ಮುಂಡಗೋಡ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಬಿಜೆಪಿ ಐಟಿ ವಿಭಾಗದಿಂದ ಅವಮಾನ ಆಗಿದೆ ಅಂತಾ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮುಂಡಗೋಡಿನಲ್ಲಿಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿನಾಥ್ ಗಾಂವ್ಕರ್ ಹಾಗೂ ಮಾಜಿ ಶಾಸಕ ವಿ.ಎಸ್.ಪಾಟೀಲರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿನಾಥ್ ಗಾಂವ್ಕರ್ ಬಿಜೆಪಿ ವಿರುದ್ಧ ಗುಡುಗಿದ್ರು.10 ತಲೆಗಳಿರುವ ರಾಹುಲ್ ಗಾಂಧಿ ಪೋಸ್ಟರ್ ಅನ್ನು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದೆ. ಈ ಪೋಸ್ಟ್ ಅನ್ನು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ, ಅಮಿತ್ ಮಾಳವಿಯಾ ಅವರು ತಮ್ಮ ಎಕ್ಸ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ, ರಾಹುಲ್ ಗಾಂಧಿಯವರನ್ನು ಅವಹೇಳನ ಮಾಡಿದ್ದಕ್ಕಾಗಿ ಅವ್ರು ಆಕ್ರೋಶ ವ್ಯಕ್ತ ಪಡಿಸಿದ್ರು.
“ಇಂಡಿಯಾ” ಒಕ್ಕೂಟ ರಚನೆಯಾದಾಗಿನಿಂದ ಬಿಜೆಪಿಯವರು ಭಯಭೀತರಾಗಿದ್ದಾರೆ. ರಾಹುಲ್ ಗಾಂಧಿಯವರನ್ನು ರಾವಣ ಎಂದು ಕರೆಯುವುದು ಅವರ ಹತಾಶೆಯನ್ನು ತೋರಿಸುತ್ತದೆ. ರಾಹುಲ್ ಗಾಂಧಿ ಏನೆಂಬುದು ದೇಶದ ಜನರಿಗೆ ಗೊತ್ತಿದೆ, ಜನರ ನೋವು ಅವರಿಗೆ ಅರ್ಥವಾಗಿದೆ. ಅವರು ಮಣಿಪುರದ ಜನರೊಂದಿಗೆ, ತರಕಾರಿ ಮಾರಾಟಗಾರರು ಮತ್ತು ಬೈಕ್ ಮೆಕಾನಿಕ್‌ಗಳೊಂದಿಗೆ ಬೆರೆತು ಶಕ್ತಿ ತುಂಬಿದರು. ಬಿಜೆಪಿ ಎಷ್ಟು ಭಯಪಡುತ್ತಿದೆ ಎಂಬುದನ್ನು ಈ ಬೆಳವಣಿಗೆ ತೋರಿಸುತ್ತದೆ. ಇದು ನಾಚಿಕೆಗೇಡಿನ ಸಂಗತಿ ಅಂತಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀವ್ರ ವಾಗ್ದಾಳಿ ನಡೆಸಿದ್ರು.
ಇನ್ನು ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಶಾಸಕ ವಿ.ಎಸ್. ಪಾಟೀಲ್, ಇಂಡಿಯಾ ಒಕ್ಕೂಟಕ್ಕೆ ಹೆಚ್ಚು ಹೆಚ್ಚು ಜನಬೆಂಬಲ ಸಿಗುತ್ತಿರುವುದರಿಂದ ಮತ್ತು ರಾಹುಲ್ ಗಾಂಧಿಯವರ ಜನಪ್ರಿಯತೆಯನ್ನು ಸಹಿಸದ ಬಿಜೆಪಿ, ಇನ್ನಷ್ಟು ಹತಾಶವಾಗಿದೆ. ಪ್ರಧಾನಿಯವರು ಇಂಡಿಯಾ ಒಕ್ಕೂಟವನ್ನು ತುಕ್ಕು ಹಿಡಿದ ಕಬ್ಬಿಣ, ‘ಘಮಾಂಡಿಯಾ’ (ಅಹಂಕಾರಿ) ಮೈತ್ರಿ ಎಂದು ಕರೆಯಲು ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ಹೋಲಿಸಲು ಇದೂ ಕೂಡ ಒಂದು ಕಾರಣವಾಗಿದೆ. ದೇಶದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ಅಲೆ ಇರುವ ಕಾರಣಕ್ಕೆ ಬಿಜೆಪಿಗೆ ಭಯ ಶುರುವಾಗಿದೆ. ಇದೆಲ್ಲವೂ ಬಿಜೆಪಿ ಮತ್ತು ಪ್ರಧಾನಿಯವರ ಆತಂಕವನ್ನು ತೋರಿಸುತ್ತದೆ ಅಂತಾ ಆಕ್ರೋಶ ಹೊರಹಾಕಿದ್ರು.
ಈ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.