ಮುಂಡಗೋಡ: ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಪಡೆ ಸದ್ಯ ಬಿಜೆಪಿಯಿಂದ ಕಾಂಗ್ರೆಸ್ ಕಡೆ ಜಂಪ್ ಮಾಡಿದೆ. ಹೀಗಾಗಿ, ವಿಧಾನಸಭೆ ಚುನಾವಣೆ ಬಳಿಕ ಬಹುತೇಕ ಕೊಸರಾಟದಲ್ಲೇ ತೊಡಗಿದ್ದ ಮುಂಡಗೋಡ ಕಾಂಗ್ರೆಸ್ ಗೆ ಹೆಬ್ಬಾರ್ ಪಡೆಯ ಆಗಮನ ಆನೆ ಬಲ ತಂದಿದ್ದು, ಒಳಗೊಳಗಿನ ಅಸಮಾಧಾನ, ಕಚ್ಚಾಟಗಳಿಗೆ “ಪವರ್ ಬ್ರೇಕ್” ಬೀಳೋ ಸಾಧ್ಯತೆ ಇದೆ. ಹೀಗಾಗಿ, ಸೋತ ಮನೆಯಲ್ಲಿ ನಾ ಹೆಚ್ಚು ನೀ ಹೆಚ್ಚು ಅಂತಾ ಕತ್ತಿ ಮಸೆಯುತ್ತಿದ್ದ “ಐರನ್ನು” ಮುಖಂಡರುಗಳಿಗೆ ಈಗ ತಮ್ಮ ಸ್ಥಾನಮಾನಗಳದ್ದೇ ಚಿಂತೆ ಹೆಚ್ಚಾಗಿದೆ.
ಅವ್ರ ಕತೆಯೇನು..?
ಇನ್ನು, ಪಕ್ಷದ ಪ್ರಮುಖ ಜವಾಬ್ದಾರಿ ಹೊತ್ತಿದ್ದ ಕೆಲವರು, ಸದ್ಯ ಅದೇಲ್ಲೇಲ್ಲೋ ಚೇಳು ಕಡಿದವರಂತೆ ಓಡಾಡುತ್ತಿದ್ದಾರಂತೆ. ತಮ್ಮ ಸ್ಥಾನಗಳಿಗೆ ಬರಬಹುದಾದ ಸಂಚಕಾರ ತಪ್ಪಿಸಿಕೊಳ್ಳಲು ಯಲ್ಲಾಪುರದ ಕಡೆ ಮುಖ ಮಾಡಿ ಕುಳಿತಿದ್ದಾರಂತೆ. ಯಾಕಂದ್ರೆ, ಕೆಲವರ ಬಗ್ಗೆ ಈಗಾಗಲೇ ಪಕ್ಷದಲ್ಲಿ ಸಾಕಷ್ಟು ವಿರೋಧಗಳು ಇದ್ದರೂ, ಎಲೆಕ್ಷನ್ ಮುಗಿಯೋವರೆಗೂ ಹೇಗಾದ್ರೂ ಸಹಿಸಿಕೊಳ್ಳಿ ಅಂತಾ ಜಿಲ್ಲಾ ಮುಖಂಡರು ತಾಮಣಿ ಮಾಡಿದ್ದರು. ಆದ್ರೆ, ಇವಾಗ ಹೆಬ್ಬಾರ್ ಬಳಗದ ಸಮುದ್ರದಲೆಯಲ್ಲಿ ಇವರೇಲ್ಲ ತೇಲಿ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಣ ಬಡಿದಾಟ..!
