ಶಿಗ್ಗಾವಿ ಕ್ಷೇತ್ರದ ಉಪಚುನಾವಣೆ ಸಂಬಂಧ ಕಾಂಗ್ರೆಸ್ ನಲ್ಲಿ ಬಣಗಳ ತಿಕ್ಕಾಟ ಮಿತಿ ಮೀರಿದೆ. ಉಪಚುನಾವಣೆ ಟಿಕೆಟ್ ಹಂಚಿಕೆ ವಿಚಾರ ಬಹುತೇಕ ಕಗ್ಗಂಟಾಗಿದೆ. ಹೀಗಾಗಿ, ಇಂದು ಟಿಕೆಟ್ ಹಂಚಿಕೆ ಉಸ್ತುವಾರಿ ಸಮಿತಿ ಶಿಗ್ಗಾವಿಗೆ ಬಂದಿಳಿಯಲಿದೆ. ಸಚಿವ ಈಶ್ವರ ಖಂಡ್ರೆ ನೇತೃತ್ವದ ಸಮಿತಿಯಿಂದ ಶಿಗ್ಗಾವಿಯಲ್ಲಿ ಬಡಿದಾಟದ ಬಣಗಳ ಜೊತೆ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಭೆ ನಿಕ್ಕಿಯಾಗಿದೆ.
ಪೊಲೀಸ್ ಬಂದೋಬಸ್ತ್..!
ಅಸಲು, ಎರಡು ದಿನಗಳ ಹಿಂದಷ್ಟೇ ಶಿಗ್ಗಾವಿ ಪ್ರವಾಸಿ ಮಂದಿರದಲ್ಲಿ ಸಚಿವ ಸತೀಶ್ ಜಾರಕೀಹೊಳಿ ನೇತೃತ್ವದಲ್ಲಿ ಸಭೆಯೊಂದು ನಡೆದಿತ್ತು. ಆ ವೇಳೆ ಇಲ್ಲಿನ ಖಾದ್ರಿ ಬಣ ಹಾಗೂ ಪಠಾಣ್ ಬಣಗಳ ಕಾರ್ಯಕರ್ತರು ಪರಸ್ಪರ ಕಚ್ಚಾಡಿಕೊಂಡಿದ್ರು. ಈ ಕಾರಣಕ್ಕಾಗಿ, ಇಂದಿನ ಸಭೆಯಲ್ಲಿಯೂ ಗಲಾಟೆ ಸಾಧ್ಯತೆ ಹಿನ್ನೆಲೆಯಲ್ಲಿ, ಸಭೆ ನಡೆಯುವ ಖಾಸಗಿ ಕಲ್ಯಾಣ ಮಂಟಪದ ಸುತ್ತ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿದೆ.
ಎರಡು ಪ್ರತ್ಯೇಕ ವೇದಿಕೆ..!
ಇನ್ನು ಟಿಕೆಟ್ ಹಗ್ಗಜಗ್ಗಾಟದಲ್ಲಿ ಪರಸ್ಪರ ಕಚ್ಚಾಟಕ್ಕೆ ಇಳಿದಿರೋ ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ಹಾಗೂ ಯಾಸಿರ್ ಖಾನ್ ಪಠಾಣ್ ಬೆಂಬಲಿಗರ ಅಭಿಪ್ರಾಯ ಕೇಳಲಾಗತ್ತೆ. ಹೀಗಾಗಿ, ಕಲ್ಯಾಣ ಮಂಟಪದ ಬಳಿ ಎರಡು ಪ್ರತ್ಯೇಕ ವೇದಿಕೆ ನಿರ್ಮಾಣವಾಗಿದೆ. ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಬಣದಿಂದ ಹೊರಾಂಗಣದಲ್ಲಿ ಪ್ರತ್ಯೇಕ ವೇದಿಕೆ ನಿರ್ಮಾಣವಾಗಿದೆ. ಹಾಗೇಯೇ ಕಲ್ಯಾಣ ಮಂಟಪದ ಒಳಗೆ ಮತ್ತೊಂದು ವೇದಿಕೆ ನಿರ್ಮಾಣವಾಗಿದೆ.
ಸಚಿವರಾದ ಸಂತೋಷ ಲಾಡ್, ಶಿವಾನಂದ ಪಾಟೀಲ, ವಿನಯ ಕುಲಕರ್ಣಿ, ಸಲೀಂ ಅಹ್ಮದ್ ಒಳಗೊಂಡ ಸಮಿತಿಯಿಂದ ಸಭೆ ನಡೆಯಲಿದ್ದು, ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳಿಂದ ಶಕ್ತಿ ಪ್ರದರ್ಶನಕ್ಕೆ ಸಿದ್ದತೆ ಜೋರಾಗಿದೆ. ಉಸ್ತುವಾರಿ ಸಮಿತಿ ಮುಂದೆ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರಿಂದ ಮತ್ತೆ ಗಲಾಟೆ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.