ಪಕ್ಷಿಧಾಮದಲ್ಲಿ ಕಳ್ಳರ ಪಾಲಾಗಿದ್ದ ಶ್ರೀಗಂಧದಮರ ಎರಡಲ್ಲ ಕಣ್ರಿ; ಬರೋಬ್ಬರಿ ಐದು..!? ಅಷ್ಟಕ್ಕೂ ಈ ಮಸಲತ್ತಿನ ಸೂತ್ರದಾರಿಗಳು ಯಾರ್ಯಾರು ಗೊತ್ತಾ..?



ಅತ್ತಿವೇರಿ ಪಕ್ಷಿಧಾಮದಲ್ಲಿ ಶ್ರೀಗಂಧದ ಮರ ಕಳ್ಳತನ ಪ್ರಕರಣ ನಾವೇಲ್ಲ ಅಂದುಕೊಂಡಷ್ಟು ಸುಲಭವಾಗಿಲ್ಲ ಅನಿಸ್ತಿದೆ. ಮೇಲ್ನೋಟಕ್ಕೆ ಹೇಳೋದಾದ್ರೆ ಇಲ್ಲಿನ ಅಧಿಕಾರಿಗಳೇ ಇಲಾಖೆಯ ಕಣ್ಣಿಗೆ ಮಣ್ಣೆರೆಚಿದ್ದು ಬಹುತೇಕ ನಿಚ್ಚಳವಾದಂತಾಗಿದೆ. ಯಾಕಂದ್ರೆ, ನಾವು ನಿನ್ನೆ ತಮ್ಮೇದುರು ಬಯಲು ಮಾಡಿದ್ದ ಶ್ರೀಗಂಧದ ಮರಗಳ್ಳತನ ಕೇಸಿನಲ್ಲಿ ನಮಗೆ ಕೆವಲ ಎರಡೇ ಶ್ರೀಗಂಧದ ಮರ ದೋಚಿದ್ದಾರೆ ಅನ್ನೋ ಮಾಹಿತಿಯಿತ್ತು. ಆದ್ರೆ, ಅಲ್ಲಿನ ಅಸಲೀಯತ್ತೇ ಬೇರೆಯದ್ದಿದೆ.

ಎರಡಲ್ಲ, ಬರೋಬ್ಬರಿ ಐದು..?
ಅಸಲು, ಕರ್ನಾಟಕದ ವಿಖ್ಯಾತ ಅತ್ತಿವೇರಿ ಪಕ್ಷಿಧಾಮದಲ್ಲಿ ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟದಲ್ಲಿ ಬಲಿಯಾಗಿದ್ದು ಕೇವಲ ಎರಡು ಶ್ರೀಗಂಧದ ಮರವಲ್ಲ ಬದಲಾಗಿ ಬರೋಬ್ಬರಿ 5 ಮರಗಳು ಕಳ್ಳತನವಾಗಿರೋ ಮಾತುಗಳು ಕೇಳಿಬಂದಿವೆ. ಜೊತೆಗೆ ಮತ್ತೊಂದು ಮರ ಅರ್ದಕ್ಕರ್ದ ಕಟ್ ಆಗಿ ಅರೆಜೀವವಾಗಿದೆ. ದುರಂತ ಅಂದ್ರೆ ಇಲ್ಲಿನ ಅಧಿಕಾರಿಗಳು ಘಟನೆ ನಡೆದ ದಿನ ಕಳ್ಳತನವಾಗಿದ್ದ ಐದು ಮರಗಳ ಪೈಕಿ ಕೇವಲ ಎರಡು ಮರಗಳಿಗಷ್ಟೇ ಕೇಸು ದಾಖಲಿಸಿಕೊಂಡಿದ್ದಾರೆ. ಇನ್ನುಳಿದ ಮೂರು ಮರಗಳ ಬಗ್ಗೆ ಹೊರಜಗತ್ತಿಗೆ ಮಾಹಿತಿ ನೀಡದೇ ಮುಚ್ಚಿಹಾಕಲು ಮಾಡಬಾರದ ಎಲ್ಲಾ ಕುತಂತ್ರಗಳನ್ನೂ ಮಾಡಿ ಹಾಕಿದ್ದಾರೆ. ಆದ್ರೆ, ಪಬ್ಲಿಕ್ ಫಸ್ಟ್ ನ್ಯೂಸ್ ಇಡೀ ಘಟನೆಯನ್ನು ಬಯಲು ಮಾಡಿದಾಗ ನಿನ್ನೆಯಷ್ಟೇ ಉಳಿದ ಮರಗಳ ಕಳ್ಳತನದ ಬಗ್ಗೆ FIR ದಾಖಲಿಸಿದ್ದಾರೆ ಅನ್ನೋ ಮಾಹಿತಿ ಇದೆ. ಆದ್ರೆ, ಅದೂ ಕೂಡ ಗ್ಯಾರಂಟಿಯಿಲ್ಲ.

