ಮುಂಡಗೋಡಿನ ಯಂಗ್ ಆಂಡ್ ಎನರ್ಜಿಟಿಕ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡಸಿದ್ದಾರೆ. ಪರಿಣಾಮ ಇಬ್ಬರು ಖತರ್ನಾಕ ಅಂತರ್ ಜಿಲ್ಲಾ ಕಳ್ಳಿಯರನ್ನು ಹೆಡೆಮುರಿ ಕಟ್ಟಿದ್ದಾರೆ. ಕಳ್ಳಿಯರ ಜಾಡು ಹಿಡಿದು ದೂರದ ಶಿವಮೊಗ್ಗ ಜಿಲ್ಲೆಯಿಂದ ಕಳ್ಳಿಯರನ್ನು ತಂದು ಕೂರಿಸಿದ್ದಾರೆ. ಅಂದಹಾಗೆ ಬಂಧಿತ ಇಬ್ಬರೂ ಕಳ್ಳಿಯರ ಕರಾಮತ್ತುಗಳು ಒಂದೆರಡಲ್ಲ. ಮುಂಡಗೋಡ ಹಾಗೂ ಶಿರಸಿಯಲ್ಲಿ ಅನಾಮತ್ತಾಗಿ ಲಕ್ಷ ಲಕ್ಷ ಬೆಲೆಯ ಬಂಗಾರ, ಹಣ ದೋಚಿಕೊಂಡು ಹೋಗುವ ಹೀನ ದಂಧೆಯವರು.
ಅದು ಎರಡು ವರ್ಷದ ಹಿಂದೆ..!
ನಿಮಗೆ ನೆನಪಿರಬಹುದು, ಕಳೆದ ಎರಡು ವರ್ಷದ ಹಿಂದೆ, ಅಂದ್ರೆ, 16.05. 2022 ರಂದು, ಮುಂಡಗೋಡ ಪಟ್ಟಣದ SBI ಬ್ಯಾಂಕ್ ಬಳಿ ಅನಾಮತ್ತಾಗಿ 49 ಸಾವಿರ ರೂಪಾಯಿಗಳನ್ನು ಓರ್ವ ಯುವತಿ ಕಳೆದುಕೊಂಡು ಗೋಳಾಡುತ್ತಿದ್ದಳು. ಚಿಗಳ್ಳಿ ಗ್ರಾಮದ ಕುಮಾರಿ ಶೃತಿ ಬಶೆಟ್ಟೆಪ್ಪ ಅರಳಿಕಟ್ಟಿ ಎಂಬುವ ಯುವತಿ ಅವತ್ತು ಬ್ಯಾಂಕಿನಿಂದ 49 ಸಾವಿರ ಹಣ ಡ್ರಾ ಮಾಡಿಕೊಂಡು ಇನ್ನೇನು ತನ್ನ ಊರಿಗೆ ಹೋಗಬೇಕು ಅನ್ನುವಷ್ಟರಲ್ಲೇ ಈ ಖತರ್ನಾಕ ಕಳ್ಳಿಯರು ಹಣವನ್ನು ಎಗರಿಸಿ ಬಿಟ್ಟಿದ್ದರು. ಹೀಗಾಗಿ, ಅವತ್ತೇ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಆ ಕುರಿತು ಯುವತಿ ದೂರು ದಾಖಲಿಸಿದ್ದರು. ಹೀಗಾಗಿ, ಅವತ್ತಿನಿಂದಲೇ ಕಾರ್ಯ ಪ್ರವೃತ್ತರಾಗಿದ್ದ ಮುಂಡಗೋಡ ಪೊಲೀಸ್ರು, ಕೊನೆಗೂ ಕಳ್ಳಿಯರ ಜಾಡು ಬೇಧಿಸಿದ್ದಾರೆ. ಜೊತೆಗೆ ಕಳ್ಳಿಯರಿಂದ 20 ಸಾವಿರ ರೂ. ನಗದು ಕೂಡ ವಶ ಪಡಿಸಿಕೊಂಡಿದ್ದಾರೆ.
ಶಿರಸಿಯಲ್ಲೂ..!
