ಇಂದೂರು ಗ್ರಾಪಂ ನಲ್ಲಿ ಉದ್ಯೋಗ ಖಾತ್ರಿಯಲ್ಲಿ ಚೊಂಬಾಟ..! ತಾಲೂಕಿನಲ್ಲಿ ಅವನೊಬ್ಬ ನುಂಗಣ್ಣನಿಂದ ಇಡೀ ಯೋಜನೆಯೇ ಉಳ್ಳವರ ಪಾಲಾಗ್ತಿದೆಯಾ..?

ಮುಂಡಗೋಡ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಬಹುತೇಕ ಹಳ್ಳ ಹಿಡಿತಿದೆಯಾ..? ಅವನೊಬ್ಬ ಬಕಾಸುರ ಬಗಬಂಡಿಯಿಂದ ಬಡ ಕೂಲಿ ಕಾರ್ಮಿಕರಿಗೆ ಬದುಕಾಗಬೇಕಿದ್ದ ಉದ್ಯೋಗ ಖಾತ್ರಿ ಯೋಜನೆ, ಕೆಲ ಆಸೆ ಬುರುಕ ಗ್ರಾಮ ಪಂಚಾಯತಿ ಮೆಂಬರುಗಳಿಗೆ ರೊಕ್ಕ ಗಳಿಸುವ ಅಡ್ಡ ಕಸುಬು ಆಗ್ತಿದೆಯಾ..? ಇಂತಹದ್ದೊಂದು ಅನುಮಾನ ಇಂದೂರಿನ ಈ ಗ್ರಾಮ‌ ಪಂಚಾಯತಿ ಸದಸ್ಯನ ಮಾತುಗಳನ್ನು ಕೇಳಿದ್ರೆ ಎಂತವರಿಗೂ ಅರ್ಥವಾಗ್ತಿದೆ.

ಅದು ಇಂದೂರು ಪಂಚಾಯತಿ..!
ಯಸ್, ಇಂದೂರು ಗ್ರಾಮ ಪಂಚಾಯತಿ ತಾಲೂಕಿನಲ್ಲಿ ಇದುವರೆಗೂ ಒಂದಿಷ್ಟು ಮಾನ ಮರ್ಯಾದೆ ಅಂತಾ ಇಟ್ಕೊಂಡು ಹೆಸರುವಾಸಿಯಾಗಿತ್ತು. ಆದ್ರೆ, ಈಗ ಅದೇ ಗ್ರಾಮ ಪಂಚಾಯತಿಯ ಗೌರವಾನ್ವಿತ ಸದಸ್ಯರುಗಳು, ಸಿಬ್ಬಂದಿಗಳೇ ಅಲ್ಲಿನ ಅಸಲೀ ಹೂರಣ ಬಿಚ್ಚಿಟ್ಟಿದ್ದಾರೆ. ಬಡ ಕೂಲಿ ಕಾರ್ಮಿಕರಿಗಾಗಿ ಸರ್ಕಾರ ರೂಪಿಸಿರೋ ಮಹತ್ವಾಕಾಂಕ್ಷೆಯ ಉದ್ಯೋಗ ಖಾತ್ರಿ ಯೋಜನೆಯನ್ನು ಹೇಗೇಲ್ಲ ಹಳ್ಳಹಿಡಿಸಿದ್ದಾರೆ ಅಂತಾ ಖುದ್ದು, ಪಂಚಾಯತಿ ಸದಸ್ಯರೇ ಆರೋಪಿಸಿದ್ದಾರೆ.


ಅಸಲು, ಸರ್ಕಾರ ಬಡ ಕೂಲಿ ಕಾರ್ಮಿಕರಿಗಾಗೇ ರೂಪಿಸಿರೋ ಮಹತ್ವದ ಈ ಯೋಜನೆ, ಬಡ ಕೂಲಿ ಕಾರ್ಮಿಕರ ಬದಲಾಗಿ ಜೆಸಿಬಿ ಮಾಲೀಕರ ಪಾಲಾಗುತ್ತಿದೆ. ಅದ್ರಲ್ಲೂ ಅಂತಹ ಕಾಮಗಾರಿಗಳು ಅವರವರ ಇಚ್ಚೆಯಂತೆ, ತಮಗಿಷ್ಟ ಬಂದಂತೆ ನಡೆದು ಹೋಗುತ್ತಿವೆ. ಇಂತಹ ಕಾಮಗಾರಿಗಳಿಗೆ ಅಕ್ಷರಶಃ ಕೂಲಿ ಕಾರ್ಮಿಕರನ್ನು ಬಳಸಬೇಕಿದ್ದ ಈ ಯಜಮಾನರುಗಳು ಜೆಸಿಬಿ ಬಳಸಿ ಅಕ್ಷರಶಃ ಬಡ ಕಾರ್ಮಿಕರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಹೀಗೆ ನಡೆಯೊ ಅಷ್ಟೂ ಕಾಮಗಾರಿಗಳಿಗೂ ಅವನೊಬ್ಬ ಇಂಜಿನಿಯರ್ ಕಣ್ಣು ಮುಚ್ಚಿ ಕುಳಿತಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ.

