ಮುಂಡಗೋಡ ತಾಲೂಕಿನಲ್ಲಿ ಅನಧೀಕೃತ ಇಟ್ಟಿಗೆ ಭಟ್ಟಿಗಳ ಹಾವಳಿಗೆ ಕಡಿವಾಣ ಹಾಕ್ತಿನಿ ಅಂತ ಜಿದ್ದಿಗೆ ಬಿದ್ದಿದ್ದ ಮಾನ್ಯ ತಹಶೀಲ್ದಾರ್ ಸಾಹೇಬ್ರು ಅದ್ಯಾಕೋ ಏನೋ ಗಪ್ ಚುಪ್ ಆಗಿದ್ದಾರೆ. ಹೀಗಾಗಿನೇ ಮುಂಡಗೋಡ ತಾಲೂಕಿನಲ್ಲಿ ಸದ್ಯ ಮತ್ತದೇ ಅನಧೀಕೃತ ಇಟ್ಟಿಗೆ ಭಟ್ಟಿಗಳ ಭರಪೂರ ದಂಧೆ ಶುರುವಾಗಿದೆ. ಹೆಜ್ಜೆಗೊಂದರಂತೆ ಭಟ್ಟಿಗಳು ಜನ್ಮತಾಳುತ್ತಿವೆ. ಅದ್ರ ಜೊತೆ ನಡೆಯಬಾರದ ಬಹುದೊಡ್ಡ ದುರಂತವೊಂದು ಲಕ್ಕೊಳ್ಳಿಯ ಅನಧೀಕೃತ ಇಟ್ಟಿಗೆ ಭಟ್ಟಿಯಲ್ಲಿ ನಡೆದು ಹೋಗಿದೆ. ಇಂತದ್ದೇ ಇಟ್ಟಿಗೆ ಭಟ್ಟಿಯೊಂದರಲ್ಲಿ ಕಾರ್ಮಿಕರ ಪುಟ್ಟ ಮಗು ಅಮಾನುಷವಾಗಿ ಬಲಿಯಾಗಿದೆ.
ಅದು ಮೂರು ವರ್ಷದ ಕಂದ..!
ಮೂರು ವರ್ಷ ವಯಸ್ಸಿನ ಪುಟ್ಟ ಕಂದಮ್ಮ ಇಂತದ್ದೇ ಅನಧೀಕೃತ ಇಟ್ಟಿಗೆ ಭಟ್ಟಿಯಲ್ಲಿನ ನೀರಿನ ಗುಂಡಿಗೆ ಬಿದ್ದು ದಾರುಣವಾಗಿ ಪ್ರಾಣ ಕಳೆದುಕೊಂಡಿದೆ. ಇಟ್ಟಿಗೆ ಕೆಲಸಕ್ಕೆಂದು ಬಂದ ಇಂದೂರಿನ ಬಡ ಕಾರ್ಮಿಕರ ಆಕ್ರಂಧನ ಅಕ್ಷರಶಃ ಅರಣ್ಯ ರೋಧನವಾಗಿದೆ. ಯಾಕಂದ್ರೆ, ಈ ದುರಂತ ಕೇಸನ್ನೇ ಇಡಿ ಇಡಿಯಾಗಿ ಮುಚ್ಚಿ ಹಾಕುವ ಸಂಚು ನಡಿತಿದೆ ಅನ್ನೋ ಮಾಹಿತಿ ಇದೆ.
ಲಕ್ಕೊಳ್ಳಿಯಲ್ಲಿ..!
