ರಾಜೀನಾಮೆ ಕೊಡಿ ಅಂದವ್ರಿಗೆ ಹೆಬ್ಬಾರ್ ಬೆಂಬಲಿಗರ ಖಡಕ್ ಉತ್ತರ..! ಅಷ್ಟಕ್ಕೂ ಈ ನೈತಿಕತೆ ಅದ್ಯಾರ ಸ್ವತ್ತು..?

ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಮೇಲಾಟಗಳು, ಒದರಾಟಗಳ ಪರ್ವ ಶುರುವಾಗಿದೆ. ರೆಬೆಲ್ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ಮುಗಿಬಿದ್ದಿರೋ ಬಿಜೆಪಿ ಪಾಳಯ, ರಾಜೀನಾಮೆ ಬೀಸಾಕುವಂತೆ ಕಂಡ ಕಂಡಲ್ಲಿ ಕಹಳೆ ಮೊಳಗಿಸಿದೆ. ಮೊನ್ನೆ ಜೂನ್ 11 ರಂದು ಮುಂಡಗೋಡಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಬಿಜೆಪಿ ಮುಂಡಗೋಡ ಮಂಡಳಕ್ಕೆ ಗುರುವಾರ, ಹೆಬ್ಬಾರ್ ಬೆಂಬಲಿಗರು ಠಕ್ಕರ್ ಕೊಟ್ಟಿದ್ದಾರೆ. ಪತ್ರಿಕಾಗೋಷ್ಟಿಯ ಮೂಲಕವೇ ಪ್ರತ್ಯುತ್ತರ ನೀಡಿದ್ದಾರೆ. ನೈತಿಕತೆಯ ಪಾಠ ಮಾಡಿದ್ದಾರೆ.

ಬಿಜೆಪಿ, ಪತ್ರಿಕಾಗೋಷ್ಠಿ ಮತ್ತು ಎಚ್ಚರಿಕೆ..!
ಅಂದಹಾಗೆ, ಜೂನ್ 11 ರಂದು ಮುಂಡಗೋಡ ಬಿಜೆಪಿ ಮಂಡಳ ಅಧ್ಯಕ್ಷರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಶಾಸಕ ಶಿವರಾಮ್ ಹೆಬ್ಬಾರ್ ಪಕ್ಷಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು. ಒಂದು ವಾರದ ಗಡುವು ನೀಡಿ, ಒಂದುವೇಳೆ ರಾಜೀನಾಮೆ ನೀಡದೇ ಇದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ರು. ಹೀಗಾಗಿ, ಕೆರಳಿ ಕೆಂಡವಾಗಿರೋ ಹೆಬ್ಬಾರ ಪಡೆ, ಸ್ಥಳೀಯ ಬಿಜೆಪಿಗರ ವಿರುದ್ಧ ಮುಗಿ ಬಿದ್ದಿದೆ. ಅದ್ಯಾವ ನೈತಿಕತೆಯಿಂದ ರಾಜೀನಾಮೆ ಕೇಳ್ತಿರಿ ಅಂತಾ ವಾಗ್ದಾಳಿ ನಡೆಸಿದೆ. ಶಿವರಾಮ್ ಹೆಬ್ಬಾರ್ ಅಭಿಮಾನಿ ಬಳಗದಿಂದ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಹುತೇಕ ಪ್ರತ್ಯಾರೋಪ, ಎಚ್ಚರಿಕೆಗಳೇ ಹರಿದು ಬಂದಿವೆ. ಅದ್ರಲ್ಲೂ ಹೆಬ್ಬಾರ್ ಬಳಗದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ L.T. ಪಾಟೀಲ್ ವಿರುದ್ಧ ಆಕ್ರೋಶದ ವಾಗ್ಬಾಣಗಳೆ ಹರಿದಿವೆ‌.

