ಬೆಳಗಾವಿಯಲ್ಲಿ ಇಂದಿನಿಂದ 12ನೇ ಚಳಿಗಾಲದ ಅಧಿವೇಶನ ಶುರು, ಹೇಗಿದೆ ಗೊತ್ತಾ ಭದ್ರತೆ..!

ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲ ಅಧಿವೇಶನ ಆರಂಭವಾಗಲಿದೆ. ಕುಂದಾನಗರಿ 12ನೇ ಅಧಿವೇಶನಕ್ಕೆ ಸಜ್ಜುಗೊಂಡಿದೆ. ಹೀಗಾಗಿ, ಬೆಳಗಾವಿ ನಗರ ಸೇರಿದಂತೆ, ಸುವರ್ಣ ವಿಧಾನಸೌಧದ ಸುತ್ತಮುತ್ತ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ.

ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಅವರ ನೇತೃತ್ವದಲ್ಲಿ ಭದ್ರತೆ ಏರ್ಪಡಿಸಲಾಗಿದೆ. ಅಧಿವೇಶನದ ಭದ್ರತೆಗೆ ಐದು ಸಾವಿರ ಜನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 2 ಡಿಸಿಪಿ, 5ಜನ ಎಸ್‌ಪಿ, 12 ಎಎಸ್‌ಪಿ, 42 ಡಿವೈಎಸ್‌ಪಿ, 100 ಸಿಪಿಐ, 250 ಪಿಎಸ್ಐ, ಮೂರುವರೆ ಸಾವಿರ ಪೇದೆಗಳು, 35 ಕೆಎಸ್ಆರ್‌ಪಿ ತುಕಡಿ, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ನಿಯೋಜನೆ ಮಾಡಲಾಗಿದೆ.

ಇನ್ನು, ಸುವರ್ಣ ವಿಧಾನಸೌಧದ ಒಂದು ಕಿಮೀ ವ್ಯಾಪ್ತಿಯಲ್ಲಿ ಸುತ್ತಮುತ್ತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೇ 250ಕ್ಕೂ ಹೆಚ್ಚು ಕಡೆಗಳಲ್ಲಿ ಸಿಸಿ ಕ್ಯಾಮರಾಗಳ ಕಣ್ಗಾವಲು ಅಳವಡಿಸಲಾಗಿದೆ.

ಮೊದಲ ದಿನವೇ ಪ್ರತಿಭಟನೆ ಬಿಸಿ..!
ಅಂದಹಾಗೆ, ಬೆಳಗಾವಿಯಲ್ಲಿ ಇಂದಿನಿಂದ ಚಳಿಗಾಲ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ, ಅಧಿವೇಶನದ ಮೊದಲ ದಿನವೇ ಸರ್ಕಾರಕ್ಕೆ ರೈತರ ಬೃಹತ್ ಪ್ರತಿಭಟನೆ ಬಿಸಿ ತಟ್ಟುವ ಸಾಧ್ಯತೆ ಇದೆ. ಬರ ನಿರ್ವಹಣೆ ವಿಫಲ, ಕೃಷಿ ಕಾಯ್ದೆ ವಾಪಸಾತಿ, ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ ಇದೆ. ಇದಕ್ಕೂ ಮೊದಲು, ಕೊಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಚನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಸುವರ್ಣ ಸೌಧದ ವರೆಗೆ ಸಾಗಿ ಬರಲಿದೆ.

ಇನ್ನು ರೈತರ ಪ್ರತಿಭಟನೆ ಜತೆಗೆ ವಿವಿಧ ನಾಲ್ಕು ಸಂಘಟನೆಗಳಿಂದ ಹೋರಾಟ ನಡೆಯಲಿದೆ. ಮುಂಡರಗಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆಯಿಂದ ಗದಗ ಹರಪನಹಳ್ಳಿ ರೈಲು ಮಾರ್ಗ ಮಂಜೂರು ಹಿನ್ನೆಲೆಯಲ್ಲಿ, ಗದಗ ಜಿಲ್ಲೆಯ ಬಗರ್ ಹುಕುಂ ಹಕ್ಕು ಪತ್ರ ನೀಡಲು ಆಗ್ರಹಿಸಿ ಹೋರಾಟ ನಡೆಯಲಿದೆ. ಅದ್ರಂತೆ, ಸಫಾಯಿ ಕರ್ಮಚಾರಿ ಸಮಿತಿಯಿಂದ ವಿವಿಧ ಬೇಡಿಕೆಗೆ ಆಗ್ರಹಿಸಿ ಹೋರಾಟ, ವಿಶೇಷಚೇತನರ ಶಾಲೆಗಳ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘದಿಂದ ಹೋರಾಟ, ವೇತನ ಅನುದಾನ, ಸೇವಾ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ.

error: Content is protected !!