ಇದು ಅಕ್ಷರಶಃ ಭಕ್ತಿಯ ಪರಾಕಾಷ್ಟೆ. ದೇವರ ಸನ್ನಿದಾನದ ಮಹತ್ವ ಸಾರುವ ಅದ್ಭುತ ಸೇವೆ. ಇಲ್ಲಿ ಹಸುಗೂಸುಗಳು ಕೆರೆಯ ನೀರಲ್ಲಿ ತೇಲುತ್ತವೆ. ಒಂಬತ್ತು ತಿಂಗಳು ಹೊತ್ತು ಹೆತ್ತ ಕಂದಮ್ಮಗಳನ್ನು ಹೆತ್ತ ತಾಯಿಯೇ ಕೆರೆಯ ನೀರಲ್ಲಿ ಹಾಕಿ ನಿರುಮ್ಮಳವಾಗಿ “ಅವ್ವಾ ನನ್ನ ಕಂದನನ್ನು ನಿನ್ನ ಮಡಿಲಲ್ಲಿ ಹಾಕಿದ್ದೇನೆ ರಕ್ಷಿಸುವ ಭಾರವು ನಿನ್ನದೇ ತಾಯಿ” ಅಂತಾ ಅಂಗಲಾಚುತ್ತಾಳೆ. ಆ ಹೆತ್ತ ತಾಯಿ ಕಣ್ಣಲ್ಲಿ ಆನಂದ ಬಾಷ್ಪಗಳು ಸುರಿಯುತ್ತವೆ. ಬಾಣಂತಿದೇವಿಯ ಮಡಿಲಲ್ಲಿ ತನ್ನ ಕಂದಮ್ಮನನ್ನು ಹಾಕಿ ಕೃತಾರ್ಥಳಾದ ಧನ್ಯತಾ ಭಾವ ಆ ತಾಯಿಯ ಕಂಗಳಲ್ಲಿ ಪ್ರಜ್ವಲಿಸುತ್ತದೆ.
ಭಕ್ತರ ಪಾಲಿನ ದೈವ..!
ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ತಾಯಿ ಎಂದೇ ಪ್ರಸಿದ್ದಿಯಾಗಿರುವ ನೂರಾರು ವರ್ಷಗಳ ಇತಿಹಾಸವುಳ್ಳ ತಾಲೂಕಿನ ಸಾಲಗಾಂವ್ ಗ್ರಾಮದ ಶಿರಸಿ- ಹುಬ್ಬಳ್ಳಿ ಹೆದ್ದಾರಿಯಲ್ಲಿರುವ ಬಾಣಂತಿದೇವಿ ಜಾತ್ರಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಪ್ರತಿವರ್ಷ ಮಕರ ಸಂಕ್ರಮಣ ದಿನದಂದು ನಡೆಯುವ ಬಾಣಂತಿದೇವಿ ಜಾತ್ರೆಗೆ ಪಟ್ಟಣ ಸೇರಿದಂತೆ ಸಾಲಗಾಂವ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಗಳು ಆಗಮಿಸಿದ್ದು, ದೇವಿಯ ಸನ್ನಿಧಿಯಲ್ಲಿ ಹೋಮ, ಹವನ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳು ನಡೆದವು. ನಂತರ ದೇವಿಗೆ ಹಣ್ಣು ಕಾಯಿ ಉಡಿ ತುಂಬುವ ಹಾಗೂ ಹರಕೆ ತೀರಿಸುವ ಕಾರ್ಯಕ್ರಮಗಳು ನಡೆದವು. ಭಕ್ತಾಧಿಗಳು ದೇವಾಲಯದ ಮುಂದೆ ಸಾಲು ಸಾಲಾಗಿ ನಿಂತು ದೇವಿಗೆ ಹಣ್ಣು ಕಾಯಿ ಸಮರ್ಪಿಸಿದ ಬಳಿಕ ವಿವಿಧ ವಿಧಾನಗಳೊಂದಿಗೆ ಹರಕೆ ತೀರಿಸಿದರು.
ಪಲ್ಲಕಿ ಉತ್ಸವ..!
ಬಾಣಂತಿ ದೇವಿ ಪಲ್ಲಕ್ಕಿ ಉತ್ಸವವು ವಾದ್ಯ ಮೇಳ ಡೊಳ್ಳು ಕುಣಿತದೊಂದಿಗೆ ಹೊರಟ ಮೆರವಣಿಗೆಯೂ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಕೆರೆಯ ದಂಡೆ ಪ್ರವೇಶಿಸಿ ಸಂಪನ್ನಗೊಳಿಸಲಾಯಿತು. ಸಂಜೆ ತೆಪ್ಪ ಪೂಜೆ ನೇರವೆರಿಸಿ ಕೆರೆಯಲ್ಲಿ ತೇಲಿ ಬಿಡಲಾಯಿತು. ಭಕ್ತರು ಪೂಜನಗೊಂಡು ಕೆರೆಯಲ್ಲಿ ತೆಲಿ ಹೋಗುವ ತೆಪ್ಪದ ಮೇಲೆ ಬಾಳೆ ಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.
ಹರಕೆ ತಿರಿಸಿದ ತಾಯಂದಿರು..!
ಅಂದಹಾಗೆ, ಮಕ್ಕಳ್ಳಿಲ್ಲದವರು ಬಾಣಂತಿ ದೇವಿ ದೇವಸ್ಥಾನಕ್ಕೆ ಬಂದು ಹರಕೆ ಹೊತ್ತರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ. ಸಂತಾನ ಪ್ರಾಪ್ತಿಯನ್ನೆ ಬೇಡುವುದು ಇಲ್ಲಿಯ ಪ್ರಾಮುಖ್ಯತೆ. ಅದರಂತೆ ಬೇಡಿಕೆ ಈಡೇರಿದ ಪೋಷಕರು ಜನಿಸಿದ ಶಿಶುವನ್ನು ಕೆರೆಯಲ್ಲಿ ಜೋಡಿ ಕುಡಿ ಬಾಳೆ ಎಲೆಯಲ್ಲಿ ಮಲಗಿಸಿ ನೀರಿನಲ್ಲಿ ತೇಲಿಸುವ ಮೂಲಕ ಹರಕೆ ತೀರಿಸಿದರು. ಪ್ರತಿ ವರ್ಷವು ಬಾಣಂತಿ ದೇವಿಯ ಆಶೀರ್ವಾದದಿಂದ ಜನಿಸುವ ನೂರಾರು ಮಕ್ಕಳನ್ನು ಜಾತ್ರಾ ಮಹೋತ್ಸವದಲ್ಲಿ ತೆಪ್ಪದಲ್ಲಿ ಬಿಡುವುದನ್ನು ಜಾತ್ರೆಯಲ್ಲಿ ಕಾಣಬಹುದು.
.