ಮುಚ್ಚಿ ಹಾಕುವ ಉದ್ದೇಶವೇನು..?
ಹಾಗೆ ನೋಡಿದ್ರೆ, ಕಳೆದ ಅಕ್ಟೋಬರ್ 7 ರಂದು ಮುಂಡಗೋಡಿನ ತಾಲೂಕಾಸ್ಪತ್ರೆಯ ಪಕ್ಕದಲ್ಲಿ ಶ್ರೀಗಂಧದ ಮರಗಳ್ಳತನವಾಗಿತ್ತು. ಅವತ್ತೇ ಅತ್ತಿವೇರಿಯ ಪಕ್ಷಿಧಾಮದಲ್ಲೂ ಕಳ್ಳರು ಬರೋಬ್ಬರಿ 5 ಮರಗಳನ್ನು ಕಡಿದು ಹೊತ್ತೊಯ್ದಿದ್ದರಂತೆ. ಜೊತೆಗೆ ಮತ್ತೊಂದು ಮರವನ್ನೂ ಅರ್ದ ಕಟ್ ಮಾಡಿ ಅಲ್ಲೇ ಬಿಟ್ಟು ಹೋಗಿದ್ದರು. ಇದು ಇಲ್ಲಿನ ಅಧಿಕಾರಿಗಳಿಗೆ ಗೊತ್ತಾಗಿ, ಕಳುವಾಗಿದ್ದ ಐದೂ ಮರಗಳ ಸಂಬಂಧ ಕೇಸ್ ದಾಖಲಿಸಬೇಕಿತ್ತು. ಆದ್ರೆ, ಅದ್ಯಾವ ಕಾರಣಕ್ಕೋ ಗೊತ್ತಿಲ್ಲ ಅವತ್ತು ಕೇವಲ ಎರಡೇ ಎರಡು ಮರಗಳ್ಳತನ ಅಂತಾ ಶರಾ ಬರೆದು ಕೇಸು ದಾಖಲಿಸಿಕೊಂಡು ಕೈ ತೊಳೆದುಕೊಂಡಿದ್ದರು. ಉಳಿದಂತೆ ಮೂರು ಮರಗಳ ಬಗ್ಗೆ ಚಕಾರವನ್ನೂ ಎತ್ತದೇ ಇಡಿ ಇಡಿಯಾಗಿ ಪ್ರಕಣವನ್ನೇ ಮುಚ್ಚಿ ಹಾಕಲು ಯತ್ನಿಸಿದ್ದರು ಎನ್ನಲಾಗಿದೆ.

ಅದು ನಿರ್ಬಂಧಿತ ಪ್ರದೇಶ..!
ಅಷ್ಟಕ್ಕೂ ಅತ್ತಿವೇರಿ ಪಕ್ಷಿಧಾಮ ಅಂದ್ರೆ ಸಾಮಾನ್ಯವಲ್ಲ. ದೇಶಾಧ್ಯಂತ ಹೆಸರುವಾಸಿ. ಇಲ್ಲಿ ಪಕ್ಷಿಗಳನ್ನು ವೀಕ್ಷಿಸಲೆಂದೇ ಸಾವಿರಾರು ಜನ ಪ್ರವಾಸಿಗರು ಬರ್ತಾರೆ. ಈ ಕಾರಣಕ್ಕಾಗೇ ಸರ್ಕಾರ ಇಲ್ಲಿ ಪಕ್ಷಿಗಳು ಹಾಗೂ ಸುಂದರ ಪರಿಸರವನ್ನು ಸಂರಕ್ಷಣೆ ಮಾಡಲು ಕೋಟಿ ಕೋಟಿ ಲೆಕ್ಕದಲ್ಲಿ ಖರ್ಚು ಮಾಡಿದೆ, ಮಾಡುತ್ತಿದೆ. ಅಷ್ಟೇ ಅಲ್ಲದೇ ಈ ವನ್ಯಜೀವಿ ಘಟಕದಲ್ಲಿ ಸಾಕಷ್ಟು ನಿಬಂಧನೆ, ನಿರ್ಬಂಧಗಳನ್ನು ಹೇರಲಾಗಿದೆ. ಇಲ್ಲಿನ ಹಸಿರ ಸಂಪತ್ತಿನ ಜೊತೆ ಅಮೂಲ್ಯ ಜೀವಗಳ ರಕ್ಷಣೆಯೂ ನಮ್ಮೇಲ್ಲರ ಹೊಣೆಯಾಗಿದೆ. ಈ ಕಾರಣಕ್ಕಾಗಿಯೇ ಸರ್ಕಾರ ಅರಣ್ಯ ಇಲಾಖೆಯ ಮೂಲಕ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ನೇಮಿಸಿದೆ. ಹೀಗಿದ್ದಾಗಲೂ ಇಂತದ್ದೇ ನಿರ್ಬಂಧಿತ ಪ್ರದೇಶದಲ್ಲಿ ಕಳ್ಳರು ಅನಾಮತ್ತಾಗಿ ಬಂದು ಐದೈದು ಮರಗಳನ್ನು ಕಡಿದು ಕೊಂಡೊಯ್ತುತ್ತಾರೆ ಅಂದ್ರೆ ಏನರ್ಥ..?

