ಮುಂಡಗೋಡ ತಾಲೂಕಿನ ನ್ಯಾಸರ್ಗಿಯಲ್ಲಿ ನಡೆದ ದಲಿತ ವ್ಯಕ್ತಿಯ ಹತ್ಯೆ ಪ್ರಕರಣ ತೀವ್ರ ಸಂಚಲನ ಸೃಷ್ಟಿಸಿದೆ. ಪ್ರಕರಣ ಸಂಬಂಧ ಇಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮೃತನ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಅಲ್ದೆ, ಪರಿಹಾರದ ಚೆಕ್ ವಿತರಿಸಿದ್ರು.
ಅಮಾನುಷ ಘಟನೆ..!
ಕಳೆದ ಸೆ. 17 ರಂದು ನಡೆದಿದ್ದ ಜಗಳದಲ್ಲಿ ನ್ಯಾಸರ್ಗಿಯ ದಲಿತ ವ್ಯಕ್ತಿ ಮಂಜುನಾಥ್ ಬೋವಿ ವಡ್ಡರ ಮೇಲೆ ಅದೇ ಗ್ರಾಮದ ಮತ್ತೋರ್ವ ವ್ಯಕ್ತಿ ಕುರುಬರ್ ಮಾರಣಾಂತಿಕ ಹಲ್ಲೆ ಮಾಡಿದ್ದ, ಹೀಗಾಗಿ, ತೀವ್ರ ಗಾಯಗೊಂಡಿದ್ದ ಮಂಜುನಾಥನನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ 13 ದಿನಗಳ ನಂತ್ರ ಹಲ್ಲೆಗೊಳಗಾಗಿದ್ದ ವ್ಯಕ್ತಿ ಮಂಜುನಾಥ ಸಾವನ್ನಪ್ಪಿದ್ದ.
ಎಸ್ಪಿ, ಡಿಸಿ ಭೇಟಿ..!
ಯಾವಾಗ, ಹಲ್ಲೆಗೊಳಗಾಗಿ ತೀವ್ರ ಗಾಯಗೊಂಡಿದ್ದ ದಲಿತ ವ್ಯಕ್ತಿ ಸಾವನ್ನಪ್ಪಿದ ವಿಷಯ ತಿಳಿದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ನ್ಯಾಸರ್ಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅದ್ರಂತೆ ಇವತ್ತು ಡಿಸಿ ಗಂಗೂಬಾಯಿ ಮಾನಕರ್ ಭೇಟಿ ನೀಡಿ ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಅಲ್ದೆ ತುರ್ತು ಪರಿಹಾರವಾಗಿ 50 ಸಾವಿರ ರೂ. ಪರಿಹಾರ ಹಾಗೂ 6,500 ರೂ. ಮೃತನ ಪತ್ನಿಗೆ ಮಶಾಸನ ಸೇರಿ ಒಟ್ಟೂ 56 ಸಾವಿರ ರೂ. ಚೆಕ್ ವಿತರಿಸಿದ್ರು. ಅಲ್ದೆ ಕುಟುಂಬದ ಓರ್ವರಿಗೆ ಸರ್ಕಾರಿ ಕೆಲಸ ನೀಡುವ ಕುರಿತು ಮಾಹಿತಿ ನೀಡಿದ್ರು. ಈ ವೇಳೆ ಗ್ರಾಮಸ್ಥರಿಗೆ ಜಾತಿ ವೈಷಮ್ಯ ಮರೆತು,ಅನ್ಯೋನ್ಯತೆಯಿಂದ ಇರುವಂತೆ ಮನವಿ ಮಾಡಿದ್ರು.
ಈ ವೇಳೆ ಶಿರಸಿ ಸಹಾಯಕ ಆಯುಕ್ತ ದೇವರಾಜ್, ತಹಸಿಲ್ದಾರ್ ಶಂಕರ ಗೌಡಿ, ತಾ.ಪo.ಅಧಿಕಾರಿ ವೈ.ಟಿ.ದಾಸನಕೊಪ್ಪ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಿದ್ದಯ್ಯನವರ, ಸಿಪಿಐ ಬಿ.ಎಸ್. ಲೋಕಾಪುರ, ಪಿಎಸ್ಐ. ಯಲ್ಲಾಲಿಂಗ ಕುನ್ನೂರ, ಗ್ರಾಮ ಪಂಚಾಯಿತಿ ಅಧಿಕಾರಿ, ಭೋವಿ ಸಮುದಾಯದ ಮುಖಂಡರು ಹಾಜರಿದ್ದರು.