ಅವನೊಬ್ಬ ಇಂಜನೀಯರ್..!
ಅಸಲು, ಇದು ಇಂದೂರಿನಲ್ಲಿ ಅಷ್ಟೇ ನಡೆದ ಮಾತಲ್ಲ. ಇವತ್ತು ಮುಂಡಗೋಡ ತಾಲೂಕಿನಲ್ಲಿ ಕೃಷಿ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಂಡರ್ ನಲ್ಲಿ ನಡಿತಿರೋ ಬಹುತೇಕ ಖಾತ್ರಿ ಕಾಮಗಾರಿಗಳಲ್ಲಿ ಗೋಲಮಾಲ್ ನಡಿತಿದೆಯಾ ಅನ್ನೋ ಅನುಮಾನ ಶುರುವಾಗಿದೆ. ಯಾಕಂದ್ರೆ, ಈ ಇಲಾಖೆಗಳ ಅಡಿಯಲ್ಲಿ ಜಾರಿಗೊಳ್ಳುವ ಕಾಮಗಾರಿಗಳನ್ನು ಅವನೊಬ್ಬ ಇಂಜನಿಯರ್ ನೋಡಿಕೊಳ್ತಿದಾನೆ. ಆದ್ರೆ, ಆತ ಯಾವತ್ತೂ ಆ ಕಾಮಗಾರಿಗಳ ಗುಣಮಟ್ಟವನ್ನಾಗಲಿ, ಅಥವಾ ಕಾಮಗಾರಿ ನಡೆದದ್ದು ಹೇಗೆ ಅನ್ನೋದಾಗಲಿ ಯಾವತ್ತೂ ಗಮನಿಸೋದೇ ಇಲ್ಲ. ಬದಲಾಗಿ, ಈತನಿಗೆ ಕೊಡೋ ಮಾಮೂಲು ಕೊಟ್ರೆ ಸಾಕು ಬಿಲ್ಲಿಗೆ ಶರಾ ಒತ್ತಿ ಬಿಡ್ತಾನಂತೆ. ಹಾಗಂತ ನಾವು ಹೇಳ್ತಿಲ್ಲ. ಇವನೊಂದಿಗೆ ಕೆಲಸ ನಿರ್ವಹಿಸ್ತಿರೊ ಗ್ರಾಪಂ ಸಿಬ್ಬಂದಿಯೇ ಹೇಳ್ತಿದಾನೆ.. ಬೇಕಿದ್ರೆ ನೀವೇ ಕೇಳಿ. ಲಕ್ಷಕ್ಕೆ ಇವನಿಗೆ 10. ಸಾವಿರ ಕೊಡಲೇ ಬೇಕಂತೆ. ಅಷ್ಟು ಕೊಟ್ರೆ ಸಾಕು ಕಾಮಗಾರಿ ಅದು ಹೇಗೆ ನಡಿಯತ್ತೊ ಗೊತ್ತಿಲ್ಲ, ಅದು ಹೇಗೇ ಇದ್ರೂ ಈತ ಶರಾ ಬರೆದು ಬಿಲ್ಲು ಕೊಡಿಸಿ ಬಿಡ್ತಾನಂತೆ.

ಇನ್ನು, ಈ ಗ್ರಾಮ ಪಂಚಾಯತಿಯಿಂದ ಇದುವರೆಗೂ ನಡೆದಿರೋ ಅಷ್ಟೂ ಖಾತ್ರಿ ಕಾಮಗಾರಿಗಳಲ್ಲಿ ಬಹುತೇಕ ಜೆಸಿಬಿ ಮೂಲಕವೇ ನಡೆದಿದೆಯಂತೆ. ಹಾಗಂತ ನಾವು ಹೇಳೋದಲ್ಲ, ಅಂತಹ ಕಾಮಗಾರಿಗಳನ್ನು ನಡೆಸಿರೋ ಗ್ರಾಮ ಪಂಚಾಯತಿ ಸಿಬ್ಬಂದಿಗಳೇ ಪಬ್ಲಿಕ್ ಫಸ್ಟ್ ಎದುರು ಬಾಯಿ ಬಿಟ್ಟಿದ್ದಾರೆ.

