ಮುಂಡಗೋಡ ಪಟ್ಟಣದ ಟೌನ್ ಹಾಲ್‌ನಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್‌ನ ಸಹೋಗದಲ್ಲಿ, ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕು ಕಾರ್ಯಕ್ರಮದ ಸಂಪೂರ್ಣತಾ ಅಭಿಯಾನ ಉತ್ಸವ ಹಮ್ಮಿಕೊಳ್ಳಲಾಗಿತ್ತು.
ನೀತಿ ಆಯೋಗದ ಪ್ರತಿನಿಧಿಯಾದ ರೀಷಬ್ ಜೈನ್, ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿಗಳಾದ ವಿನೋದ ಅಣ್ವೇಕರ, ತಾಲೂಕಾ ಪಂಚಾಯತ್ ಇಓ ಟಿ.ವೈ. ದಾಸನಕೊಪ್ಪ ಅವರು ಜಂಟಿಯಾಗಿ ಉದ್ಘಾಟಿಸಿದರು..
ಉತ್ಸವ ಉದ್ಘಾಟನೆಗೂ ಮುನ್ನ ತಾಲ್ಲೂಕು ಪಂಚಾಯತಿ ಕಚೇರಿಯಿಂದ ನಗರದ ಟೌನ್ ಹಾಲ್ ವರೆಗೂ ಆಶಾ, ಅಂಗನವಾಡಿ, ತಾಪಂ ಅಧಿಕಾರಿಗಳು, ಸಿಬ್ಬಂದಿಗಳು ಕಾಲ್ನಡಿಗೆ ಜಾಥಾ ನಡೆಸಿ ಸಾರ್ವಜನಿಕರ ಗಮನ ಸೆಳೆದ್ರು. ನಂತರ, ಕೃಷಿ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ ಇಲಾಖೆ ಸೇರಿದಂತೆ ಎನ್‌ಆರ್‌ಎಲ್‌ಎಂ ಯೋಜನೆಯಡಿ ನೊಂದಾಯಿತ ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಂದ ತಯಾರಿತ ಹಲವು ಬಗೆಯ ಆದಾಯೋತ್ಪನ್ನ ಚಟುವಟಿಕೆಗಳ ಮೇಳವನ್ನು ಉದ್ಘಾಟಿಸಿ ಅಗತ್ಯ ಮಾಹಿತಿ ಪಡೆಯುವ ಮೂಲಕ ಅನೇಕ ಸಲಹೆ-ಸೂಚನೆ ನೀಡಿದರು.
ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ ಅವರು ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕು ಕಾರ್ಯಕ್ರಮದ ಪ್ರತಿಜ್ಞಾ ವಿಧಿ ಭೋದಿಸಿದರು. ತಾಲ್ಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೈ. ದಾಸನಕೊಪ್ಪ ಮಾತನಾಡಿ, ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕು ಕಾರ್ಯಕ್ರಮ ಘೋಷಣೆ ಹಿನ್ನಲೆ, ಸಂಪೂರ್ಣತಾ ಅಭಿಯಾನ ಉತ್ಸವ ಅಯೋಜನೆ ಹಾಗೂ ನೀತಿ ಆಯೋಗ ನೀಡಿದ ವಿವಿಧ ಆಯಾಮಗಳಲ್ಲಿನ ಅಭಿವೃದ್ಧಿ ಕಾರ್ಯಗಳ ಮುನ್ಸೂಚಿ ಕುರಿತು ವಿವರವಾಗಿ ತಿಳಿಸಿದರು.
ಇನ್ನು, ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕು ಕಾರ್ಯಕ್ರಮದಡಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಹಾಗೂ ಬಹುಮಾನ, ಕೃಷಿ ಇಲಾಖೆಯಿಂದ ರೈತರಿಗೆ ಪೂರಕವಾಗಿ ಹೊರ ತಂದ ಮಣ್ಣಿನ ಮಹತ್ವ ಸಾರುವ ಮಣ್ಣಿನ ಪ್ರಮಾಣಪತ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗರ್ಭಿಣಿ ತಾಯಂದಿರಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಯಿತು. ಜೊತೆಗೆ ನೀತಿ ಆಯೊಗದ ಪ್ರತಿನಿಧಿಗಳಿಗೆ ಎನ್‌ಆರ್‌ಎಲ್‌ಎಂ ಯೋಜನೆಯಡಿ ಸ್ವಸಹಾಯ ಸಂಘಗಳ ಸದಸ್ಯರು ಅತಿಥಿ ಗಣ್ಯರಿಗೆ ಗೌರವಪೂರ್ವಕವಾಗಿ ನೀಡಲು ತಯಾರಿಸಿದ ವಿವಿಧ ಆದಾಯೋತ್ಪನ್ನಗಳನ್ನು ಒಳಗೊಂಡ ಉಡುಗೊರೆ ಬುಟ್ಟಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳು, ನರೇಗಾ ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಛಬ್ಬಿ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ತಾಪಂ ಅಧಿಕಾರಿಗಳು, ಸಿಬ್ಬಂದಿಗಳು, ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ, ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕು ಕಾರ್ಯಕ್ರಮದ ತಾಲ್ಲೂಕು ಸಂಯೋಜಕರು, ಎಂಐಎಸ್ ಹಾಗೂ ಐಇಸಿ ಸಂಯೋಜಕರು ಹಾಗೂ ಇತರರು ಉಪಸ್ಥಿತರಿದ್ದರು.