ಹಾವೇರಿ: 18 ವರ್ಷದ ಬಾಲಕನೊಬ್ಬ ಬೈಕ್ ಕೊಡಿಸು ಅಂತಾ ಹಠ ಹಿಡಿದು, ತಾಯಿಯೊಂದಿಗೆ ಜಗಳವಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಮಗ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡ ತಾಯಿಯೂ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂತಹದ್ದೊಂದು ಮನಕಲಕುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಕರೂರ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಿರುವವರನ್ನು ಧನರಾಜ ಸುರೇಶ ನಾಯಕ್ (18) ಹಾಗೂ ಈತನ ತಾಯಿ ಬಾಗ್ಯಮ್ಮ ನಾಯಕ (43) ಎಂದು ತಿಳಿದು ಬಂದಿದೆ. ಧನರಾಜ ಹರಿಹರದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ತನಗೆ ಬೈಕ್ ತೆಗೆದುಕೊಳ್ಳಲು ಹಣ ಬೇಕೆಂದು ತಂದೆ- ತಾಯಿ ಬಳಿ ಶನಿವಾರ ಬೆಳಿಗ್ಗೆ ಜಗಳ ತೆಗೆದಿದ್ದ. ಕೂಲಿ ಮಾಡಿಕೊಂಡಿರುವ ತಂದೆ ಸುರೇಶ ಆಯ್ತು ಹೇಗಾದರೂ ಮಾಡಿ ಕೊಡಿಸುತ್ತೇನೆ ಎಂದು ಕೆಲಸಕ್ಕೆ ಹೋಗಿದ್ದರು.

ನಂತರದಲ್ಲಿ ತಾಯಿ ಮಗನಿಗೆ ಬೈಕ್ ತಗೆದುಕೊಳ್ಳವುದು ಬೇಡ ಎಂದು ತಮ್ಮ ಸ್ಥಿತಿಯ ಬಗ್ಗೆ ಬುದ್ದಿ ಮಾತು ಹೇಳಿದ್ದರಂತೆ. ಹೀಗಾಗಿ, ತಾಯಿ ಮಗನ ನಡುವೆ ಜಗಳ ನಡೆದಿದೆ. ಈ ವೇಳೆ ತಾಯಿ ಮಗನಿಗೆ ಬುದ್ದಿ ಹೇಳಿ ಓದಿನ ಕಡೆಗೆ ಗಮನ ಹರಿಸುವಂತೆ ಹೇಳಿದ್ದಾರೆ. ಆದರೆ ಮಗ ತಾಯಿಯ ಮಾತಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾನೆ. ಇದರಿಂದ ಬೇಸತ್ತ ಭಾಗ್ಯಮ್ಮ ರೈಲಿಗೆ ಬಿದ್ದು ಆತ್ಮ ಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ, ಆಗ ಜನರು ತಾಯಿಯನ್ನು ತಡೆದು ಮನೆಗೆ ಕರೆತಂದಿದ್ದಾರೆ.
ಇತ್ತ ಮನೆಗೆ ತಾಯಿ ಬಂದ ವೇಳೆ ಮಧ್ಯಾಹ್ನ ಧನರಾಜ ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮನೆಗೆ ಬಂದ ತಾಯಿ ಮಗ ಆತ್ಮ
ಹತ್ಯೆ ಮಾಡಿಕೊಂಡಿರುವುದನ್ನು ಕಂಡು ದಂಗಾಗಿದ್ದಾರೆ. ದುಃಖಿತರಾದ ತಾಯಿ ಭಾಗ್ಯಮ್ಮ ಅವರು ಕರೂರ ರೈಲು ನಿಲ್ದಾಣದ ಬಳಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಕುಮಾರಪಟ್ಟಣ ಪಿಎಸ್‌ಐ ಪ್ರವೀಣ ವಾಲೀಕಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!