ಜಿಲ್ಲೆಯಲ್ಲಿ ಆರ್ಭಟಿಸುತ್ತಿರುವ ಮಳೆ, 26 ಕಾಳಜಿ ಕೇಂದ್ರಗಳಲ್ಲಿ 2368 ಜನರಿಗೆ ಆಶ್ರಯ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ.

ಕಾರವಾರ: ಜಿಲ್ಲೆಯಲ್ಲಿ ವರುಣ ಎಡಬಿಡದೇ ಆರ್ಭಟಿಸುತ್ತಿದ್ದು, ಮಂಗಳವಾರ ಸಂಜೆಯ ವೇಳೆಗೆ ಕಾರವಾರ ತಾಲೂಕಿನಲ್ಲಿ 6, ಕುಮಟಾ ತಾಲೂಕಿನಲ್ಲಿ 6 ಮತ್ತು ಹೊನ್ನಾವರ ತಾಲೂಕಿನಲ್ಲಿ 14 ಸೇರಿದಂತೆ ಒಟ್ಟು 26 ಕಾಳಜಿ ಕೇಂದ್ರಗಳನ್ನು ತೆರೆದಿದ್ದು, ಇವುಗಳಲ್ಲಿ 2368 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಕಾಳಜಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಊಟದ ವ್ಯವಸ್ಥೆ ಮತ್ತು ರಾತ್ರಿ ತಂಗಲು ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದ್ದು, ವೈದ್ಯರ ತಂಡದಿ0ದ ಆರೋಗ್ಯ ಪರಿಶೀಲನೆ ಮತ್ತು ಅಗತ್ಯವಿರುವ ಔಷಧ ಸೌಲಭ್ಯವನ್ನು ಒದಗಿಸಲಾಗಿದೆ.

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 3 ಮನೆಗಳು ಪೂರ್ಣ ಹಾನಿ, 1 ಮನೆಗೆ ತೀವ್ರ ಹಾನಿ ಹಾಗೂ 18 ಮನೆಗಳಿಗೆ ಭಾಗಶ: ಹಾನಿಯಾಗಿದೆ. ಕಾರವಾರ ತಾಲೂಕಿನಲ್ಲಿ ಮನೆ ಕುಸಿದು ಒಂದು ಮಾನವ ಜೀವ ಹಾನಿಯಾಗಿದೆ. ಅಂಕೋಲ ತಾಲೂಕಿನ ಶಿರೂರು ಗ್ರಾಮದಲ್ಲಿ ಭೂ ಕುಸಿತ ಸಂಭವಿಸಿದ್ದು, ಇಲ್ಲಿನ ನಿಖರ ಮಾನವ ಜೀವ ಹಾನಿಯ ಕುರಿತು ವರದಿ ನಿರೀಕ್ಷಿಸಲಾಗುತ್ತಿದ್ದು, ಈ ಪ್ರದೇಶದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆಯ 2 ತಂಡಗಳು ಸತತವಾಗಿ ರಕ್ಷಣಾ ಕಾರ್ಯಚರಣೆ ನಡೆಸುತ್ತಿವೆ. ಜಿಲ್ಲೆಯ ಹಲವು ಕಡೆಗಳಲ್ಲಿ ಗುಡ್ಡ ಕುಸಿತದಿಂದ ರಸ್ತೆ ಸಂಪರ್ಕ ವ್ಯವಸ್ಥೆಗೆ ಹಾನಿಯಾಗಿದ್ದು, ಅದನ್ನು ಸರಿಪಡಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ.

ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಸಂಭವಿಸಿರುವ ಭೂ ಕುಸಿತದಲ್ಲಿ ಎರಡು ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿಯಲ್ಲಿ ಉರುಳಿ ಬಿದ್ದಿದ್ದು, ಸದರಿ ಗ್ಯಾಸ್ ಟ್ಯಾಂಕರ್‌ಗಳು ಸೋರಿಕೆಯಾಗುವ ಸಾಧ್ಯತೆ ಇರುವುದರಿಂದ , ನದಿ ದಡದಲ್ಲಿರುವ ಮನೆಗಳಲ್ಲಿ ವಾಸವಿರುವ ಸಾರ್ವಜನಿಕರು, ಕುಟುಂಬಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಪರಿಣಿತರ ತಂಡದಿ0ದ ಪರಿಶೀಲನೆ ನೆಡೆಸುತ್ತಿದ್ದು, ಅಗತ್ಯ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಗುಡ್ಡ, ನದಿ, ಹಳ್ಳ, ಕೆರೆ ಹತ್ತಿರದಲ್ಲಿ ವಾಸಿಸುತ್ತಿರುವ ಕುಟುಂಬಸ್ಥರನ್ನು ಮತ್ತು ಸಾರ್ವಜನಿಕರನ್ನು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಅವಶ್ಯಕತೆ ಇರುವುದರಿಂದ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಲು ಮತ್ತು ಕಟ್ಟುನಿಟ್ಟನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಜುಲೈ 18 ರ ವರೆಗೆ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಸಾರ್ವಜನಿಕರು ಯಾವುದೇ ಸಮಸ್ಯೆಗಳಲ್ಲಿ ಜಿಲ್ಲಾಡಳಿತದ ಉಚಿತ ತುರ್ತು ಸಹಾಯವಾಣಿ ಸಂಖ್ಯೆ 1077 ಗೆ ಹಾಗೂ ಮೊ.ಸಂ. ಸಂಖ್ಯೆ 94835 11015 ಕರೆ , ಮೆಸೆಜ್, ವಾಟ್ಪಾಪ್ ಸಂದೇಶ ಮತ್ತು ವಾಟ್ಸಾಪ್ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

error: Content is protected !!