ಅಂದಹಾಗೆ, ಇದು ನಡೆದದ್ದು ಮುಂಡಗೋಡ ತಾಲೂಕಿನ ಲಕ್ಕೊಳ್ಳಿಯಲ್ಲಿ. ಇಂದೂರ ಗ್ರಾಮದ ಮಾನ್ವಿತಾ ಮಲ್ಲಿಕಾರ್ಜುನ ಹೊಸೂರ ಎಂಬ ಮೂರು ವರ್ಷದ ಹೆಣ್ಣು ಮಗು ದುರಂತ ಸಾವು ಕಂಡಿದೆ. ಮಗುವಿನ ತಾಯಿ ಇಟ್ಟಿಗೆ ಕೆಲಸಕ್ಕೆ ಹೋದಾಗ, ಜೊತೆಯಲ್ಲಿ ಮಗುವನ್ನು ಕರೆದುಕೊಂಡು ಹೋಗಿದ್ದಾಳೆ. ತನ್ನ ಕೆಲಸದಲ್ಲಿ ತಾಯಿ ನಿರತರಾಗಿದ್ದಾಗ, ಮಗು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾಳೆ. ಕೂಡಲೇ ಮುಂಡಗೋಡ ತಾಲೂಕು ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬರಲಾಗಿದೆ. ಅಷ್ಟರಲ್ಲಿ ಮಗು ಸಾವು ಕಂಡಿತ್ತು ಅಂತಾ ಹೇಳಲಾಗಿದೆ. ಆದರೂ, ಆಸ್ಪತ್ರೆಯ ಸಿಬ್ಬಂದಿ ಮಗುವನ್ನು ಹುಬ್ಬಳ್ಳಿ ಕಿಮ್ಸ್ ಗೆ ಕಳಿಸಿಕೊಟ್ಟಿದ್ದಾರೆ. ಸತ್ತ ಮಗುವನ್ನು ಹುಬ್ಬಳ್ಳಿ ಕಿಮ್ಸ್ ಗೆ ಕರೆದೊಯ್ದ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ.
ಯಮರೂಪಿ ನೀರಿನ ತೊಟ್ಟಿ..!
ಇಟ್ಟಿಗೆ ಭಟ್ಟಿಯೊಂದರಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಅನುಸರಿಸದೇ ತೆರೆದ ನೀರಿನ ತೊಟ್ಟಿ ನಿರ್ಮಿಸಿದ್ದಾರೆ. ಆ ನೀರಿನ ತೊಟ್ಟಿಯ ಮೇಲೆ ಏನಾದ್ರೂ ರಕ್ಷಣಾ ಕವಚ ಹಾಕಿ ಅಂತಾ ಕಾರ್ಮಿಕರು ಅದೇಷ್ಟೇ ಹೇಳಿದ್ರೂ ಇಟ್ಟಿಗೆ ಭಟ್ಟಿಯ ಮಾಲೀಕ ಕ್ಯಾರೇ ಅಂದಿಲ್ಲವಂತೆ ಹೀಗಾಗಿ ಇಂತಹದ್ದೊಂದು ದುರಂತ ನಡೆದು ಹೋಗಿದೆ. ಸದ್ಯ ಆ ಇಟ್ಟಿಗೆ ಭಟ್ಟಿಯ ಮಾಲೀಕ ಈ ಇಡೀ ಕೇಸನ್ನೇ ಮುಚ್ಚಿ ಹಾಕಲು ಏನೇಲ್ಲ ಬೇಕೊ ಅದನ್ನೇಲ್ಲ ಮಾಡಲು ರೆಡಿಯಾಗಿದ್ದಾನಂತೆ.
ತಹಶೀಲ್ದಾರ್ರೇ ಎಲ್ಲಿಗೆ ಬಂತು ನಿಮ್ಮ ಕ್ರಮ..?
