ಯಾರಾಗ್ತಾರೆ ಮುಂಡಗೋಡ ಪಟ್ಟಣ ಪಂಚಾಯತಿ ಅಧ್ಯಕ್ಷೆ..?

ಮುಂಡಗೋಡ ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನದ ಆಯ್ಕೆ ಹಿನ್ನೆಲೆ ಅಸಲೀ ಮಜಕೂರಗಳು ಜಾರಿಯಲ್ಲಿವೆ. ಆಗಷ್ಟ 20 ರಂದು ನಡೆಯಲಿರೋ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಎರಡೂ ಪಕ್ಷಗಳಲ್ಲೂ ಒಳಗೊಳಗಿನ ಲೆಕ್ಕಾಚಾರಗಳು ಗರಿಗೆದರಿವೆ. ಇಲ್ಲಿ ಮೇಲ್ನೋಟಕ್ಕೆ ಕೈ ಪಡೆಗೆ ಆಡಳಿತದ ಚುಕ್ಕಾಣಿ ಅನಾಯಾಸವಾಗಿ ದಕ್ಕುವ ಎಲ್ಲಾ ಸಾಧ್ಯತೆಗಳಿದ್ದರೂ ಬಿಜೆಪಿಯ ಒಳಗೊಳಗಿನ ಮಸಲತ್ತುಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವ ಬಹುದೊಡ್ಡ ಗೇಮ್ ಪ್ಲ್ಯಾನ್ “ಕೈ”ಗೆತ್ತಿಗೊಂಡಿದೆ.

19 ಸಂಖ್ಯೆಯ ಆಟ..!
ಅಸಲು, 19 ಸದಸ್ಯ ಬಲದ ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಸದ್ಯ ಬಿಜೆಪಿಗೆ 7 ಜನ ಗಟ್ಟಿ ಸದಸ್ಯರಿದ್ದಾರೆ‌. ಇನ್ನುಳಿದಂತೆ ಇಬ್ಬರು ಸದಸ್ಯರು ಅದ್ಯಾಕೋ ಏನೋ ಆಗಷ್ಟ ಇಪ್ಪತ್ತರ ಚುನಾವಣೆ ವರೆಗೂ ಹೇಗೋ ಏನೋ ಅನ್ನೋ ಸ್ಥಿತಿಯಲ್ಲಿದ್ದಾರೆ ಅನ್ನೋ ಮಾತಿದೆ. ಹೀಗಾಗಿ, ಅದ್ಯಾವ ಕಡೆಯಿಂದ ಎಣಿಕೆ ಹಾಕಿದ್ರೂ ಬಿಜೆಪಿಯ ಸಂಖ್ಯಾಬಲ 9+1 ಆಗತ್ತೆ. ಇದ್ರಲ್ಲಿ 7 ಜನ ಕಟ್ಟಾ ಬಿಜೆಪಿಗರು, ಇಬ್ಬರು ಅಸ್ಪಷ್ಟತೆಯ ಹಾದಿಯಲ್ಲಿದ್ದವರು. ಜೊತೆಗೆ ಸಂಸದ ಕಾಗೇರಿಯವರ ಬೆಂಬಲ ಸೇರಿ ಟೋಟಲ್ಲಾಗಿ 10 ಕ್ಕೆ ಬಂದು ನಿಂತಿದೆ ಬಲ..

ಇದು “ಕೈ” ಬಲ..!
ಇನ್ನು ಕಾಂಗ್ರೆಸ್ ಅಂಗಳಕ್ಕೆ ಬಂದ್ರೆ ಈ ಪಟ್ಟಣ ಪಂಚಾಯತಿಯಲ್ಲಿ ಬರೋಬ್ಬರಿ 10 ಸದಸ್ಯ ಬಲ ಹೊಂದಿದೆ. ಜೊತೆಗೆ ಶಾಸಕರ ಬೆಂಬಲದೊಂದಿಗೆ ಅನಾಯಾಸವಾಗಿ ಬಹುಮತದ ಅಂಚಿಗೆ ಬಂದು ನಿಲ್ಲುವ ಸ್ಪಷ್ಟ ಸೂಚನೆ ಇದೆ. ಆದ್ರೆ, ಇದ್ರಲ್ಲೂ ಓರ್ವ ಸದಸ್ಯರ “ಕುಂಟಾ ಬಿಲ್ಲೆ” ಆಟದ ಅನುಮಾನವಿದ್ದು ಅದೇನೇ ಆದ್ರೂ ಒಗ್ಗಟ್ಟಿನ ಮಂತ್ರದೊಂದಿಗೆ 11 ರ ಆಟ ಅಖಾಡದಲ್ಲಿ “ಕೈ” ಬಲವಾಗಿಸಿದೆ. ಇದು ಹೆಚ್ಚೂ ಕಡಿಮೆ ಸದ್ಯದ ಸ್ಥಿತಿ..

