವೇ ಅಲರ್ಟ್ ಆಗಿದ್ದಾರೆ.
ಹಾನಗಲ್ಲಿನ ಕಡೆಗೆ ವಾಹನ ಹೊರಟಿದೆ ಅನ್ನೊ ಮಾಹಿತಿ ತಿಳಿದ ಪೊಲೀಸ್ರು, ಪಟ್ಟಣದ ಹೊರ ವಲಯದ ಲೊಯೊಲಾ ಶಾಲೆ ಹತ್ತಿರ ಕಾದು ಕುಳಿತಿದ್ದರು. ಯಾವಾಗ ಪೊಲೀಸರು ನಮ್ಮನ್ನ ಫಾಲೋ ಮಾಡ್ತಿದಾರೆ ಅಂತಾ ಅಕ್ರಮಿಗಳಿಗೆ ಅರ್ಥವಾಯಿತೋ ಆ ಕ್ಷಣವೇ, ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಟಾಟಾ ಎಸ್ ನಲ್ಲೇ ಕಾರಿಗಿಂತಲೂ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದರು.
ಹೀಗಾಗಿ, ಛಲ ಬಿಡದ ಮುಂಡಗೋಡ ಪೊಲೀಸ್ರು ಟಾಟಾ ಎಸ್ ಬೆನ್ನತ್ತಿದ್ದಾರೆ. ಕಡೆಗೆ ಸಾಲಗಾಂವ್ ಹತ್ತಿರದ ಜೋಗೇಶ್ವರ ಹಳ್ಳದ ಹತ್ತಿರ ಕೊನೆಗೂ ಅಕ್ರಮಿಗಳನ್ನು ಪೊಲೀಸ್ರು ಹಿಡಿದಿದ್ದಾರೆ. ಜಾನುವಾರಗಳನ್ನು ರಕ್ಷಣೆ ಮಾಡಿದ್ದಾರೆ. 6 ಜಾನುವಾರುಗಳು, ವಾಹನ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿಎಸ್ಐ ಪರಶುರಾಮ್, ASI ರಾಜೇಶ್ ನಾಯ್ಕ್, ಕೊಟೇಶ್ ನಾಗರಳ್ಳಿ, ಗಣಪತಿ ಹುನ್ನಳ್ಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.