ಶಿರಸಿ ಸಮೀಪ ಭೀಕರ ಅಪಘಾತವಾಗಿದೆ. ಕಾರು ಹಾಗೂ ಬಸ್ ನಡುವೆ ಡಿಕ್ಕಿಯಾಗಿ, ಮದುವೆಗಾಗಿ ಬಂದಿದ್ದ ಒಂದೇ ಕುಟುಂಬದ ನಾಲ್ವರು ಹಾಗೂ ಕಾರು ಚಾಲಕ ಸೇರಿ ಒಟ್ಟೂ ಐವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಶಿರಸಿ ತಾಲೂಕಿನ ಬಂಡಲ್ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟವರು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನವರು ಎಂದು ತಿಳಿದು ಬಂದಿದೆ. ಇವ್ರು ಶಿರಸಿಯಲ್ಲಿ ನಡೆಯುವ ಮದುವೆಗೆ ತೆರಳುತ್ತಿದ್ದರು ಎನ್ನಲಾಗಿದ್ದು, ಒಂದೇ ಕುಟುಂಬದ ನಾಲ್ವರು ಹಾಗೂ ಕಾರು ಚಾಲಕ ಸೇರಿ ಐವರು ಸ್ಥಳದಲ್ಲೇ ಮೃತಪಟ್ಟಿರುವರಾಗಿದ್ದಾರೆ.
ಅಪಘಾತದಲ್ಲಿ ರಾಮಕೃಷ್ಣ ಬಾಬುರಾವ್(71), ವಿದ್ಯಾಲಕ್ಷ್ಮೀ ರಾಮಕೃಷ್ಣ(65), ಪುಷ್ಪಾ ಮೋಹನ ರಾವ್ (62), ಸುಹಾಸ್ ಗಣೇಶ ರಾವ್(30) ಹಾಗೂ ಕಾರು ಚಾಲಕ ಚೆನ್ನೈನ ಅರವಿಂದ(30) ಎಂಬುವವರೆ ಮೃತಪಟ್ಟವರು ಎಂದು ತಿಳಿದು ಬಂದಿದೆ. ಇವರೆಲ್ಲರೂ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯುವ ಮದುವೆಗೆ ಆಗಮಿಸುತ್ತಿದ್ದರು ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಐವರಲ್ಲಿ ನಾಲ್ವರು ಒಂದೇ ಕುಟುಂಬದವರು. ಮತ್ತೊಬ್ಬರು ಚೆನ್ನೈ ಮೂಲದ ವ್ಯಕ್ತಿ ಎಂದು ಗೋತ್ತಾಗಿದೆ. ಬಸ್ಸಿನ ಚಾಲಕನಿಗೂ ಕೂಡಾ ಗಾಯವಾಗಿದ್ದು,ಚಾಲಕ ಅಪಾಯದಿಂದ ಪಾರಾಗಿದ್ದಾರೆ.
ಇನ್ನು KSRTC ಬಸ್ ನಲ್ಲಿ 60 ಕ್ಕೂ ಅಧಿಕ ಪ್ರಯಾಣಿಕರಿದ್ದರು. ಕೆಲವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.