RFO ಸಾಹೇಬ್ರೇ ನೀವೂ ಅಲ್ಲೇ ಇದ್ರಾ..?
ಅಸಲು, ಈ ಘಟನೆಯ ಬಗ್ಗೆ ವಿಚಾರಣೆಗಿಳಿದಾಗ ನಮಗೆ ಇನ್ನೊಂದು ಸಂಗತಿ ಗೊತ್ತಾಗಿದೆ. ಘಟನೆ ನಡೆದ ದಿನ ನಮ್ಮ ಮುಂಡಗೋಡ RFO ಸಾಹೇಬ್ರು ಅದೇ ಅತ್ತಿವೇರಿ ಪಕ್ಷಿಧಾಮದ ಗೆಸ್ಟ್ ಹೌಸಿನಲ್ಲಿ ಸುಖ ನಿದ್ರೆಯಲ್ಲಿದ್ರಂತೆ‌. ನಿಜ ಅಂದ್ರೆ, ನೂತನವಾಗಿ ಮುಂಡಗೋಡಿಗೆ ಬಂದಿರೋ RFO ಸಾಹೇಬ್ರು ಈಗ ಬಹುತೇಕ ಪಕ್ಷಿಧಾಮದ ಗೆಸ್ಟ್ ಹೌಸಿನಲ್ಲೇ ವಾಸ್ತವ್ಯ ಮಾಡ್ತಿದಾರೆ. ಹಳೆಯ RFO ಸುರೇಶ ಕಳ್ಳೊಳ್ಳಿ ಇನ್ನೂ ಸರ್ಕಾರಿ ಮನೆ ಖಾಲಿ ಮಾಡದ ಹಿನ್ನೆಲೆ ನೂತನ RFO ರವರು ಅತ್ತಿವೇರಿ ಪಕ್ಷಿಧಾಮದಲ್ಲೇ ವಾಸ ಮಾಡ್ತಿದಾರೆ. ಹೀಗಿದ್ದಾಗ, ಘಟನೆ ನಡೆದ ದಿನವೂ ಸಾಹೇಬ್ರು ಪಕ್ಷಿಧಾಮದಲ್ಲೇ ಇದ್ದರೂ ಇದೇಲ್ಲ ಅರಿವಿಗೆ ಬರಲಿಲ್ಲವಾ..? ಅಥವಾ ಗೊತ್ತಿದ್ದೂ, ಗೊತ್ತಿಲ್ಲದಂತೆ ಬೆಪ್ಪಗೆ ಕುಳಿತ್ರಾ..? ಅವ್ರೇ ಹೇಳಬೇಕಿದೆ‌.

ಯಾರ ಪಾಲು ಎಷ್ಟೇಷ್ಟು..?
ಅಷ್ಟಕ್ಕೂ, ಪಕ್ಷಿಧಾಮದ ಉದ್ಯಾನವನದ ಪಕ್ಕದಲ್ಲೇ, ಸಂಪೂರ್ಣ ತಂತಿ ಬೇಲಿಯಿಂದ ಸಂರಕ್ಷಿಸಲ್ಪಟ್ಟ ಪ್ರದೇಶದಲ್ಲೇ ಬೆಲೆಬಾಳುವ ಶ್ರೀಗಂಧದ ಮರಗಳ‌ ಮಾರಣಹೋಮ ಆಗತ್ತೆ ಅಂದ್ರೆ ಇಲ್ಲಿ ಇಲಾಖೆಯ ಅಧಿಕಾರಿಗಳು ಅದೇನು ಕಡಿದು ಗುಡ್ಡೆ ಹಾಕ್ತಿದಾರೆ..? ಅದೂ ಹೋಗಲಿ, ಘಟನೆ ನಡೆದರೂ ಆ ಘಟನೆಯನ್ನೇ ಇಡಿ ಇಡಿಯಾಗಿ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದು ಯಾಕೆ..? ಇದ್ರಲ್ಲಿ ಯಾರ್ಯಾರ ಪಾಲು ಎಷ್ಟಿದೆ..? ಇಲ್ಲಿನ ಹಿರಿಯ ಅಧಿಕಾರಿಗಳ ಅಣತಿಯಂತೆ ಕಿರಿಯ ಅಧಿಕಾರಿಗಳು ಮಸಲತ್ತು ಮಾಡಿದ್ರಾ..? ಅಥವಾ ಹಿರಿಯ ಅಧಿಕಾರಿಗಳ ಗಮನಕ್ಕೇ ಬಾರದೇ ಅಲ್ಲಿದ್ದವರೇ ತಿಪ್ಪೆ ಸಾರಿಸಿದ್ರಾ..? ಅರ್ಥವೇ ಅಗ್ತಿಲ್ಲ.