ರೈತರನ್ನೂ ಬಿಟ್ಟಿಲ್ಲ..!
ಇನ್ನು ಕಳೆದ ವರ್ಷ ಇದೇ ಇಂದೂರು ಪಂಚಾಯತಿ ವ್ಯಾಪ್ತಿಯಲ್ಲಿ ನೂರಾರು ಬಸಿಕಾಲುವೆಗಳ‌ ಕೆಲಸ ಮುಗಿದಿದೆ. ಇದು ರೈತರು ತಮ್ಮ ತೋಟಗಳಲ್ಲಿ ಅವಶ್ಯಕವಾಗಿರುವಷ್ಟು ಕೆಲಸ ಮಾಡಿಕೊಂಡಿದ್ದಾರೆ. ದುರಂತ ಅಂದ್ರೆ ಹೀಗೆ ರೈತರ ಬಸಿಗಾಲುವೆಗಳ ಬಿಲ್ ಮಂಜೂರಿ ಮಾಡಲೂ ಕೂಡ ಈ ಇಂಜಿನೀಯರು ಅಮೇದ್ಯ ಮೇಯ್ದಿದ್ದಾನಂತೆ. ಇವನೊಂದಿಗೆ ಇಂದೂರು ಗ್ರಾಪಂ ನಲ್ಲಿ ಇಬ್ಬರು ಸಿಬ್ಬಂದಿಗಳು ಶಾಮೀಲಾಗಿ ಹಣ ಎತ್ತುವಳಿ ಮಾಡಿಕೊಟ್ಟಿದ್ದಾರಂತೆ. ಅಸಲು, ಒಬ್ಬ ರೈತ ಬಿಲ್ಲು ಪಾಸ್ ಮಾಡಿಕೊಳ್ಳಲು ಇವ್ರಿಗೆ 5 ಸಾವಿರ, 6 ಸಾವಿರ, 10 ಸಾವಿರದವರೆಗೂ ಕೊಡಲೇಬೇಕಾಗಿತ್ತಂತೆ. ಹೀಗಾಗಿ ಈ ಭಾಗದ ಫಲಾನುಭವಿ ಅನ್ನದಾತರು ಇವತ್ತಿಗೂ ಹಿಡಿಶಾಪ ಹಾಕ್ತಿದಾರೆ. ಈ ವಿಷಯವನ್ನೂ ಕೂಡ ಗ್ರಾಮ ಪಂಚಾಯತಿಯ ಸದಸ್ಯರೇ ಹೇಳಿದ್ದಾರೆ.

ತನಿಖೆಯಾಗಲಿ..!
ಅಸಲು, ನಮಗೆ ಗ್ರಾಮ ಪಂಚಾಯತಿಯಿಂದ ಗ್ರಾಮಗಳ‌ ಅಭಿವೃದ್ಧಿ ಆಗಲೇ ಬೇಕಿದೆ. ನಾವೂ ಕೂಡ ಅದನ್ನೇ ಬಯಸ್ತಿವಿ. ಆದ್ರೆ ಅದರ ಜೊತೆ ಸರ್ಕಾರಗಳು ಬಡ ಕೂಲಿ ಕಾರ್ಮಿಕರಿಗಾಗಿ ಜಾರಿಗೊಳಿಸಿರೋ ಮಹತ್ವಾಕಾಂಕ್ಷೆಯ ಯೋಜನೆಗಳು ಉಳ್ಳವರ ಜೇಬು ಸೇರಿದ್ರೆ ಏನು ಗತಿ..? ಅಷ್ಟಕ್ಕೂ ಕೂಲಿ ಕಾರ್ಮಿಕರ ಗೋಳು ಕೇಳೋರಾದ್ರೂ ಯಾರು..? ಹೀಗಾಗಿ, ತಕ್ಷಣವೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ತನಿಖೆ ಕೈಗೊಳ್ಳಬೇಕಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಾಗಬೇಕಿದೆ. ಅಲ್ಲಿಯವರೆಗೂ ಪಬ್ಲಿಕ್ ಫಸ್ಟ್ ಹೋರಾಟ ಖಂಡಿತ ನಿಲ್ಲುವುದಿಲ್ಲ.

error: Content is protected !!