ಅಧ್ಯಕ್ಷ ಪಟ್ಟ ಯಾರಿಗೆ..?
ಹೀಗಿದ್ದಾಗ, ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಯ ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಹೆಬ್ಬಾರ್ ಸಾಹೆಬ್ರ ಅಂಗಳದಲ್ಲಿನ ಕೆಲ ಚಾಣಾಕ್ಷರು ಅಳೆದೂ ತೂಗಿ ಫೈನಲ್ ಮಾಡುವ ಇರಾದೆಯಲ್ಲಿದ್ದಾರೆ. ಅದ್ರಲ್ಲೂ ಅಧ್ಯಕ್ಷ ಸ್ಥಾನ ಹೇಳಿ ಕೇಳಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಹೀಗಿದ್ದಾಗ ಅಲ್ಲಿ ಥಟ್ಟಂತ ಗುಂಯ್ ಗುಟ್ಟಿದ ಹೆಸ್ರೇ, ಒನ್ ಆಂಡ್ ಓನ್ಲಿ ಕುಸುಮಾ ನಾಗಭೂಷಣ ಹಾವಣಗಿ. ಇಲ್ಲಿ, ಬಿಜೆಪಿ ಮಂಡಲಾಧ್ಯಕ್ಷರಾಗಿ ಬಿಜೆಪಿಯ ಮೂಲ ಕುಳವಾಗಿದ್ದ ನಾಗಭೂಷಣ ಹಾವಣಗಿ, ಯಾವಾಗ ಹೆಬ್ಬಾರ್ ಸಾಹೇಬ್ರ ಸುಪುತ್ರ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಗೊಂಡ್ರೋ ಆ ಕ್ಷಣವೇ ಹೆಜ್ಜೆಯ ಮೇಲೋಂದ್ ಹೆಜ್ಜೆಯ ಹಾಕುತ ಹಿಂಬಾಲಿಸಿದವರು. ಹೀಗಾಗಿ, ಹೆಬ್ಬಾರ್ ಹೃದಯಾಂತರಾಳದಲ್ಲಿ ಅದೇಂತದ್ದೋ ಸ್ಥಾನ ಪಡೆದಿರೋ ನಾಗಭೂಷಣರಿಗೆ ವರ ಮಹಾಲಕ್ಷ್ಮಿ ಹಬ್ಬದ ಗಿಫ್ಟು ಅಂತಾ ಅಧ್ಯಕ್ಷ ಪದವಿ ಕೊಟ್ಟರೂ ಅಚ್ಚರಿಯಿಲ್ಲ.

ಕುಸುಮಾ ನಾಗಭೂಷಣ್ ಹಾವಣಗಿ

ಆದ್ರೆ,…!
ನಿರಾಯಾಸವಾಗಿ, ನಾಗಭೂಷಣ ಹಾವಣಗಿಯವ್ರ ಪತ್ನಿ ಕುಸುಮಾ ಹಾವಣಗಿಯವ್ರಿಗೆ ಅಧ್ಯಕ್ಷ ಪಟ್ಟ ಕಟ್ಟಿದ್ರೆ, ಉಪಾಧ್ಯಕ್ಷರನ್ನಾಗಿ ಬಿಬಿಜಾನ್ ಕುಂಕೂರ್ ಮೇಡಂ ರನ್ನು ನೇಮಿಸೋ ಲೆಕ್ಕಾಚಾರವಿದೆ. ಆದ್ರೆ, ಇಲ್ಲಿ ಕಟಾನ್ ಕಟಿ ಮೇಜಾರಿಟಿ ಇರೋ ಕಾರಣಕ್ಕೆ, ಸದ್ಯ ಬಿಜೆಪಿ ಪಡಸಾಲೆಯಲ್ಲಿ ಓಡಾಡಿಕೊಂಡಿರೋ ಇಬ್ಬರು ಸದಸ್ಯರನ್ನು “ಕೈ” ಅಂಗಳಕ್ಕೆ ತಂದು, ಅದ್ರಲ್ಲಿ ಒಬ್ಬರಿಗೆ ಅಧ್ಯಕ್ಷ ಪದವಿ ಕೊಟ್ಟು, ಅಧಿಕಾರ ಗಟ್ಟಿಗೊಳಿಸಿಕೊಳ್ಳುವ ಲೇಟೆಸ್ಟ್ ಪ್ಲ್ಯಾನ್ ಕೂಡ ರೆಡಿಯಾಗಿದೆ ಅನ್ನೊ ಮಾಹಿತಿ ಇದೆ. ಈ ಕುರಿತಾಗಿ ಈಗಾಗಲೇ ಆ ಇಬ್ಬರೂ ಸದಸ್ಯರನ್ನು ಸಂಪರ್ಕಿಸಿದ್ದಾರಂತೆ ಕೆಲ ಹಿರಿಯರು. ಹಾಗೇನಾದ್ರೂ ಪ್ಲ್ಯಾನ್ ವರ್ಕೌಟ್ ಆದ್ರೆ ಬಹುತೇಕ ಕುಸುಮಾ ಹಾವಣಗಿಯವ್ರಿಗೆ ಅಧ್ಯಕ್ಷ ಸ್ಥಾನ ಕೈ ತಪ್ಪುತ್ತಾ..? ಗೊತ್ತಿಲ್ಲ.

