ಮುಂಡಗೋಡ ತಾಲೂಕಿನ ಅರಶಿಣಗೇರಿಯ ಗೋವಿನಜೋಳ ಬೆಳೆದ ರೈತರು ಭಾರೀ ಮೋಸಕ್ಕೆ ಬಲಿಯಾಗ್ತಿದಾರಾ..? ತೀವ್ರ ಬರದ ಮದ್ಯೆಯೂ ಸಾಲಸೋಲ ಮಾಡಿ ಗೋವಿನಜೋಳ ಬೆಳೆದ ರೈತನಿಗೆ ಸದ್ಯ ವ್ಯಾಪಾರದ ಹೆಸ್ರಲ್ಲಿ ಮೋಸ ಮಾಡ್ತಿದಾರೆ ಜನ. ಅರಶಿಣಗೇರಿಯಲ್ಲಿ ಇವತ್ತು ಅಂತಹ ಹಲಾಲುಕೋರ ವ್ಯಾಪಾರಿಗಳ ಏಜೆಂಟರುಗಳನ್ನು ರೈತರೇ ಹಿಡಿದು ಜಾಡಿಸಿದ್ದಾರೆ. ಅಂದಹಾಗೆ, ಬರೋಬ್ಬರಿ ಒಂಬತ್ತು ಜನ ದಂಧೆಕೋರರು ರೆಡ್ ಹ್ಯಾಂಡಾಗೇ ರೈತರಿಗೆ ಸಿಕ್ಕು, ಮೋಸ ಬಯಲಿಗೆ ಬರುತ್ತಿದ್ದಂತೆ ಪರಾರಿಯಾಗಿದ್ದಾರೆ. ಅಸಲು, ಇವ್ರೇಲ್ಲ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರಂತೆ…!

ಅಂದಹಾಗೆ, ಭಾರಿ ವ್ಯವಸ್ಥಿತವಾಗಿ ನಡಿಯೋ ಈ ಮಹಾಮೋಸದಿಂದ ಅನ್ನದಾತ ಕಂಗೆಟ್ಟು ಹೋಗಿದ್ದಾನೆ. ಕ್ವಿಂಟಾಲುಗಟ್ಟಲೇ ಗೋವಿನಜೋಳವನ್ನು ಮೋಸದಿಂದಲೇ ಕದಿಯುವ ವ್ಯಾಪಾರಿಗಳು ಸದ್ಯ ಅರಶಿಣಗೇರಿ ರೈತರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅಂದಹಾಗೆ, ಈ ಖತರ್ನಾಕ ದಂಧೆಕೋರರು ಹೇಗೇಲ್ಲ ಮೋಸ ಮಾಡ್ತಾರೆ ಗೊತ್ತಾ..?

ಹಮಾಲರಿಂದಲೇ ಕೃತ್ಯ..?
ಅಸಲು, ಮುಂಡಗೋಡ ತಾಲೂಕಿನಾದ್ಯಂತ ಸದ್ಯ ಗೋವಿನಜೋಳ ಬೆಳೆದ ರೈತ ತಾನು ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರಾಟ ಮಾಡಿ ಅಷ್ಟೊ ಇಷ್ಟೊ ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿದ್ದಾನೆ. ಮೊದಲೇ ಬರದ ಪರಿಸ್ಥಿತಿ ಅದ್ರಲ್ಲೂ ಮಳೆಯಿಲ್ಲದೇ ತೀವ್ರ ಕುಸಿತ ಕಂಡಿರೋ ಫಸಲನ್ನು ಉಳಿಸಿಕೊಳ್ಳೋದೇ ಕಠಿಣ ಸವಾಲಾಗಿತ್ತು. ಹೀಗಿರುವಾಗ ಅಳಿದುಳಿದ ಗೋವಿನ ಜೋಳದ ಫಸಲನ್ನು ಮಾರಾಟ ಮಾಡುತ್ತಿರೋ ಅನ್ನದಾತನಿಗೆ ವ್ಯಾಪಾರಿಗಳು ಭಾರೀ ಗೋಲ್ ಮಾಲ್ ಮಾಡುತ್ತಿದ್ದಾರೆ.