ಅಸಲು, ಮುಂಡಗೋಡ ತಾಲೂಕಿನಾಧ್ಯಂತ ಯಾರ ಹಂಗಿಲ್ಲದೇ, ಯಾವ ಭಯವಿಲ್ಲದೇ ಎಲ್ಲೆಂದರಲ್ಲಿ ಅನಧೀಕೃತ ಇಟ್ಟಿಗೆ ಭಟ್ಟಿಗಳು ತಲೆ ಎತ್ತಿವೆ. ಇಂತಹ ಅನಧೀಕೃತ ಭಟ್ಟಿಗಳ ವಿರುದ್ಧ ನಮ್ಮ ಮುಂಡಗೋಡಿನ ತಹಶೀಲ್ದಾರ್ ಸಾಹೇಬ್ರು ಇನ್ನಿಲ್ಲದ ಕ್ರಮಗಳ ಭರವಸೆ ನೀಡಿದ್ರು. ಜೆಸಿಬಿಗಳ ಮೂಲಕ ಘರ್ಜನೆಯನ್ನೂ ಮಾಡಿದ್ರು. ನಿಜಕ್ಕೂ ಈ ಬಾರಿ ತಾಲೂಕಿನಲ್ಲಿ ಅಂತಹ ಇಟ್ಟಿಗೆ ಭಟ್ಟಿಗಳ ಸದ್ದೇ ಅಡಗುತ್ತೆ ಅಂತಲೇ ಭಾವಿಸಲಾಗಿತ್ತು. ಆದ್ರೆ, ಈಗ ಇಡೀ ತಾಲೂಕಿನಲ್ಲಿ ಮತ್ತದೇ ದಂಧೆ ಯಾರ ಭಯವಿಲ್ಲದೇ ನಿರಾತಂಕವಾಗಿ ನಡೆಯುತ್ತಿದೆ. ಹೀಗಿದ್ದರೂ ತಹಶೀಲ್ದಾರ ಸಾಹೇಬ್ರ ಘರ್ಜನೆ ಮಾತ್ರ ಅದ್ಯಾಕೋ ಏನೋ ತಣ್ಣಗಾಗಿದೆ. ಬಹುಶಃ ಅದೇಲ್ಲ ಆರಂಭಿಕ ಶೂರತ್ವ ಬಿಡ್ರಿ ಅಂತಾ ಜನ ಮಾತಾಡಿಕೊಳ್ತಿದಾರೆ.
ಸಾವಿರ ಪ್ರಶ್ನೆ..!
ತಾಲೂಕಿನ ಲಕ್ಕೊಳ್ಳಿ, ಸನವಳ್ಳಿ, ಕಾತೂರು ಗ್ರಾಮ ಪಂಚಾಯತಿ ವ್ಯಾಪ್ತಿ ಸೇರಿದಂತೆ ನೂರಕ್ಕೂ ಹೆಚ್ಚು ಅನಧೀಕೃತ ಇಟ್ಟಿಗೆ ಭಟ್ಟಿಗಳು ಲಂಗು ಲಗಾಮಿಲ್ಲದೇ ಮತ್ತೆ ದಂಧೆ ಶುರುವಿಟ್ಟಿವೆ. ಅದ್ರಲ್ಲೂ, ಸನವಳ್ಳಿ ಭಾಗದಲ್ಲಿ ನಡೆಯುವ ಅನಧೀಕೃತ ಇಟ್ಟಿಗೆ ಭಟ್ಟಿಗಳಿಗೆ ಸನವಳ್ಳಿ ಜಲಾಶಯದ ನೀರು ಬಳಸುವ ಸಾಧ್ಯತೆಯೂ ಇದೆ. ಅಲ್ಲದೇ ಕೆಲವು ಕಡೆ ಬಾಲಕಾರ್ಮಿಕರನ್ನೂ ಕೂಡ ಈ ದಂಧೆಯಲ್ಲಿ ಬಳಸಲಾಗ್ತಿದೆ ಅನ್ನೋ ಆರೋಪಗಳಿವೆ. ಹೀಗಾಗಿ, ದಂಡಾಧಿಕಾರಿಗಳ ಕಣ್ಮುಂದೆಯೇ ಮತ್ತೆ ಅನಧೀಕೃತ ಇಟ್ಟಿಗೆ ಭಟ್ಟಿಗಳು ದಂಧೆ ಶುರುವಿಟ್ಟರೂ ಅದ್ಯಾಕೆ ತಣ್ಣಗಿದ್ದಾರೆ..? ಇದಕ್ಕೆ ಕಾರಣವಾದ್ರೂ ಏನು..? ಇದೇಲ್ಲ ಪ್ರಶ್ನೆ ಮುಂಡಗೋಡಿಗರು ಕೇಳುತ್ತಿದ್ದಾರೆ.