ಕಾರವಾರದಲ್ಲಿ ಸಿಎಂ ಅಧ್ಯಕ್ಷತೆಯ ಸಭೆ,  ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ನೀಡಿದ ಖಡಕ್ ಸೂಚನೆಗಳೇನು ಗೊತ್ತಾ..?

ಕಾರವಾರ: ಮುಖ್ಯಮಂತ್ರಿ ಅವರು ಕಾರವಾರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕೆಲವು ಪ್ರಮುಖ ಸೂಚನೆಗಳನ್ನು ನೀಡಿದರು.‌

ತಕ್ಷಣ ಹಾನಿಯ ವರದಿ ನೀಡಿ..!
ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟಕ್ಕೆ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಪರಿಹಾರ ಒದಗಿಸಲು ತಕ್ಷಣ ಹಾನಿಯ ವರದಿ ಸಲ್ಲಿಸಿ.
ಕದ್ರಾ ಅಣೆಕಟ್ಟೆಯಿಂದ ಹೊರಬಿಡುವ ನೀರಿನಿಂದ ತೊಂದರೆಗೊಳಗಾಗುವ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವ ಬಗ್ಗೆ ಅಂತಿಮ ತೀರ್ಮಾನ ಮಾಡಿ.

ಮಳೆ ಅನಾಹುತ ಮತ್ತು‌ ಪ್ರವಾಹದಿಂದ ಆದ ಜೀವಹಾನಿಗೆ ತುರ್ತಾಗಿ ಪರಿಹಾರ ಕೊಡಬೇಕು. ಕೋಸ್ಟಲ್ ಲೈನ್ ನಲ್ಲಿ ವಿದ್ಯುತ್ ಕಂಬಗಳ ಅಳವಡಿಕೆ, ಅಗತ್ಯ ಇರುವ ಕಡೆ ವೈರ್ ಗಳ ದುರಸ್ತಿ ಮತ್ತು ಬದಲಾವಣೆಗೆ ಮಾಡಬೇಕು.

ಹೆದ್ದಾರಿ ಟೋಲ್ ಸಂಗ್ರಹ ಬೇಡ..!
ಜಿಲ್ಲೆಯಲ್ಲಿ ರಾಷ್ಟ್ರಿಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ ಹೆದ್ದಾರಿ ಪ್ರಾಧಿಕಾರದವರು ಟೋಲ್ ಏಕೆ ಸಂಗ್ರಹಿಸುತ್ತಿದ್ದೀರಿ? ಇದು ಸರಿಯಿಲ್ಲ. 2016ಕ್ಕೆ ಕಾಮಗಾರಿ ಮುಕ್ತಾಯಗೊಳಿಸಬೇಕಿದ್ದರೂ ಸಹ ಇದುವರೆಗೆ ಮುಕ್ತಾಯಗೊಳಿಸದೇ ಈ ಕಾಮಗಾರಿ ಬಗ್ಗೆ ಕೇಂದ್ರ ಸಚಿವರಿಗೂ ದಾರಿತಪ್ಪಿಸುವುದಲ್ಲದೆ ರಾಜ್ಯ ಸರ್ಕಾರಕ್ಕೂ ತಪ್ಪು ಮಾಹಿತಿ ನೀಡುತ್ತಿದ್ದೀರಿ. ಈ ಬಗ್ಗೆ ಕೇಂದ್ರ ಹೆದ್ದಾರಿ ಸಚಿವರಿಗೆ ತೀಕ್ಷ್ಣವಾಗಿ ಪತ್ರ ಬರೆಯುತ್ತೇನೆ.

ಮುನ್ನೆಚ್ಚರಿಕೆ ವಹಿಸಿ..!
ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಕೂಡ ಮಳೆಯಾಗುವ ಸಾಧ್ಯತೆಗಳಿದ್ದು ಈ ರೀತಿಯಾಗಿ ಗುಡ್ಡ ಕುಸಿತ ಸೇರಿದಂತೆ ಯಾವುದೇ ರೀತಿಯ ಅಪಾಯವಾಗದಂತೆ ಜಿಲ್ಲಾಡಳಿತದಿಂದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿರುವ ಅಪಾಯಕಾರಿ ಪ್ರದೇಶಗಳಲ್ಲಿನ ಗ್ರಾಮಗಳಲ್ಲಿ ಗ್ರಾಮಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳನ್ನು ರಚಿಸಿಕೊಂಡು ಅಲ್ಲಿನ ಪರಿಸ್ಥಿತಿಯ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಜಿಲ್ಲೆಯ ಎಲ್ಲಾ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಜನರಿಗೆ ಅಧಿಕಾರಿಗಳ ಮೇಲೆ ವಿಶ್ವಾಸ ಮೂಡುವಂತೆ ಕೆಲಸ ನಿರ್ವಹಿಸಬೇಕು ಅಂತಾ ಸೂಚಿಸಿದ್ರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ,ಶಾಸಕರಾದ ಸತೀಶ್ ಸೈಲ್, ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ್, ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಅಪರ ಕಾರ್ಯದರ್ಶಿ ಅತೀಕ್ , ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಧಾನ ಕಾರ್ಯದರ್ಶಿ ರಶ್ಮಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ , ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ, ಜಿ.ಪಂ. ಸಿಇಒ ಈಶ್ವರ ಕುಮಾರ್ ಕಾಂದು, ಎಸ್ಪಿ ನಾರಾಯಣ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು

error: Content is protected !!