ಶಿಕಾರಿಪುರದವರಂತೆ..!
ಅಂದಹಾಗೆ, ಈ ಮೋಸ ಮಾಡುವ ದಂಧೆಕೋರರಿಗೆ ಆಯಾ ಗ್ರಾಮಗಳಲ್ಲಿ ಒಬ್ಬೊಬ್ಬ ಏಜೇಂಟರು ಇರುತ್ತಾನೆ. ಅಂತಹ ಏಜೇಂಟರರ ಮೂಲಕ ರೈತರನ್ನು ಸಂಪರ್ಕಿಸೋ ವ್ಯಾಪಾರಿಗಳು, ಸ್ಥಳೀಯವಾಗಿಯೇ ಧಾನ್ಯ ಸಾಗಿಸಲು ಲಾರಿಗಳನ್ನು ಬಾಡಿಗೆ ಪಡೆದಿರುತ್ತಾರೆ‌. ಆದ್ರೆ, ಅಂತಹ ಲಾರಿಗಳಿಗೆ, ವಾಹನಗಳಿಗೆ ಹಮಾಲರು ಮಾತ್ರ ಅಲ್ಲಿಂದಲೇ ಬಂದಿರುತ್ತಾರೆ. ದೂರದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರು ಅಂತಾ ಹೇಳಲಾಗ್ತಿರೋ ವ್ಯಾಪಾರಿಗಳು ರೈತರಿಗೆ ಭಾರೀ ಮೋಸ ಮಾಡ್ತಿದಾರೆ ಅಂತಾ ರೈತರು ಆರೋಪಿಸ್ತಿದಾರೆ.

ಹೇಗೆ ಮಾಡ್ತಾರೆ ಮೋಸ..?
ಅಷ್ಟಕ್ಕೂ ದೂರದ ಶಿವಮೊಗ್ಗ ಜಿಲ್ಲೆಯಿಂದ ಬಂದು ಇಲ್ಲಿ ಹಳ್ಳಿಗಳ ರೈತರಿಗೆ ಮಹಾಮೋಸ ಮಾಡುತ್ತಿರೋ ವ್ಯಾಪಾರಿಗಳು ಹೇಗೆಲ್ಲ ಕರಾಮತ್ತು ಮಾಡ್ತಾರೆ ಗೊತ್ತಾ..? ಗೋವಿನಜೋಳ ಚೀಲದಲ್ಲಿ ತುಂಬಲು ಏನಿಲ್ಲವೆಂದ್ರೂ 9 ರಿಂದ 10 ಜನ ಹಮಾಲರು ಬಂದಿರ್ತಾರೆ. ಆ ಹೊತ್ತಲ್ಲೇ ಮೋಸದ ಜಾಲ ಬೀಸುವ ಹಮಾಲರು 50 ಚೀಲ ಗೋವಿನಜೋಳದಲ್ಲಿ ಏನಿಲ್ಲವೆಂದರೂ 12 ರಿಂದ 15 ಚೀಲ ಎಗರಿಸಿರ್ತಾರೆ ಅನ್ನೋದು ರೈತರ ಆರೋಪ. ಖಾಲಿ ಚೀಲಗಳನ್ನು ಗೋವಿನಜೋಳದ ರಾಶಿಯಲ್ಲಿ ಬಚ್ಚಿಟ್ಟು, ಮಹಾಮೋಸ ಮಾಡುವ ದಂಧೆಕೋರರು ಇವತ್ತು ಅರಶಿಣಗೇರಿ ರೈತರ ಕೈಗೆ ಸರಿಯಾಗೇ ತಗಲಾಕ್ಕೊಂಡಿದಾರೆ.

ಪೊಲೀಸರು ಎಂಟ್ರಿ..!
ಅರಶಿಣಗೇರಿ ರೈತರ ಕೈಯಲ್ಲಿ ಸಿಕ್ಕು ಇನ್ನೇನು ಧರ್ಮದೇಟು ಬೀಳುವ ಹಂತದಲ್ಲಿಯೇ ಒಂಬತ್ತೂ ಜನ ಹಮಾಲರು ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದಾರೆ. ಹೀಗಾಗಿ, ಅಲ್ಲಿ ಬಂದಿದ್ದ ಲಾರಿಯನ್ನು ತಡೆದು ರೈತರು ನಿಲ್ಲಿಸಿಕೊಂಡಿದ್ದಾರೆ. ಅಲ್ದೆ, ತಕ್ಷಣವೇ 112 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಿಗೆ ನಡೆದ ಸಂಗತಿ ತಿಳಿಸಿದ್ದಾರೆ. ಹೀಗಾಗಿ, ದೂರು ನೀಡಿದ್ರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ರೈತರಿಗೆ ತಿಳಿಸಿದ್ದಾರೆ.

ಒಟ್ನಲ್ಲಿ ಮೊದಲೇ ಬರದಿಂದ ಕಂಗೆಟ್ಟಿರೋ ಅನ್ನದಾತನಿಗೆ ವ್ಯಾಪಾರಿಗಳ ಮಾಹಾಮೋಸಗಳು ಗಾಯದ ಮೇಲೆ ಬರೆ ಎಳೆದಂತಾಗಿದೆ. ತಕ್ಷಣವೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ. ಅಂದಾಗ ಮಾತ್ರ ಅನ್ನದಾತ ಬದುಕಬಹುದು.

error: Content is protected !!