ನೈತಿಕತೆ ಇದೆಯಾ ಪಾಟೀಲ್ರೆ..?
ಅಸಲು, ಹೆಬ್ಬಾರ್ ಅಭಿಮಾನಿ ಪಡೆಯ ಪತ್ರಿಕಾಗೋಷ್ಠಿಯಲ್ಲಿ, ವಕೀಲ ಗುಡ್ಡಪ್ಪ ಕಾತೂರ್ ಆಕ್ರೋಶದ ಮಾತನ್ನಾಡಿದ್ರು,  ಎಲ್.ಟಿ. ಪಾಟೀಲ್ ವಿರುದ್ಧ ಹರಿಹಾಯ್ದರು. 2018 ರಲ್ಲಿ ಕಾಂಗ್ರೆಸ್ ಜಿಪಂ ಸದಸ್ಯರಾಗಿದ್ದ ನೀವು, ಬಿಜೆಪಿ ಸೇರಿಕೊಂಡ್ರಿ, ಹಾಗಿದ್ರೆ ಅವಾಗ ನೀವು ಜಿಪಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಿರಾ ಪಾಟೀಲ್ರೆ..? ಇಲ್ಲವಲ್ಲ. ಹಾಗಿದ್ದಾಗ ಶಿವರಾಮ್ ಹೆಬ್ಬಾರರಿಂದ ರಾಜೀನಾಮೆ ಕೇಳೋಕೆ ನಿಮಗ್ಯಾವ ನೈತಿಕತೆ ಇದೆ..? ಅಂತಾ ಪ್ರಶ್ನಿಸಿದ್ದಾರೆ.

ಅನಂತಣ್ಣನಿಗೆ ಅನ್ಯಾಯ..!
ಇನ್ನು, ಗುರುವಾರ ನಡೆದ ಹೆಬ್ಬಾರ್ ಬೆಂಬಲಿಗರ ಪತ್ರಿಕಾಗೋಷ್ಠಿಯಲ್ಲಿ, ಹಿಂದು ಪೈಯರ್ ಬ್ರ್ಯಾಂಡ್ ಅನಂತಕುಮಾರ್ ಹೆಗಡೆ ಹೆಸರು ಮಾರ್ಧನಿಸಿದೆ. ಅನಂತಣ್ಣನಿಗೆ ಟಿಕೆಟ್ ನೀಡದೇ ಬಿಜೆಪಿ ಅನ್ಯಾಯ ಮಾಡಿದೆ ಅಂತಾ ಆರೋಪಿಸಿದ ಮುಖಂಡರು, ಶಿವರಾಮ್ ಹೆಬ್ಬಾರರಿಗೂ ಬಿಜೆಪಿಯಲ್ಲಿ ಅನ್ಯಾಯವಾಗಿದೆ ಅಂತಾ ಆರೋಪಿಸಿದ್ರು‌. ಕಳೆದ ಚುನಾವಣೆಯಲ್ಲಿ ಹೆಬ್ಬಾರರನ್ನು ಸೋಲಿಸಲು ಸ್ವಂತ ಪಕ್ಷದಲ್ಲೇ ಒಳ ಮಸಲತ್ತುಗಳನ್ನು ಮಾಡಿದ್ದರು. ಆದ್ರೆ, ಹೆಬ್ಬಾರರ ಪುಣ್ಯ ಕಾರ್ಯಗಳು ಕೈ ಹಿಡಿದು ಗೆಲುವು ಕಾಣುವಂತಾಯಿತು. ಹೀಗಾಗಿ, ಪಕ್ಷದೊಳಗೇ ಇದ್ದು ಪಕ್ಷದ್ರೋಹ ಮಾಡಿದವರ ವಿರುದ್ಧ ದೂರು ನೀಡಿದ್ರೂ ಬಿಜೆಪಿ ಮಾತ್ರ ಯಾವ ಕ್ರಮ ಕೈಗೊಳ್ಳಲಿಲ್ಲ ಅಂತಾ ಆಕ್ರೋಶ ಹೊರಹಾಕಿದ್ರು.

