ಇಂದೂರಿನ ಹುಡುಗನೊಬ್ಬ ಬನವಾಸಿಯ ಕಾಡಲ್ಲಿ ಭಯಾನಕವಾಗಿ ಹತ್ಯೆಯಾಗಿದ್ದಾನೆ.. ಟ್ರ್ಯಾಕ್ಟರ್ ಸಾಲದ ಕಂತು ತುಂಬು ಅಂತಾ ಹೇಳಲು ಹೋದವನು ಹೆಣವಾದ್ನಾ..? ನಂಬಿಗಸ್ಥನಿಂದಲೇ ದ್ರೋಹ ಕಂಡು ಬನವಾಸಿಯ ಕಾಡಲ್ಲಿ ಬೆಂದು ಹೋದ್ನಾ..?ಹೀಗೆ ಕೊಳೆತು ದುರ್ನಾತ ಬೀರುತ್ತಿರೊ ಹುಡುಗನ ಶವದ ಸುತ್ತ ಹಲವು ಪ್ರಶ್ನೆಗಳು ಏಳುತ್ತಿವೆ. ಅಸಲು, ಮಲ್ಲಪ್ಪನ ಖಾಸಾ ಗೆಳೆಯ ಆರೀಫನೇ ಮರ್ಡರ್ ಮಾಡಿದ್ನಾ..? ಗೊತ್ತಿಲ್ಲ. ಆದ್ರೆ, ಅಂತಹ ಅನುಮಾನಗಳು ಬನವಾಸಿ ಪೊಲೀಸರಿಗಿದೆ.
ಯಸ್, ಶಿರಸಿ ತಾಲೂಕಿನ ದಾಸನಕೊಪ್ಪ ಸಮೀಪದ ದನಗನಹಳ್ಳಿಯ ಆರೀಫ್ ಹುಸೇನ್ ಬಾಳಂಬೀಡ (30) ಎಂಬಾತ, ಇಂದೂರಿನ ಮಲ್ಲಪ್ಪ ಕೆಂಚಗೊಣ್ಣವರ ಎಂಬುವವನನ್ನ ಅಮಾನುಷವಾಗಿ ಕೊಂದು ಹಾಕಿರೋ ಅನುಮಾನ ವ್ಯಕ್ತವಾಗಿದೆ. ಕಳೆದ ಜೂನ್ 11 ರಂದೇ ದನಗನಹಳ್ಳಿಯ ಕಾಡಿನ ನಡುವೆ ಇಂದೂರಿನ ಮಲ್ಲಪ್ಪ ಕೆಂಚಗೊಣ್ಣನವರ ಹೆಣವಾಗಿ ಬೆಂದು ಹೋಗಿದ್ದಾನೆ. ಆದ್ರೆ, ಹಾಗೆ ಹೆಣವಾಗಿ ಬರೋಬ್ಬರಿ ನಾಲ್ಕು ದಿನಗಳ ನಂತ್ರ ಶವ ಪತ್ತೆಯಾಗಿದೆ.
ಮರ್ಡರ್ ಆದವನು ಮಲ್ಲಪ್ಪ..!
ಅಂದಹಾಗೆ, ಆತನ ಹೆಸ್ರು ಮಲ್ಲಪ್ಪ ಕೆಂಚಗೊಣ್ಣವರ್, ಈಗಷ್ಟೇ 28 ರ ಆಸುಪಾಸಿನ ಹುಡುಗ. ಅಕ್ಷರಶಃ ಮುಗ್ದ ಮನಸ್ಸಿನ ದೇವರಂತ ಹುಡುಗ. ತನ್ನ ತಾಯಿಯ ಜೊತೆ ಸಾಕಷ್ಟು ಕಷ್ಟಗಳನ್ನು ಸಹಿಸಿ ಬದುಕು ಕಟ್ಟಿಕೊಂಡಿದ್ದವ. ಇಡೀ ಇಂದೂರಿನಲ್ಲಿ ಈ ಹುಡುಗ ಅಂದ್ರೆ ಅದು ಎಲ್ರಿಗೂ ಅಚ್ಚು ಮೆಚ್ಚು. ಹೀಗಿದ್ದ ಆತನ ಸಾವು ಈ ಪರಿ ಭಯಾನಕವಾಗಿ ಆಗಿದೆ ಅಂದ್ರೆ ಯಾರಿಗೂ ಅರಗಿಸಿಕೊಳ್ಳಲು ಆಗ್ತಿಲ್ಲ.
ಅವನು ಆರೀಫ್..!