ಅಸಲು, ಮುಂಡಗೋಡಿನ ಕಾಂಗ್ರೆಸ್ ನಲ್ಲಿ ಕೆಲವು ಮುಖಂಡರು, ಪದಾಧಿಕಾರಿಗಳ ವಿರುದ್ಧ, ಸಾಕಷ್ಟು ವಿರೋಧಗಳು ಪಕ್ಷದ ವಲಯದಲ್ಲಿ ಎದ್ದಿದ್ದವು. ಬಹಿರಂಗವಾಗೇ ಕಳೆದ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಸಾಕಷ್ಟು ಆಕ್ರೋಶಗಳು ಬುಗಿಲೆದ್ದಿದ್ದವು. ಬಹುತೇಕ ಈ ಕಾರಣದಿಂದಲೇ ಇಲ್ಲಿನ ಕಾಂಗ್ರೆಸ್ ಎರಡೆರಡು ಬಣಗಳಾಗಿ ಹೋಳಾಗಿತ್ತು. ಅದ್ರಲ್ಲೂ ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಸೋತ ನಂತರವಂತೂ ಈ ಬಣ ಬಡಿದಾಟ ಇನ್ನಿಲ್ಲದಂತೆ ತಾರಕಕ್ಕೇರಿತ್ತು.
ಬ್ಲಾಕ್ ಅಧ್ಯಕ್ಷರ ವಿರುದ್ಧ..!
ಅದ್ರಲ್ಲೂ ಬ್ಲಾಕ್ ಅಧ್ಯಕ್ಷರನ್ನು ಬದಲಾಯಿಸುವಂತೆ ಒಂದು ಬಣ ಹಲವು ಬಾರಿ ಬೆಂಗಳೂರಿನ ರಾಜ್ಯ ಮುಖಂಡರ ಬಳಿ ಕೂಡ ಎಡತಾಕಿತ್ತು. ಮುಂಡಗೋಡಿಗೆ ಬಂದಿದ್ದ ಸಚಿವ ಮಂಕಾಳು ವೈದ್ಯರ ಬಳಿಯೂ ಅಧ್ಯಕ್ಷರ ಬದಲಾವಣೆಗೆ ಆಗ್ರಹಿಸಲಾಗಿತ್ತು. ಆದ್ರೆ, ಅದ್ಯಾರ ಕೃಪೆಯೊ ಗೊತ್ತಿಲ್ಲ ಅಧ್ಯಕ್ಷರ ಸ್ಥಾನ ಮಾತ್ರ ಅಬಾಧಿತವಾಗಿತ್ತು. ಸದ್ಯ ಹೆಬ್ಬಾರ್ ಬಳಗದ ಎಂಟ್ರಿಯಿಂದ ಇಲ್ಲಿನ ಕಾಂಗ್ರೆಸ್ ಗೆ ಸರ್ವಾನುಮತದ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆನಡೆಯೋ ಮಾತು ಕೇಳಿ ಬಂದಿದೆ. ಇನ್ನೇನು ಎಲೆಕ್ಷನ್ ಮುಗಿದ ತಕ್ಷಣವೇ ಆ ಎಲ್ಲ ಬದಲಾವಣೆಯ ಕಾರ್ಯ ಶುರುವಾಗತ್ತೆ ಎನ್ನಲಾಗಿದೆ.
ಯುವಕರ ನಿರ್ಲಕ್ಷ..!
ಅಂದಹಾಗೆ, ವಿಧಾನಸಭೆ ಚುನಾವಣೆ ಮುಗಿದ ಬಳಿಕ ಮುಂಡಗೋಡ ಕಾಂಗ್ರೆಸ್ ಬಹುತೇಕ ಒಳಗೊಳಗಿನ ತಿಕ್ಕಾಟಗಳಲ್ಲೇ ಸೊರಗಿ ಹೋಗಿತ್ತು. ಉತ್ಸಾಹದಲ್ಲಿದ್ದ ಅದೇಷ್ಟೋ ಯುವ ಮುಖಂಡರುಗಳು ಕೆಲವು “ಐರನ್ನು”ಗಳ ಸೆಲ್ಪಿ ಆಟದಲ್ಲಿ ಸುಸ್ತಾಗಿದ್ದರು. ಪಕ್ಷದ ಕಾರ್ಯಗಳಿಂದ ಬಹುತೇಕ ನಿರ್ಲಿಪ್ತರಾಗುವ ಹಂತದಲ್ಲಿದ್ರು. ಸದ್ಯ ಅವ್ರೇಲ್ಲರಿಗೂ ಮತ್ತೆ ಹುರುಪು ತುಂಬ್ತಾರಾ ವಿವೇಕ ಪಡೆ..? ಕಾದು ನೋಡಬೇಕಿದೆ.