ಮುಂಡಗೋಡ: ತಾಲೂಕಾಸ್ಪತ್ರೆಯ ಆರೋಗ್ಯಧಿಕಾರಿ ಕಾರ್ಯಾಲಯದ ಪಕ್ಕದಲ್ಲೇ ಶ್ರೀಗಂಧದ ಮರಗಳು ಕಳ್ಳತನವಾಗಿದೆ. ಬೆಲೆಬಾಳುವ ಎರಡು ಶ್ರೀಗಂಧದ ಮರಗಳನ್ನು ಅನಾಮತ್ತಾಗಿ ಎಗರಿಸಿಕೊಂಡು ಹೋಗಿದ್ದಾರೆ ಕಳ್ಳರು. ಕೋಟೆ ಕೊಳ್ಳೆ ಹೊಡೆದ ಮೇಲೆ ಅದೇಂತದ್ದೋ ಬಾಗಿಲು ಹಾಕಿದ್ರು ಅಂತಾರಲ್ಲ ಹಾಗೆ, ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲಾ ಮುಗಿದ ಮೇಲೆ ಓಡೋಡಿ ಬಂದಿದ್ದಾರೆ. ಮತ್ತದೇ ತನಿಖೆಗಿಳಿದಿದ್ದಾರೆ.
ಅದು ಜನವಸತಿ ಏರಿಯಾ..!
ಅಸಲು, ಇವಾಗ ಶ್ರೀಗಂಧದ ಮರ ಕಳ್ಳತನ ಮಾಡಿಕೊಂಡು ಹೋಗಿರೋ ಜಾಗ ಇದೆಯಲ್ಲ, ಅದು ಬಹುತೇಕ ಜನವಸತಿಯ ಜಾಗವೇ, ಹೀಗಿದ್ದಾಗಲೂ ಯಾರಿಗೂ ಒಂಚೂರು ಗೊತ್ತಾಗದ ಹಾಗೆ ಮರ ಕಡಿದು ಎಗರಿಸಿಕೊಂಡು ಹೋಗೋದು ಅಂದ್ರೆ ಹೇಗೆ..? ಅಷ್ಟಕ್ಕೂ, ಇಲ್ಲಿ ಪ್ರೊಫೇಶನಲ್ ಕಳ್ಳರದ್ದೇ ಗ್ಯಾಂಗ್ ಕೃತ್ಯ ಮಾಡಿದೆಯಾ..? ಅಥವಾ ಗೊತ್ತಿದ್ದವರೇ ಕಡಿದು ಸಾಗಿಸಿದ್ರಾ..? ಅಧಿಕಾರಿಗಳು ತಿಳಿಸಬೇಕಿದೆ.
ಹಿಂದೆಯೂ ನಡೆದಿತ್ತು..!
ಹಾಗೆ ನೋಡಿದ್ರೆ, ತಾಲೂಕಿನಲ್ಲಿ ಹಿಂದೆಯೂ ಇಂತಹ ಶ್ರೀಗಂಧದ ಮರಗಳ್ಳತನ ಪ್ರಕರಣಗಳು ಸಾಕಷ್ಟು ನಡೆದಿವೆ. ಮನೆ ಪಕ್ಕದಲ್ಲೇ ಇದ್ದ ಮರಗಳನ್ನು ಕಣ್ಣು ಮುಚ್ಚಿ ತೆಗೆಯೋದ್ರಲ್ಲಿ ಎತ್ತಂಗಡಿ ಮಾಡಿದ್ದ ಅದೇಷ್ಟೋ ಘಟನೆಗಳೂ ನಡೆದಿವೆ. ಮುಂಡಗೋಡಿನ APMC ಆವರಣದಲ್ಲಿ ಇದೇ ಮಾದರಿಯಲ್ಲಿ ಕಳ್ಳತನವಾಗಿತ್ತು. ದುರಂತ ಅಂದ್ರೆ ನಮ್ಮ ಮುಂಡಗೋಡಿನ ಅರಣ್ಯ ಇಲಾಖೆ ಅಧಿಕಾರಿಗಳ ಕಂಪೌಂಡಿನ ಒಳಗೆಯೇ ಬೆಳೆದಿದ್ದ ಶ್ರೀಗಂಧದ ಮರಗಳನ್ನೂ ಬಿಟ್ಟಿರಲಿಲ್ಲ ಕಳ್ಳರು. ಅಂದ್ರೆ, ನೀವೇ ಅರ್ಥ ಮಾಡಿಕೊಳ್ಳಿ, ಕಳ್ಳರ ಕರಾಮತ್ತು ಅದೇಷ್ಟರ ಮಟ್ಟಿಗೆ ಇದೆ ಅಂತಾ.
ಸದ್ಯ..!
ಮುಂಡಗೋಡಿನ ತಾಲೂಕಾಸ್ಪತ್ರೆಯ ಜಾಗದಲ್ಲಿ ಮತ್ತದೇ ಶ್ರೀಗಂಧದ ಮರಗಳ್ಳತನ ನಡೆದು ಹೋಗಿದೆ. ಸುಮಾರು 12 ರಿಂದ 15 ವರ್ಷಗಳ ಮರಗಳು ಇದಾಗಿದ್ದು, ಎರಡು ಮರಗಳನ್ನು ಕತ್ತರಿಸಿಕೊಂಡು ಹೋಗಿದ್ದಾರೆ. ಯಥಾರೀತಿ ಮತ್ತದೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದು, ದುರ್ಬಿನ್ನು ಹಾಕಿ, ಮತ್ತದೇ ತನಿಖೆ ಅದು ಇದು ಅಂತೇಲ್ಲ ಮಾಡಿಕೊಂಡು ಹೋಗಿದ್ದಾರೆ. ಮುಂದೇನೋ ಗೊತ್ತಿಲ್ಲ. ಅಂತೂ ಇಂತೂ ಮತ್ತೆ ಶ್ರೀಗಂಧದ ಮರಗಳ್ಳರ ತಂಡ ಮತ್ತೆ ಸಕ್ರೀಯವಾಗಿರೋ ಸೂಚನೆ ಸಿಕ್ಕಿದೆ. ಬಗ್ಗು ಬಡಿಯದೇ ಹೋದ್ರೆ ತಾಲೂಕಿನಲ್ಲಿ ಅಷ್ಟೋ ಇಷ್ಟೋ ಉಳಿದಿರೋ ಅಮೂಲ್ಯ ಶ್ರೀಗಂಧದ ಸಂಪತ್ತು ಕಳ್ಳರ ಪಾಲಾಗೋದ್ರಲ್ಲಿ ಸಂಶಯವೇ ಇಲ್ಲ.