ಹೌದು, ಹಾಗಂತ ಪೊಲೀಸ್ ಮೂಲಗಳಿಂದ ಮಾಹಿತಿ ಬಂದಿದೆ. ಅವನೊಬ್ಬ ಕ್ರಿಮಿನಲ್ ಗೆಳೆಯ ಮಲ್ಲಪ್ಪನೊಂದಿಗೆ ನಂಬಿಕೆ ದ್ರೋಹ ಮಾಡಿರೋ ಆರೋಪ ಇದೆ. ಬದುಕು ಕಟ್ಟಿಕೊಳ್ಳಲಿ ಅಂತಾ ಟ್ರ್ಯಾಕ್ಟರ್ ಕೊಡಿಸಿದ್ದೇ ಜೀವಕ್ಕೆ ಮಾರಕವಾಯ್ತಾ ಅನ್ನೋ ಪ್ರಶ್ನೆ ಎದ್ದಿದೆ. ಅದೇಲ್ಲೋ ಕೆಲಸಕ್ಕೆ ಹೋಗಿದ್ದಾಗ ಆಕಸ್ಮಿಕವಾಗಿ ಪರಿಚಯವಾಗಿದ್ದವ, ಸ್ನೇಹ ಬೆಳೆಸಿ, ಇಡಿ ಇಡಿಯಾಗಿ ಮಲ್ಲಪ್ಪನೆಂಬ ಮುಗ್ದ ಹುಡುಗನನ್ನೇ ಮುಗಿಸಿಬಿಟ್ನಾ ಅನ್ನೋ ಅನುಮಾನ ಶುರುವಾಗಿದೆ. ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಆರೀಫ್ ಹುಸೇನ್ ಬಾಳಂಬೀಡ್ (30) ದನಗನಹಳ್ಳಿಯ ಹುಡುಗನೇ ಇಲ್ಲಿ ಖಳನಾಯಕ ಅನ್ನೋ ಅನುಮಾನ ಬಂದಿದೆ.
ಟ್ರ್ಯಾಕ್ಟರ್ ಕಂತು, ಕುತ್ತು ತಂತಾ..?
ಅಸಲು, ಬನವಾಸಿ ಸಮೀಪದ ದನಗನಹಳ್ಳಿಯ ಆರೀಫ್ ಹುಸೇನ್ ಬಾಳಂಬೀಡ್ ಎಂಬುವವನು, ಇಂದೂರಿನ ಮಲ್ಲಪ್ಪನ ಸ್ನೇಹ ಮಾಡಿದ್ದ. ಟ್ರ್ಯಾಕ್ಟರ್ ಖರೀದಿಸಲು ಫೈನಾನ್ಸ್ ನಲ್ಲಿ ಮಲ್ಲಪ್ಪನ ತಾಯಿ ಹೆಸರಲ್ಲಿ ಲೋನು ಪಡೆದಿದ್ದ. ಲೋನು ಪಡೆದು ಆರು ತಿಂಗಳಾದ್ರೂ ಸಾಲದ ಕಂತು ಕಟ್ಟಿರಲೇ ಇಲ್ಲ. ಹೀಗಾಗಿ ಕೆಲ ದಿನಗಳ ಹಿಂದೆ ಫೈನಾನ್ಸ್ ಕಂಪನಿಯವರು ಸಾಲದ ವಸೂಲಿಗಾಗಿ ಇಂದೂರಿಗೆ ಬಂದಿದ್ದರು. ಆ ವೇಳೆ ಮಲ್ಲಪ್ಪ ಆರೀಫನ ಬಳಿ ಸಾಲದ ಕಂತು ಯಾಕೆ ತುಂಬಿಲ್ಲ ಅಂತಾ ಪ್ರಶ್ನಿಸಿದ್ದ. ಅಲ್ದೆ ಕಂತಿನ ಹಣ ಪಡೆಯಲು ನೇರವಾಗಿ ದನಗನಹಳ್ಳಿಯ ಬಸ್ ಹತ್ತಿದ್ದ. ಅಷ್ಟೆ, ಅದೇ ಕೊನೆ. ಇವತ್ತು ಹೆಣವಾಗಿ ಪತ್ತೆಯಾಗಿದ್ದಾನೆ. ಬಹುಶಃ ನಾಲ್ಕೈದು ದಿನದ ಹಿಂದೆಯೆ ಮಲ್ಲಪ್ಪನನ್ನು ಮರ್ಡರ್ ಮಾಡಲಾಗಿದೆ. ಅಲ್ದೆ ಶವವನ್ನು ಸುಟ್ಟು ಹಾಕಲು ಯತ್ನಿಸಲಾಗಿದೆ. ಹೀಗಾಗಿ, ಶವ ಕೊಳೆತು ನಾರುತ್ತಿದೆ.
ಶಿರಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ನೇಹಿತನೇ ಮರ್ಡರ್ ಮಾಡಿರಬಹುದಾದ ಅನುಮಾನ ವ್ಯಕ್ತವಾಗಿದ್ದು, ಶಿರಸಿ ಠಾಣೆ ಸಿಪಿಐ ಶಶಿಕಾಂತ್ ವರ್ಮ ಪ್ರಕರಣ ಕೈಗೆತ್ತಿಕೊಂಡು ತನಿಖೆಗಿಳಿದಿದ್ದಾರೆ. ನಾಳೆಯಷ್ಟೊತ್ತಿಗೆ ಆರೋಪಿ ಹೆಡೆಮುರಿ ಕಟ್ಟೋದು ನಿಕ್ಕಿ ಅನ್ನೋ ಮಾತು ಇದೆ.