ಮುಂಡಗೋಡ ತಾಲೂಕಿನ ಸನವಳ್ಳಿಯಲ್ಲಿ ಗ್ರಾಮ ಪಂಚಾಯತಿ ನೌಕರ (ಪ್ರಭಾರ ಪಿಡಿಓ) ನೇಣಿಗೆ ಶರಣಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸೋಮವಾರ ಬೆಳ್ಳಂ ಬೆಳಿಗ್ಗೆ ತಮ್ಮದೇ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಹೇಳಲಾಗ್ತಿದೆ.
ಸನವಳ್ಳಿ ಗ್ರಾಮದ ರಾಮಲಿಂಗ ಶಿವಲಿಂಗಪ್ಪ ಕಳಸಗೇರಿ(39) ಎಂಬುವವರೇ ನೇಣಿಗೆ ಶರಣಾಗಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೊನ್ನತ್ತಿ ಗ್ರಾಮ ಪಂಚಾಯತಿಯ ಪ್ರಭಾರ ಪಿಡಿಓ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ರವಿವಾರ ರಜೆ ಇದ್ದ ಕಾರಣ ಸ್ವಗ್ರಾಮಕ್ಕೆ ಬಂದಿದ್ದರು. ಆದ್ರೆ, ಇಂದು ಏಕಾಏಕಿ ತೋಟದಲ್ಲೇ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮೃತರಿಗೆ ಎರಡು ಪುತ್ರಿಯರು ಇದ್ದು ಈಗ ಅನಾಥವಾಗಿವೆ. ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಮುಂಡಗೋಡ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.