ದಾವಣಗೆರೆ ನಗರ ಹೊರಭಾಗದ ರಾ.ಹೆದ್ದಾರಿ 48 ರಲ್ಲಿ ಭೀಕರ ಅಪಘಾತವಾಗಿದೆ. ಕಾರ್ ಮತ್ತು ಟ್ರ್ಯಾಕ್ಟರ್ ಮಧ್ಯೆ ಸಂಭವಿಸಿರುವ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಏಳು ಜನರಿಗೆ ಗಂಭೀರ ಗಾಯವಾಗಿದೆ.

ಓವರ್ ಟೇಕ್ ಮಾಡುತ್ತಿದ್ಧಾಗ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಗೆ ಕಾರ್ ಡಿಕ್ಕಿಯಾಗಿದೆ. ಪರಿಣಾಮ ಕಾರ್ ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಹಾವೇರಿ ರಾಣೆಬೆನ್ನೂರು ಮೂಲದ ಅರುಣಕುಮಾರ್ ಶೆಟ್ಟರ್ ಹಾಗೂ ವಿಜಯಕ್ಕ ಶೆಟ್ಟರ್ ಮೃತ ದುರ್ದೈವಿಗಳು. ಇನ್ನುಳಿದಂತೆ ಚಾಲಕ ಸೇರಿ ಏಳು ಜನರಿಗೆ ಗಂಭೀರ ಗಾಯವಾಗಿದೆ, ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದ ಶೆಟ್ಟರ್ ಕುಟುಂಬದ ಸದಸ್ಯರು, ತುಮಕೂರಿನಿಂದ ಮದುವೆ ಮುಗಿಸಿಕೊಂಡು ರಾಣೆಬೆನ್ನೂರಿಗೆ ತೆರಳುತ್ತಿದ್ದರು. ಈ ವೇಳೆ ದಾವಣಗೆರೆ ಹೊರಭಾಗದ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ವಿದ್ಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!