ಇದು ಜಾತೀ ಲೆಕ್ಕ..!
ಆದ್ರೆ, ಒಂದು ಮಾಹಿತಿಯ ಪ್ರಕಾರ, ಶಾಸಕ ಶಿವರಾಮ್ ಹೆಬ್ಬಾರ್ ಸಾಹೇಬ್ರಿಗೆ, ಕುಸುಮಾ ಹಾವಣಗಿಯವರೇ ಅಧ್ಯಕ್ಷರಾಗಬೇಕು ಅನ್ನೋ ಒಲವು ಇದೆಯಂತೆ. ಸತ್ಯ ಅಂದ್ರೆ ಇದು ಖಂಡಿತ ಹೆಬ್ಬಾರರ ಚಾಣಾಕ್ಷ ನಡೆಯಾಗಿರತ್ತೆ. ಇಲ್ಲಿ ಹಾವಣಗಿ ಮೇಡಂ ಅಧ್ಯಕ್ಷರಾದ್ರೆ ಅದರ ಹಿಂದೆ ಜಾತೀ ಲೆಕ್ಕಾಚಾರವೂ ವರ್ಕೌಟ್ ಆಗಿರತ್ತೆ. ಪ್ರಬಲ ಲಿಂಗಾಯತ ಸಮುದಾಯಕ್ಕೆ ಮಣೆ ಹಾಕಿದ್ರೆ, ಮುಂಡಗೋಡ ಪಟ್ಟಣದ ಮಟ್ಟಿಗೆ ತಮ್ಮ ಮುಂದಿನ ಹಾದಿಗೂ ಲಾಭವಾಗುವ ಎಲ್ಲಾ ಗುಣಾಕಾರ, ಭಾಗಾಕಾರಗಳೂ ಇವೆ ಎನ್ನಲಾಗ್ತಿದೆ. ಆದ್ರೆ, ಇದರ ಹೊರತಾಗಿಯೂ ರಾಜಕೀಯದಲ್ಲಿ ಏನ್ ಬೇಕಾದ್ರೂ ನಡೆಯಬಹುದು ಅಲ್ವಾ..? ಅದು ಬಹುಶಃ ಅಗಷ್ಟ 18 ರ ಸಂಜೆಯಷ್ಟೊತ್ತಿಗೆ ಯಲ್ಲಾಪುರದಲ್ಲಿ ಖಾತ್ರಿಯಾಗಲಿದೆ.

ಇದು ಕೇಸರಿ ಪ್ಲ್ಯಾನ್..!
ಇನ್ನು, ಕೇಸರಿ ಅಂಗಳಕ್ಕೆ ಬಂದ್ರೆ, ಇಲ್ಲಿರೋ ಕೆಲವೇ ಕೆಲವು ಚಾಣಾಕ್ಷ ತಲೆಗಳು ಅಲರ್ಟ್ ಆಗಿವೆ. ಅದ್ರಲ್ಲೂ, ಎಲ್. ಟಿ.ಪಾಟೀಲ್ ಸಾಹೇಬ್ರು ಅದೇನೇ ಆಗಲಿ ನಾವು ಕೈ ಕಟ್ಟಿ ಕೂರೋ ಮಾತೇ ಇಲ್ಲ ಅಂತಾ ಆ್ಯಕ್ಟಿವ್ ಆಗಿ ಪ್ಲ್ಯಾನ್ ಕೈಗೆತ್ತಿಕೊಂಡಿದ್ದಾರಂತೆ. ನಾವು ಬರೋಬ್ಬರಿ 10 ಜನ ಬಿಜೆಪಿ ಸದಸ್ಯ ಬಲ ಹೊಂದಿದ್ದೇವೆ. ಜೊತೆ MLA ಕೂಡ ನಮ್ಮ ಪಕ್ಷದವರೇ, ಹೀಗಿದ್ದಾಗ ನಮಗೇನು ಕೊರತೆ..? ನಮ್ಮ ಸಂಖ್ಯಾಬಲ 10+1+1 ಅಂದ್ರೆ ಬರೋಬ್ಬರಿ 12 ಅಂತಾ ಲೆಕ್ಕ ಹಾಕಿದ್ದಾರೆ. ಬಿಜೆಪಿಯಿಂದ ಗೆದ್ದು ಬಂದ 10 ಸದಸ್ಯರು, ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದ್ರೆ ನಮ್ಮ ಬಲ 12 ಆಗತ್ತೆ, ಹೀಗಾಗಿ, ನಮಗೇ ಸ್ಪಷ್ಟ ಬಹುಮತ ಅನ್ನೋದು ಬಿಜೆಪಿಗರ ಪಕ್ಕಾ ಮಾತು.

