ಕುಮಟಾ: ಕಳೆದ ಒಂದು ತಿಂಗಳಿನಿಂದಲೂ ನಿರಂತರವಾಗಿ ಪ್ರಚಾರದಲ್ಲಿರುವ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್, ಅನಾರೋಗ್ಯದ ನಡುವೆಯೂ ಪ್ರಚಾರ ಮುಂದುವರಿಸಿ ಕಾರ್ಯಕರ್ತರ ಹುರುಪು ಹೆಚ್ಚಿಸಿದ್ದಾರೆ.

ಕಾಂಗ್ರೆಸ್‌ನಿಂದ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಪ್ರಚಾರಕ್ಕೆ ಇಳಿದಿದ್ದ ಡಾ.ಅಂಜಲಿ ನಿಂಬಾಳ್ಕರ್, ಈಗಾಗಲೇ ಬ್ಲಾಕ್ ಮಟ್ಟದ ಸಭೆಗಳನ್ನ ಪೂರ್ಣಗೊಳಿಸಿ ಜಿಲ್ಲಾ ಪಂಚಾಯತಿ ಮಟ್ಟದಲ್ಲಿ ಸಭೆಗಳನ್ನ ನಡೆಸುತ್ತಿದ್ದಾರೆ. ಸತತವಾಗಿ ವಿರಾಮವಿಲ್ಲದೆ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಅವರಿಗೆ ಕೊಂಚ ಆರೋಗ್ಯದಲ್ಲಿ ಏರುಪೇರಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ವೈದ್ಯಕೀಯ ತಪಾಸಣೆಗೆ ಒಳಗಾಗಿ ವೈದ್ಯಕೀಯ ಉಪಚಾರ ಪಡೆದಿರುವ ಅವರು, ವಾಸ್ತವ್ಯ ಹೂಡುವ ಸ್ಥಳದಲ್ಲೇ ಸಲೈನ್ (ಡ್ರಿಪ್ಸ್) ಹಚ್ಚಿಕೊಂಡು ಪ್ರಚಾರ ಕಾರ್ಯಗಳನ್ನ ಮುಂದುವರಿಸಿದ್ದಾರೆ. ಕೈನಲ್ಲಿ ಸಲೈನ್‌ನ ಕ್ಯಾನುಲಾ (ಸೂಜಿ) ಇಟ್ಟುಕೊಂಡೇ ಕ್ಷೇತ್ರದಲ್ಲಿ ಪ್ರಚಾರಕ್ಕಿಳಿದಿರುವ ಡಾ.ಅಂಜಲಿಯವರ ಬದ್ಧತೆ ಕಾರ್ಯಕರ್ತರಲ್ಲೂ ಹುರುಪು ತಂದಿದೆ. ಕೆಲವೆಡೆ ಕಾರ್ಯಕರ್ತರೇ ‘ತಾವು ವಿಶ್ರಾಂತಿ ಪಡೆಯಿರಿ. ತಮಗಾಗಿ ನಾವು ಪ್ರಚಾರ ನಡೆಸುತ್ತೇವೆ’ ಎನ್ನುತ್ತಿದ್ದಾರೆ.

‘ನನ್ನ ಜನರಿಗಾಗಿ ಈ ಚುನಾವಣೆ ನಡೆಯುತ್ತಿದೆ. ನನ್ನೆಲ್ಲ ಕಾರ್ಯಕರ್ತರು, ನಾಯಕರು ನಮಗಾಗಿ ದುಡಿಯುತ್ತಿರುವಾಗ ಆರೋಗ್ಯ ಸರಿ ಇಲ್ಲವೆಂದು ವಿಶ್ರಾಂತಿ ಪಡೆಯುವುದು ಸರಿಯಲ್ಲ. ಕ್ಷೇತ್ರದ ಜನತೆಗಾಗಿ ಪ್ರಚಾರ ಮುಂದುವರಿಸಿದ್ದೇನೆ, ಕಾರ್ಯಕರ್ತರ ಪಡೆಯೇ ನನಗೆ ಶ್ರೀರಕ್ಷೆಯಾಗಿದೆ’ ಎಂದು ಡಾ.ಅಂಜಲಿ ಅಭಿಪ್ರಾಯಿಸಿದ್ದಾರೆ.

error: Content is protected !!