ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಮರಾಠ ಜಾತಿ ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿದ್ದ ಬಿಜೆಪಿ ಕಾರ್ಯಕರ್ತನ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಮ್ಮ ಅಭ್ಯರ್ಥಿಯನ್ನ ಬೆಂಬಲಿಸಿ ವಿಡಿಯೋವೊಂದನ್ನು ಫೇಸ್‌ಬುಕ್ ನಲ್ಲಿ ಕಾಂಗ್ರೆಸ್ ಸಾಮಾಜಿಕ ತಾಣಗಳ ವಿಭಾಗದ ಸೂರಜ್ ನಾಯ್ಕ ಅವರು ಹಂಚಿಕೊಂಡಿದ್ದರು. ಅದಕ್ಕೆ ಬಿಜೆಪಿ ಕಾರ್ಯಕರ್ತನೆನ್ನಲಾದ ಕುಮಟಾದ ಶ್ರೀಕಾಂತ್ ಹೆಗಡೆ ಅಂತ್ರವಳ್ಳಿ ಎಂಬಾತ ತನ್ನ ಫೇಸ್‌ಬುಕ್ ಖಾತೆಯಿಂದ ನಿಂದನಾತ್ಮಕವಾಗಿ ಕಮೆಂಟ್ ಮಾಡಿದ್ದ.
ಈ ಬಗ್ಗೆ ಗಮನಿಸಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಎಚ್.ನಾಯ್ಕ ಕಾಗಲ್, ನಿಂದಿಸಿದವನ ವಿರುದ್ಧ ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ‘ಸಾಮಾಜಿಕ ಜಾಕತಾಣಗಳಲ್ಲಿ ಚುನಾವಣೆಯ ಸಂದರ್ಭ ಪಕ್ಷ, ಅಭ್ಯರ್ಥಿಗಳ ಪರ- ವಿರೋಧ ಸಹಜ. ಆದರೆ ನಮ್ಮ ಅಭ್ಯರ್ಥಿಯ ಜಾತಿಯನ್ನ ಗುರಿಯಾಗಿಸಿಕೊಂಡು ಅವಹೇಳನ ಮಾಡುವುದು ಅಕ್ಷಮ್ಯ. ಜಾತಿ ಜಾತಿಗಳ ನಡುವೆ ವೈಷಮ್ಯ ಬೀರುತ್ತಲೇ ಬಂದಿರುವ ಬಿಜೆಪಿಗರು ಮತ್ತೆ ಮತ್ತೆ ಅದನ್ನೇ ಮುಂದುವರಿಸಿದ್ದಾರೆ. ಹೀಗಾಗಿ ಈ ದೂರು ವೈಯಕ್ತಿಕವಾಗಿ ಹಾಗೂ ಅಸಭ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮಾಡುವವರಿಗೆ ಪಾಠವಾಗಬೇಕಿದೆ. ಈ ಬಗ್ಗೆ ಚುನಾವಣಾಧಿಕಾರಿಗಳೂ ಗಮನಹರಿಸಿ ಕ್ರಮ ಕೈಗೊಳ್ಳಬೇಕಿದೆ’ ಎಂದು ಆರ್.ಎಚ್.ನಾಯ್ಕ ಒತ್ತಾಯಿಸಿದ್ದಾರೆ.