ಪಂಪಸೆಟ್ ದುರಸ್ತಿ ವೇಳೆ ವಿದ್ಯುತ್ ತಗುಲಿ ತಂದೆ ಮಗ ದಾರುಣ ಸಾವು

ಹಾವೇರಿ: ಪಂಪ್‌ಸೆಟ್ ದುರಸ್ತಿ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ತಂದೆ-ಮಗ ಸಾವನ್ನಪ್ಪಿರುವ ಘಟನೆ ರಾಣೇಬೆನ್ನೂರು ತಾಲ್ಲೂಕಿನ ಪತ್ತೇಪುರ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಕರಬಸಪ್ಪ ಕಡೇನಾಯಕನಹಳ್ಳಿ (50) ಹಾಗೂ ಅವರ ಪುತ್ರ ದರ್ಶನ ಕಡೇನಾಯಕನಹಳ್ಳಿ (26) ಎಂದು ಗುರುತಿಸಲಾಗಿದೆ. ಕರಬಸಪ್ಪ ಮತ್ತು ದರ್ಶನ ಇಬ್ಬರೂ ಸೇರಿಕೊಂಡು ಪಂಪ್ ಸೆಟ್ ದುರಸ್ತಿ ಮಾಡಲು ಮುಂದಾಗಿದ್ದರು. ಭತ್ತದ ಬೆಳೆಗೆ ನೀರು ಹಾಯಿಸಲು ಮೋಟಾರ್‌ ಆನ್ ಮಾಡಲು ಹೋದಾಗ ಈ ದುರ್ಘಟನೆ ನಡೆದಿದೆ.

ವಿದ್ಯುತ್ ಸ್ಪರ್ಶಕ್ಕೆ ಪಂಪ್ ಸೆಟ್ ಮೇಲೆಯೇ ಬಿದ್ದು ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಮಳೆಗಾಲದಲ್ಲಿ ಈ ರೀತಿಯ ವಿದ್ಯುತ್ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಸಾರ್ವಜನಿಕರು ಮುಂಜಾಗ್ರತಾ ಕ್ರಮವಹಿಸಿ ಎಂದು ಹೆಸ್ಕಾಂ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

error: Content is protected !!