ಶಕುಂತಲಾ ನಾಯಕ್, ಬಿಜೆಪಿ

ಬಿಜೆಪಿಯಿಂದ ಅಭ್ಯರ್ಥಿ ಯಾರು..?
ಅಸಲು, ನಾವೂ ಒಂದು ಕೈ ನೋಡೇ ಬಿಡ್ತಿವಿ ಅಂತಾ ಒಳಗೊಳಗೆ ಜಿದ್ದಿಗೆ ಬಿದ್ದಿರೋ ಬಿಜೆಪಿ ಬಳಗದಲ್ಲಿ ಸದ್ಯ ಅಧ್ಯಕ್ಷರಾಗುವ ಅಭ್ಯರ್ಥಿ ಯಾರು ಅನ್ನೋ ಪ್ರಶ್ನೆ ಎದುರಾಗಿದೆ. ಇಲ್ಲಿ ಮೂಲ ಬಿಜೆಪಿಗರಿಗೇ ಮಣೆ ಹಾಕುವ ಸಾಧ್ಯತೆ ಇದ್ದು, ಶಕುಂತಲಾ ನಾಯಕ್ ಬಹುತೇಕ ಬಿಜೆಪಿಯ ಅಧ್ಯಕ್ಷ ಪದವಿಗೆ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಅದ್ರ ಜೊತೆ ಹಾಗೇನಾದ್ರೂ ಒಂದುವೇಳೆ, ಆಗಿದ್ದು ಆಗಲಿ ಅಂತಾ ಒಪ್ಪಿಕೊಂಡ್ರೆ ನಿರ್ಮಲಾ ಬೆಂಡಲಗಟ್ಟಿ ಅಥವಾ ಸುವರ್ಣ ಕೊಟಗುಣಸಿ ಯವರಿಗೂ ಒಂದು ಅವಕಾಶ ಕೊಟ್ರೂ ಅಚ್ಚರಿಯಿಲ್ಲ. ಆದ್ರೆ, ಬಹುತೇಕ ಶಕುಂತಲಾ ನಾಯಕ್ ಬಿಜೆಪಿಯಿಂದ ಅಧ್ಯಕ್ಷ ಅಭ್ಯರ್ಥಿಯಾಗೋದು ಪಕ್ಕಾ ಎನ್ನಲಾಗ್ತಿದೆ. ಜೊತೆಗೆ ಉಪಾಧ್ಯಕ್ಷೆ ಅಭ್ಯರ್ಥಿಯಾಗಿ ರಾಜೇಶ್ವರಿ ಅಂಡಗಿ ಮೇಡಂ ಕಣಕ್ಕಿಳಿಯೋದು ಬಹುತೇಕ ಫಿಕ್ಸ್ ಎಂಬಂತಾಗಿದೆ.

ಶಾಸಕರಿಗೂ ವಿಪ್..?
ಇನ್ನು, ಬಿಜೆಪಿ ಮುಂಡಗೋಡ ಪಟ್ಟಣ ಪಂಚಾಯತಿ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಗೆ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಲು ರೆಡಿಯಾಗಿದೆ. ಅದ್ರಲ್ಲೂ ಶಾಸಕ ಶಿವರಾಮ್ ಹೆಬ್ಬಾರರಿಗೂ ವಿಪ್ ನೀಡುವ ಸಾಧ್ಯತೆ ಇದೆ. ಹೀಗಾಗಿ, ಈ ಚುನಾವಣೆ ನಿಜಕ್ಕೂ ಮುಂಡಗೋಡಿಗರ ಪಾಲಿಗೆ ಕುತೂಹಲ ಮೂಡಿಸಿದೆ. ಅದೇನೇ ಆದ್ರೂ ಅಗಷ್ಟ 20 ರ ವರೆಗೆ ಕಾಯಬೇಕಿದೆ ಅಷ್ಟೆ..!

error: Content is protected !!