ಮುಂಡಗೋಡ: ಪಕ್ಷಕ್ಕೆ ದ್ರೋಹ ಮಾಡಿದವ್ರು ಯಾವತ್ತಿಗೂ ಉದ್ಧಾರ ಆಗಲ್ಲ ಅಂತಾ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ್, ಪರೋಕ್ಷವಾಗಿ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ರು.
ಪಟ್ಟಣದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವ್ರು, ಪಕ್ಷದಲ್ಲಿ ಬಂದು ಸ್ಥಾನಮಾನ ಪಡೆದು, ಪಕ್ಷದ ಶಾಲು ಹಾಕಿಕೊಂಡು ಮೆರೆದವರು ಈಗ ಮತ್ತೆ ಪಕ್ಷ ಬಿಡುತ್ತಿದ್ದಾರೆ. ಅಲ್ಲದೇ ಪಕ್ಷದ ಕಾರ್ಯಕರ್ತರಿಗೆ ಆತಂಕಗೊಳಿಸುವ ವಾತಾವರಣ ನಿರ್ಮಿಸುತ್ತಿದ್ದಾರೆ. ಅಂತವರು ದಮ್ಮು, ತಾಕತ್ತು ಇದ್ರೆ ತಕ್ಷಣವೇ ಪಕ್ಷ ಬಿಡಲಿ, ಅದನ್ನ ಬಿಟ್ಟು ಇಲ್ಲೇ ಇದ್ದುಕೊಂಡು ಆಟ ಆಡುವುದನ್ನ ನಿಲ್ಲಿಸಲಿ ಅಂತಾ ಪರೋಕ್ಷವಾಗಿ ಶಿವರಾಮ್ ಹೆಬ್ಬಾರ ವಿರುದ್ಧ ಗುಡುಗಿದ್ರು.
ಇನ್ನು ಸಮಾವೇಶ ಉದ್ಘಾಟಿಸಿ ಮಾತನಾಡಿದ ಬಿಜೆಪಿಯ ಉತ್ತರ ಕನ್ನಡ ಲೋಕಸಭಾ ಅಭ್ಯರ್ಥಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಪಕ್ಷ ಬಿಡುವವರು ಬಿಟ್ಟು ಹೋಗಲಿ, ಬಿಜೆಪಿ ಯಾರದ್ದೋ ಒಬ್ಬರ ಮೇಲೆ ನಿಂತಿಲ್ಲ. ನಮ್ಮಲ್ಲಿ ಗಟ್ಟಿಮನಸಿನ ಕಾರ್ಯಕರ್ತರಿದ್ದಾರೆ. ಅವ್ರು ಬಿಜೆಪಿಯನ್ನು ಯಾವತ್ತೂ ಬಿಟ್ಟು ಕೊಡಲ್ಲ ಅಂತಾ ಹೇಳಿದ್ರು. ಜ್ಞಾನದ ಸಂಪತ್ತಿನ ಮೂಲಕ ಕೆಚ್ಚೆದೆಯ ಕಲಿಗಳ ವೀರತ್ವದಿಂದ ಭಾರತ ಗುರುತಿಸಿಕೊಂಡಿದೆ. ನರೇಂದ್ರ ಮೋದಿಯವರು ನಮ್ಮ ದೇಶದ ಆಸ್ತಿ. ಕಾರ್ಯಕರ್ತರ ಶ್ರಮದ ಬಗ್ಗೆ ನಂಬಿಕೆ ಇದೆ. ವ್ಯಕ್ತಿಗಿಂತ ದೇಶ ಮುಖ್ಯ. ಕಾರ್ಯಕರ್ತರನ್ನು ನಾನು ಎಂದೂ ಬಿಟ್ಟು ಕೊಟ್ಟಿಲ್ಲ. ನಿಮ್ಮ ಜೊತೆ ಸದಾ ಇರುತ್ತೇನೆ. ಹಣದಿಂದ ಕಾರ್ಯಕರ್ತರನ್ನು ಕೊಂಡುಕೊಳ್ಳಲು ಆಗುವುದಿಲ್ಲ. ಅದ್ಯಾರೋ ಒಬ್ರು ಹಣ ಕೊಟ್ಟು ನಮ್ಮ ಯಲ್ಲಾಪುರ ಕ್ಷೇತ್ರದಲ್ಲಿ ಗೆದ್ದು ಬರ್ತಿನಿ ಅಂತಾ ಮಾತನಾಡ್ತಿದಾರಂತೆ, ಹೀಗಾಗಿ ಅಂತವರಿಗೆ ತಕ್ಕ ಪಾಠ ಕಲಿಸಬೇಕಿದೆ ಅಂತಾ ಶಿವರಾಮ್ ಹೆಬ್ಬಾರ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ರು.
ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ ಬಿಜೆಪಿಯಿಂದ ಅಭಿವೃದ್ಧಿ ನಿರಂತರವಾಗಿ ನಡೆದು ಬಂದಿದೆ. ನಾವು ಯಾವತ್ತೂ ಸಂವಿಧಾನ ಬದಲಾವಣೆ ಮಾಡುವುದಿಲ್ಲ. ಮೊಟ್ಟಮೊದಲು ಸಂವಿಧಾನ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್. ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂಬ ಭಾವನೆ ನಮ್ಮದು. ಸಂವಿಧಾನಕ್ಕೆ ಬಿಜೆಪಿ ಗೌರವ ನೀಡಿದೆ ಎಂದರು.
ರಾಜ್ಯ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ ಬಿಜೆಪಿ ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಅಲ್ಲ ಕಾರ್ಯಕರ್ತರನ್ನು ಅವಲಂಬಿಸಿರುವ ಪಕ್ಷ. ಮೋದಿಯವರ ಪ್ರತೀಕವಾಗಿ 40 ವರ್ಷಗಳ ಯಾವುದೇ ಕಪ್ಪು ಚುಕ್ಕೆ ಇಲ್ಲದ ರಾಜಕಾರಣಿ ಕಾಗೇರಿಯವರು ಎಂದರು. ಜಿಲ್ಲಾಧ್ಯಕ್ಷ
ಎನ್.ಎಸ್.ಹೆಗಡೆ ಮಾತನಾಡಿ ಕಾಗೇರಿಯವರು ಸರಳಸಜ್ಜನಿಕೆ ವ್ಯಕ್ತಿ. ಇಡೀ ಜಿಲ್ಲೆಯಲ್ಲಿ ಬಿಜೆಪಿ ಗಾಳಿ ಬೀಸಿದೆ. ಮೋದಿಯವರ ಯೋಜನೆಗಳ ಪ್ರಯೋಜನ ಪಡೆದ ಫಲಾನುಭವಿಗಳನ್ನು ಪ್ರತಿಯೊಂದೂ ಮನೆಯಲ್ಲಿ ಕಾಣಬಹುದಾಗಿದೆ. ದಲಿತ ವಿರೋಧಿ ಭ್ರಷ್ಟಾಚಾರಿ ಕಾಂಗ್ರೆಸ್ ಸರಕಾರ. ಒಬ್ಬ ಜಿಲ್ಲಾಧ್ಯಕ್ಷರ ಬಗ್ಗೆ ಶಾಸಕರು ಹಗುರವಾಗಿ ಮಾತನಾಡಿದ್ದನ್ನು ಗಮನಿಸಿದ್ದೇನೆ. ಕಾರ್ಯಕರ್ತರು ಕೂಡಾ ಅಸಮಾಧಾನಗೊಂಡಿದ್ದಾರೆ ಎಂದರು.
ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಪಾಟೀಲ ಪ್ರಾಸ್ತಾವಿಕ ಮಾತನಾಡಿ ಮಹಾಯುದ್ಧ ಗೆಲ್ಲಲೇಬೇಕಾಗಿದೆ. ನಮ್ಮ ವಿರುದ್ಧ ನಡೆದಿರುವ ಷಡ್ಯಂತ್ರಗಳನ್ನು ಎದೆ ತಟ್ಟಿ ನಿಂತು ಎದುರಿಸಿ ಮೋದಿಯವರ ಕೈ ಬಲಪಡಿಸಬೇಕಾಗಿದೆ. ಅನೇಕ ಲೋಕಸಭಾ ಚುನಾವಣೆಗಳಲ್ಲಿ ಕಾರ್ಯಕರ್ತರ ಬಲ ತೋರಿಸಿದ್ದೇವೆ. ಯಾರಿಗೂ ಭಯಪಡುವ ಅಗತ್ಯವಿಲ್ಲ ಎಂದರು. ಜಿ.ಪಂ.ಮಾಜಿ ಸದಸ್ಯ ಎಲ್.ಟಿ.ಪಾಟೀಲ, ಅಶೋಕ ಚಲವಾದಿ, ಮಹೇಶ ಹೊಸಕೊಪ್ಪ ಮಾತನಾಡಿದರು.
ಈ ವೇಳೆ ಚಂದ್ರು ಎಸಳೆ, ಗುರುಪ್ರಸಾದ ಹೆಗಡೆ, ಲೆಸ್ಸಾ ಥಾಮಸ್, ಅಶೋಕ ಚಲವಾದಿ, ಶ್ರೀಕಾಂತ ಸಾನು,
ಜಿ.ಎನ್.ಗಾಂವಕರ, ಪ್ರಶಾಂತ ನಾಯ್ಕ, ವೀಣಾ ಒಶಿಮಠ, ಸುಬ್ರಾಯ, ರಮೇಶ ನಾಯ್ಕ, ಪ್ರೇಮಕುಮಾರ ನಾಯ್ಕ, ವಿಠಲ್ ಬಾಳಂಬೀಡ್, ಭರತ್ ಹದಳಗಿ, ಬಸವರಾಜ್ ತನಿಖೆದಾರ್, ತುಕಾರಾಮ ಇಂಗಳೆ, ಹಾಗೂ ಮುಂತಾದವರು ಉಪಸ್ಥಿತರಿದ್ದರು.