ಮುಂಡಗೋಡ ಹಾಗೂ ಯಲ್ಲಾಪುರ ಪಟ್ಟಣಕ್ಕೆ ಇಂದು ಕರ್ನಾಟಕ ಸ್ಲಂ ಬೋರ್ಡ್ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿ ನೀಡಿದ್ರು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಮುಂಡಗೋಡ ಹಾಗೂ ಯಲ್ಲಾಪುರದಲ್ಲಿ ನಿರ್ಮಾಣವಾಗುತ್ತಿರುವ ಜಿ + 2 ಮಾದರಿಯ ಆಶ್ರಯ ವಸತಿ ಸಮುಚ್ಚಯಗಳ ಕಾಮಗಾರಿ ಪರಿಶೀಲನೆ ನಡೆಸಿ, ಕಾಮಗಾರಿಯ ಪ್ರಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ್ರು. ಅಸಲು ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಮಾಜಿ ಶಾಸಕ ವಿ.ಎಸ್. ಪಾಟೀಲ್ ಈ ವೇಳೆ ಸ್ಲಂ ಬೋರ್ಡ್ ಅಧ್ಯಕ್ಷರಿಗೆ ಸಾಥ್ ನೀಡಿದ್ರು.

ಇದು ಸತ್ಯ..!
ಅಸಲು, ಇವತ್ತಿನ ಕಾರ್ಯಕ್ರಮ ನೋಡಿದ್ರೆ ಹೆಬ್ಬಾರ್ ಸಾಹೇಬ್ರು ಕಾಂಗ್ರೆಸ್ ಪಡಸಾಲೆಯಲ್ಲಿ ಬಹುತೇಕ ಹೆಜ್ಜೆ ಇಟ್ಟು ತಳವೂರಿಯೂ ಆಗಿದೆ ಅನಿಸತ್ತೆ. ಇನ್ನೇನು ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಗಳಿಗೆಯಲ್ಲೇ ಕಾಂಗ್ರೆಸ್ ಸೇರ್ಪಡೆಯ ಮುಹೂರ್ತ ಫಿಕ್ಸ್ ಆಗಲಿದೆ ಅನ್ನೋ ಮಾತುಗಳಿಗೆ ಪುಷ್ಟಿ ಸಿಕ್ಕಿದೆ. ಅದ್ರಲ್ಲೂ, ಕಳೆದ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿ ಹಾವು ಮುಂಗುಸಿಯಂತೆ ಆಡುತ್ತಿದ್ದ ವಿ.ಎಸ್.ಪಾಟೀಲರು ಹಾಗೂ ಶಿವರಾಮ್ ಹೆಬ್ಬಾರರು ಬಾಯಿ ಬಾಯಿಗಳಾಗಿ ಮುನ್ನುಗ್ಗುತ್ತಿರೋದು ಗುಟ್ಟಾಗೇನೂ ಉಳಿದಿಲ್ಲ. ಇವತ್ತಿನ ಕಾರ್ಯಕ್ರಮದಲ್ಲೂ ಇಬ್ಬರೂ ನಾಯಕರು ಒಂದೇ ವೇದಿಕೆಯಲ್ಲಿ ದನಿಗೂಡಿಸಿದ್ದು, ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಯ ಖಚಿತತೆಗೆ ಸಾಕ್ಷಿ ಎಂಬಂತಾಗಿದೆ.

ಬಿಜೆಪಿ ಕಾರ್ಯಕ್ರಮಗಳಿಂದ ಬಲು ದೂರ..?
ಅಂದಹಾಗೆ, ಸದ್ಯಕ್ಕೆ ಯಲ್ಲಾಪುರ ಬಿಜೆಪಿ ಶಾಸಕರಾಗಿರೋ ಶಿವರಾಮ್ ಹೆಬ್ಬಾರ್ ರವರು ಅದೇನೇ ತೀರ್ಮಾನ ಮಾಡಿದ್ರೂ ಅಳೆದು ತೂಗಿಯೇ ಮಾಡ್ತಾರೆ. ಅಷ್ಟೊಂದು ಕರಾರುವಾಕ್, ಚತುರತೆ ಅವ್ರಲ್ಲಿದೆ. ಹೀಗಾಗಿ, ಅವ್ರು ಅದೇನೇ ತೀರ್ಮಾನ ಕೈಗೊಂಡ್ರೂ ಅದ್ರಲ್ಲೊಂದು ಬಲವಾದ “ಭವಿಷ್ಯ”ದ ಯೋಚನೆ ಇದ್ದೇ ಇರತ್ತೆ ಅನ್ನೋದು ರಾಜಕೀಯ ವಿಶ್ಲೇಷಕರ ಮಾತು. ಹೀಗಾಗಿ, ಬಹುತೇಕ ಚುನಾವಣೆ ಮುಗಿದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಗಳಿಗೆಯಿಂದಲೇ ಬಿಜೆಪಿಯೊಳಗಿನ ಹಿತಶತೃಗಳ ಬಗ್ಗೆ ಬಾಯಿ ಬಿಟ್ಟಿದ್ದ ಹೆಬ್ಬಾರರು ಮೊನಚು ಬಾಣಗಳನ್ನು ಬಿಡುತ್ತಲೇ ಬಂದಿದ್ದರು. ತಮ್ಮನ್ನ ಸೋಲಿಸಲು ಯಾರೇಲ್ಲ ಪ್ರಯತ್ನ ಪಟ್ಟಿದ್ದರೋ ಅಂತವರಿಗೇಲ್ಲ ತಪರಾಕಿ ನೀಡುತ್ತಲೇ ಬಂದಿದ್ರು. ಅದ್ರ ಜೊತೆ ಬಿಜೆಪಿಯ ಯಾವೊಂದೂ ಕಾರ್ಯಕ್ರಮಗಳಿಗೂ ಮೊದಲಿನಂತೆ ಭಾಗಯಾಗುತ್ತಲೇ ಇರಲಿಲ್ಲ. ಬದಲಾಗಿ, ಅಂತಹದ್ದೊಂದು ಅಂತರ ಕಾಯ್ದುಕೊಂಡಿದ್ದರು.

ಆದ್ರೆ ಇತ್ತಿತ್ತಲಾಗಿ ಬಹುತೇಕ ಸರ್ಕಾರದ ಪರವಾದ ಕಾರ್ಯಕ್ರಮಗಳಲ್ಲೇ ಶಾಸಕರು ಬ್ಯುಸಿಯಾಗಿದ್ದಾರೆ. ಜೊತೆಗೆ ಇಡೀ ಕ್ಷೇತ್ರದಾಧ್ಯಂತ ಜನರೊಂದಿಗೆ ಬೆರೆಯುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇದ್ರೊಂದಿಗೆ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ತಿದಾರೆ. ಹೀಗಾಗಿ, ಇದೇಲ್ಲ ಶಿವರಾಮ ಹೆಬ್ಬಾರರ ಮುಂದಿನ ತೀರ್ಮಾನದ ಆರಂಭಿಕ ತಯಾರಿಗಳು ಅಂತಾ ಭಾವಿಸಲಾಗ್ತಿದೆ. ಅದೇನೇ ಆದ್ರೂ ಯಲ್ಲಾಪುರ ಕ್ಷೇತ್ರದಲ್ಲಿ ಪಕ್ಷಗಳ ಪ್ರಾಬಲ್ಯಕ್ಕಿಂತ ಶಿವರಾಮ್ ಹೆಬ್ಬಾರ್ ಪ್ರಬಲರಾಗಿದ್ದಾರೆ. ಇದು ವಾಸ್ತವ.

error: Content is protected !!