ಇದು ತಪ್ಪಲ್ಲವಾ ಸಾಹೇಬ್ರೆ..?
ಈ ಘಟನೆಯಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ದಾರಿ ತಪ್ಪಿಸಿ ಬರೋಬ್ಬರಿ ಮೂರು? ಶ್ರೀಗಂಧದ ಮರಗಳ ದರೋಡೆಯನ್ನೇ ಮುಚ್ಚಿಡಲಾಗಿದೆ. ವಿಪರ್ಯಾಸ ಅಂದ್ರೆ, ಈ ಘಟನೆಯನ್ನು ಮುಚ್ಚಿ ಹಾಕಲು ಅಲ್ಲಿರೋ ಶ್ರೀಗಂಧದ ಮರಗಳ ಟೊಂಗೆಗಳನ್ನ ಇದೇ ಅಧಿಕಾರಿಗಳು ಕತ್ತರಿಸಿ ಬೀಸಾಡಿದ್ದಾರೆ. ಅಂದ್ರೆ, ಇಲ್ಲಿ ಕಳ್ಳರ ಕೈಯಲ್ಲಿ ಸಿಕ್ಕು ಸತ್ತು ಹೋದ ಮರಗಳ ನೋವು ಒಂದೆಡೆಯಾದ್ರೆ, ಕಾಯಲು ಇದ್ದ ಅಧಿಕಾರಿಗಳೇ ಮತ್ತೊಂದಿಷ್ಟು ಮರಗಳ ಟೊಂಗೆ ಕಡಿದು ನರಳುವಂತೆ ಮಾಡಿದ್ದಾರೆ. ಹಾಗಿದ್ರೆ, ಶ್ರೀಗಂಧದ ಮರಗಳ ಟೊಂಗೆ ಕಡಿಯೋದೂ ಕೂಡ ಅಪರಾಧವಲ್ಲವಾ..? ಹಾಗಿದ್ರೆ, ಇದೆನ್ನೇಲ್ಲ ಯಾರು ಪ್ರಶ್ನಿಸೋದು..? ತಪ್ಪಿತಸ್ಥರು ಅಂತಾ ಯಾರನ್ನ ಕರಿಯೋದು..? ಹಾಗೆ ನೋಡಿದ್ರೆ, ಮರಗಳನ್ನು ದರೋಡೆ ಮಾಡಿಕೊಂಡು ಹೋದ ಕಳ್ಳರು ಮಾಡಿದ್ದಷ್ಟೇ ತಪ್ಪು, ಇಲ್ಲಿನ ಅಧಿಕಾರಿಗಳೂ ಮಾಡಿದ್ದಾರೆ ಅಂತಾಯ್ತು ಅಲ್ವಾ..? ಹಾಗಿದ್ದರೆ ಕ್ರಮವೇನು..? ಇದಷ್ಟೇ ಪ್ರಶ್ನೆ ಈಗ ಪ್ರಜ್ಞಾವಂತರು ಕೇಳ್ತಿದಾರೆ..

ಅಸಲು, ಇದೇ ಪಕ್ಷಿಧಾಮದಲ್ಲಿನ ಇನ್ನೂ ಹಲವು ಅದ್ವಾನಗಳ ಬಗ್ಗೆ ಕೇಳೋದಿದೆ. ಕೇಳೇ ಕೇಳ್ತಿವಿ. ಆದ್ರೆ, ಇದೇಲ್ಲದರ ನಡುವೆ ನಮ್ಮೇಲ್ಲ ಪ್ರಶ್ನೆಗಳಿಗೆ ಉತ್ತರಿಸೋರು ಯಾರು..?

error: Content is protected !!