ಕಾಗೇರಿ ಓಡಿ ಹೋಗಿದ್ರು..!
ಇನ್ನು, ಮೋದಿಯವರ ಹೆಸರಿನಲ್ಲಿ ಮತ ಕೇಳಿ ಗೆದ್ದು ಬಂದಿರೋ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹಿಂದುತ್ವವನ್ನು, ಅಸಲೀ ಕಾರ್ಯಕರ್ತರನ್ನು ಮರೆತವರು. ಹಿಂದೆ ಶಿರಸಿಯಲ್ಲಿ ಹೋಳಿಯ ಸಂದರ್ಭದಲ್ಲಿ ಕೇಸು ಆದಾಗ ಇದೇ ಕಾಗೇರಿಯವರು ಕಾರ್ಯಕರ್ತರನ್ನು ಬಿಟ್ಟು ಓಡಿ ಹೋದವರು. ಅವಾಗ ಎದೆಗಾರಿಕೆ ತೋರಿಸದೇ ಕಾರ್ಯಕರ್ತರನ್ನು ಬಲಿ ಕೊಡಲಾಯಿತು. ಅದ್ರಂತೆ ಅನಂತಕುಮಾರ್ ಹೆಗಡೆಯವರನ್ನು ಬಲಿ ಕೊಡಲಾಗಿದೆ. ಹೀಗಾಗಿ ನಾವು ಬಿಜೆಪಿಯ ವಿರುದ್ಧ ತೊಡೆತಟ್ಟಿದ್ದೇವೆ ಅಂದ್ರು.

ಶಾಂತಾರಾಮ ಸಿದ್ದಿಯವರೇ..!!
ಹಾಗೆ, ಹೆಬ್ಬಾರ್ ವಿರುದ್ಧ ಎರಡು ದಿನಗಳ ಹಿಂದೆ ಮಾತನಾಡಿದ್ದ ಎಂ ಎಲ್ ಸಿ ಶಾಂತಾರಾಮ್ ಸಿದ್ದಿ ವಿರುದ್ಧ ಕಿಡಿ ಕಾರಿರೋ ಹೆಬ್ಬಾರ್ ಬೆಂಬಲಿಗರು, ನಿಮಗೆ ಆ ಸ್ಥಾನ ಸಿಗಲು ಕಾರಣರು ಯಾರು ಅನ್ನೋದರ ಅರಿವಿರಲಿ ಅಂತಾ ತಿವಿದಿದ್ದಾರೆ.

ಒಟ್ನಲ್ಲಿ, ಬಿಜೆಪಿ ರೆಬೆಲ್ ಶಾಸಕ, ಶಿವರಾಮ್ ಹೆಬ್ಬಾರ್ ವಿರುದ್ಧ ಸೆಟೆದು ನಿಂತಿದ್ದ ಬಿಜೆಪಿ ಪಾಳಯಕ್ಕೆ, ಹೆಬ್ಬಾರ್ ಬೆಂಬಲಿಗ ಪಡೆ ತಿರುಗೇಟು ನೀಡಿದೆ. ಅಸಲು, ಎರಡೂ ಪಾಳಯದಲ್ಲೂ ಆರೋಪ ಪ್ರತ್ಯಾರೋಪಗಳು ಜಾರಿಯಲ್ಲಿದ್ದು, ಇನ್ನೂ ಯಾವ ಹಂತಕ್ಕೆ ಮುಟ್ಟತ್ತೊ ಗೊತ್ತಿಲ್ಲ. “ನೈತಿಕತೆ” ಅನ್ನೋದು ಎರಡೂ ಕಡೆ ಸವಕಲು ಸರಕಾಗಿ ಹೋಗ್ತಿರೋದಂತೂ ಸತ್ಯ.



error: Content is protected !!