ಅಸಲು, ಯಾವಾಗ ಮುಂಡಗೋಡಿನ ಕಳ್ಳತನ ಪ್ರಕರಣದ ಅಸಲೀ ಆರೋಪಿಗಳು ಪೊಲೀಸರಿಗೆ ತಗಲಾಕ್ಕೊಂಡ್ರೋ ಅದೇ ಹೊತ್ತಲ್ಲಿ, ಇವ್ರ ರಂಗಿನಾಟದ ಅಷ್ಟೂ ಮಜಕೂರಗಳೂ ಬಯಲಾಗಿವೆ. ಶಿರಸಿ ಬಸ್ ನಿಲ್ದಾಣದಲ್ಲಿ ದೋಚಿದ್ದ ಬರೋಬ್ಬರಿ 100 ಗ್ರಾಂ ಅಂದ್ರೆ 10 ತೊಲೆ ಬಂಗಾರದ ವಡವೆಗಳನ್ನೂ ವಶಕ್ಕೆ ಪಡೆಯಲಾಗಿದೆ. ಹಾಗೆ ವಶಪಡಿಸಿಕೊಂಡ ಮಾಲಿನ ಮೊತ್ತ ಬರೋಬ್ಬರಿ 6 ಲಕ್ಷ ರೂಪಾಯಿ. ಹೀಗಾಗಿ ಮುಂಡಗೋಡಿನ ನೂತನ ಪಿಎಸ್ ಐ ಮತ್ತವರ ಟೀಂ ಇಂತಹದ್ದೊಂದು ಕ್ಲಿಷ್ಟಕರ ಕೇಸನ್ನು ಬೇಧಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.
ಅಂದಹಾಗೆ, ಈ ಕೇಸಲ್ಲಿ ತಗಲ್ಲಾಕೊಂಡು ಕಳ್ಳಿಯರು ಯಾರು ಗೊತ್ತಾ..? ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಶಾಂತಿ ಅಲಿಯಾಸ್ ಕರ್ಕಿ ವೆಂಕಟರಮಣ ಕಲ್ಲವಡ್ಡರ (31), ಅದೇ ಗ್ರಾಮದ ಮೀನಾಕ್ಷಿ ಕೋಂ ಪರಮೇಶ್ ಕಲ್ಲವಡ್ಡರ್ (38) ಎಂಬುವವರೇ ಮುಂಡಗೋಡ ಪೊಲೀಸರ ಕೈಗೆ ತಗಲಾಕ್ಕೊಂಡ ಖತರ್ನಾಕ ಅಂತರ್ ಜಿಲ್ಲಾ ಕಳ್ಳಿಯರಾಗಿದ್ದಾರೆ.
ಅಸಲು, ಈ ಕಾರ್ಯಾಚರಣೆಯಲ್ಲಿ ಉತ್ತರ ಕನ್ನಡ ಎಸ್ಪಿ ಡಾ. ಎನ್. ವಿಷ್ಣುವರ್ದನ್, ಹೆಚ್ಚುವರಿ ಎಸ್ಪಿ ಎಸ್.ಟಿ ಜಯಕುಮಾರ ಹಾಗೂ ಜಗದೀಶ ನಾಯ್ಕ, ಶಿರಸಿ ಡಿವೈಎಸ್ಪಿ ಗಣೇಶ ಕೆ. ರವರ ಮಾರ್ಗದರ್ಶನದಲ್ಲಿ ಮುಂಡಗೋಡ ಪಿಐ ಬಿ.ಎಸ್ ಲೋಕಾಪುರ ನೇತೃತ್ವದಲ್ಲಿ ಪಿ.ಎಸ್.ಐಗಳಾದ ಪರಶುರಾಮ ಮಿರ್ಜಗಿ, ಹನುಮಂತ ಕುಡಗುಂಟಿ ಹಾಗೂ ಎ.ಎಸ್.ಐ ಗಂಗಾಧರ ಹೊಂಗಲ, ಮ.ಎ.ಎಸ್.ಐ ಗೀತಾ ಕಲಘಟಗಿ ಸಿಬ್ಬಂದಿಯವರಾದ ಗಣಪತಿ ಹೊನ್ನಳ್ಳಿ, ಕೋಟೇಶ್ವರ ನಾಗರವಳ್ಳಿ, ಅಣ್ಣಪ್ಪ ಬುಡಗೇರ,ಮಹಾಂತೇಶ ಮುಧೋಳ, ಶಾಲಿನಿ, ರೇಖಾ ಇವರು ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸದರಿ ಪ್ರಕರಣವನ್ನು ಪತ್ತೆ ಮಾಡಿದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಎಸ್ಪಿಯವರು ಶ್ಲಾಘಿಸಿದ್ದು ಪ್ರಶಂಸಿಸಿದ್ದಾರೆ.