ಹೊನ್ನಾವರ: ಇಲ್ಲಿನ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಖಾತಾ ಬದಲಾವಣೆಗಾಗಿ ವ್ಯಕ್ತಿ ಓರ್ವರಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರು ದಾಳಿ ನಡೆಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣ ಪಂಚಾಯತದಲ್ಲಿ ನಡೆದಿದೆ.
ಪಟ್ಟಣ ಪಂಚಾಯತ ಅಧಿಕಾರಿ ಪ್ರವೀಣ ಕುಮಾರ ಎಂಬುವವರು ಚಂದ್ರಹಾಸ ಎಂಬುವವರ ಬಳಿ ಜಮೀನಿಗೆ ಸಂಬಂಧಿಸಿ A ಖಾತಾ ಬದಲಾವಣೆಗಾಗಿ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ ಮೊದಲ ಹಂತವಾಗಿ ಚಂದ್ರಹಾಸ ಅವರು ಇಂದು 60ಸಾವಿರ ನಗದು ಕೊಡುತ್ತಿದ್ದ ವೇಳೆ ಲೋಕಾಯುಕ್ತರು ನಡೆಸಿದ ದಾಳಿಯ ವೇಳೆ ಸಿಕ್ಕಿಬಿದ್ದಿದ್ದಾರೆ.
ಕಾರವಾರ ಲೋಕಾಯುಕ್ತ ಎಸ್ಪಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ತನಿಖೆ ನಡೆಸುತ್ತಿದ್ದಾರೆ. ಈ ಅಧಿಕಾರಿ ಇದೇ ರೀತಿ ಅನೇಕರಿಂದ ಲಂಚ ಪಡೆಯುತ್ತಿದ್ದ ಆರೋಪ ಕೂಡ ಹಿಂದಿನಿಂದಲ್ಲೂ ಕೇಳಿ ಬಂದಿತ್ತು. ಇದೆ ವಿಚಾರವಾಗಿ ಕೆಲ ದಿನಗಳ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಈತನಿಗೆ ತರಾಟೆಗೆ ತೆಗೆದುಕೊಂಡಿದ್ದರು.