ಸಂಪಾಯಿತಲೇ ಪರಾಕ್” ಇದು ಪ್ರಸಕ್ತ ವರ್ಷದ ಶ್ರೀ ಕ್ಷೇತ್ರ ಮೈಲಾರಲಿಂಗನ ಕಾರಣಿಕ ನುಡಿ. ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದ ಡೆಂಕನಮರಡಿಯಲ್ಲಿ ಸೋಮವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಗೊರವಯ್ಯ ಕಾರಣೀಕ ನುಡಿದಿದ್ದಾರೆ.
ಲಕ್ಷಾಂತರ ಭಕ್ತರ ನಡುವೆ ಸರಸರನೇ ಬಿಲ್ಲನ್ನೇರಿದ ವರ್ಷದ ಭವಿಷ್ಯ ವಾಣಿ ನುಡಿಯುವ ಗೊರವಯ್ಯ ರಾಮಣ್ಣ ಸದ್ದಲೇ ಎನ್ನುತ್ತ ದೇವವಾಣಿ ಎನ್ನಲಾಗುವ ವರ್ಷದ ದೇವವಾಣಿ “ಸಂಪಾಯಿತಲೇ ಪರಾಕ್”
ಕಾರ್ಣಿಕದ ನುಡಿ ನುಡಿದರು.
ಈ ಭವಿಷ್ಯವಾಣಿ ಆಡಳಿತದ ಏಳುಬೀಳು ಹಾಗೂ ಪ್ರಕೃತಿ ಬದಲಾವಣೆ ಮುನ್ಸೂಚನೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಸೋಮವಾರ ಪ್ರಾತಃಕಾಲ 4 ರಿಂದ ಮೈಲಾರಲಿಂಗೇಶ್ವರ, ಗಂಗಿ ಮಾಳಮ್ಮ ಹಾಗೂ ಹೆಗ್ಗಪ್ಪ ದೇವರ ಉತ್ಸವ ಡೆಂಕನಮರಡಿಗೆ ಗುಪ್ತ ಮೌನ ಸವಾರಿ ಕಾರ್ಯಕ್ರಮಗಳು ನಡೆದವು.
ಭಾರತ ಹುಣ್ಣಿಮೆ ಮೈಲಾರಲಿಂಗೇಶ್ವರನ ಭಕ್ತರಿಗೆ ಮಹತ್ವದ ಹುಣ್ಣಿಮೆಯಾಗಿದ್ದು, ಪ್ರಸಕ್ತ ವರ್ಷವು ಭಾರತ ಹುಣ್ಣಿಮೆಗೆ ಮೈಲಾರಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದರು. ನಾಲೈದು ದಿನಗಳ ಕಾಲ ಭಕ್ತರು ಕ್ಷೇತ್ರದಲ್ಲಿದ್ದು, ಸಾಂಪ್ರದಾಯಕ ಪೂಜೆ ಕೈಂಕರ್ಯ ಕೈಗೊಂಡು ಶ್ರೀಸ್ವಾಮಿಯ ದರ್ಶನ ಪಡೆದರು. ನಂತರ – ಕಪಿಲ ಮುನಿಗಳ ಪೀಠದ ಗುರುಗಳಿಂದ ದೀಕ್ಷೆ ಪಡೆದ ಗೊರವಯ್ಯ ನುಡಿಯುವ ದೇವವಾಣಿ ಕಾರ್ಣಿಕ ಆಲಿಸಿ ಜಾತ್ರೆ ಮುಗಿಸಿಕೊಂಡು ತಮ್ಮ ಊರಿಗೆ ತೆರಳುತ್ತಿದ್ದಾರೆ.