ಸವಣೂರು: ಸರ್ಕಾರದಿಂದ ಮಂಜೂರಾದ ಮನೆಯ ಜಿಪಿಎಸ್ ಮಾಡಿಸಿಕೊಡಲು ಲಂಚ ಸ್ವೀಕರಿಸಿದ ಗ್ರಾಮ ಪಂಚಾಯತಿ ಸದಸ್ಯ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.
ಸವಣೂರು ತಾಲ್ಲೂಕಿನ ಕಾರಡಗಿ ಗ್ರಾಮದಲ್ಲಿ ಘಟನೆ ನಡೆದಿದೆ.

ಕಾರಡಗಿ ಗ್ರಾಮದ ದಾದಾಪೀರ ಮಹ್ಮದಗೌಸ್ ಲೋಹಾರ ಎಂಬುವವರಿಗೆ ಮನೆ ಕಟ್ಟಿಸಿಕೊಳ್ಳಲು ಸರ್ಕಾರದಿಂದ 5 ಲಕ್ಷ ಹಣ ಮಂಜೂರಾಗಿತ್ತು. ಹೀಗಾಗಿ, ಕಾರಡಗಿ ಗ್ರಾಮ ಪಂಚಾಯಿತಿ ಸದಸ್ಯ ಮಹ್ಮದ್ ಜಾಫರ್ ಸಂಶಿ, ಫಲಾನುಭವಿ ದಾದಪೀರನ ಮನೆಯ ಜಿಪಿಎಸ್ ಮಾಡಿಸಿಕೊಡಲು ರೂ 40 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದ. ಮುಂಗಡವಾಗಿ 20 ಸಾವಿರ ರೂ. ಲಂಚದ ಹಣವನ್ನು ಪಡೆದುಕೊಳ್ಳುವಾಗ ಯಶಸ್ವಿಯಾಗಿ ಲೋಕಾಯುಕ್ತ ಪೊಲೀಸರು ಬಲೆಗೆ ಬೀಳಿಸಿದ್ದಾರೆ.

ಪ್ರಕರಣದ ತನಿಖೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಬಿ. ಪಿ. ಚಂದ್ರಶೇಖರ ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಆಂಜನೇಯ ಎನ್‌.ಎಚ್, ಮುಸ್ತಾಕ್ ಅಹ್ಮದ್ ಶೇಖ, ಮಂಜುನಾಥ ಪಂಡಿತ್ ಪಿ. ಎನ್, ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿ ಎಮ್ ಕೆ ನದಾಫ, ಟಿ ಇ ತಿರುಮಲೆ, ಬಿ ಎಮ್‌ ಕರ್ಜಗಿ, ಎಮ್ ಕೆ ಲಕ್ಷ್ಮೀಶ್ವರ, ಆನಂದ ತಳಕಲ್ಲ, ಎಸ್‌ಎನ್ ಕಡಕೋಳ, ಎ ಜಿ ಶೆಟ್ಟರ, ಬಸವರಾಜ ಸಂಕಣ್ಣನವರ ರವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿರುತ್ತಾರೆ. ಸದರಿ ಆರೋಪಿತರನ್ನು ಕಾರಡಗಿ ಗ್ರಾಮದ ದ್ಯಾಮವ್ವನಪಾದಗಟ್ಟೆ ಹತ್ತಿರ ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರೆದಿದೆ.

error: Content is protected !!